
ಪಣಜಿ (ಡಿ.23): ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ಉದ್ದೇಶಿತ ದೇಶವ್ಯಾಪಿ ರಾಷ್ಟ್ರೀಯ ಪೌರತ್ವ ನೋಂದಣಿ (NRC)ಗೆ ಭಾರತದಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. NRC ವಿಚಾರವಾಗಿ ಈಗಾಗಲೇ ಮಿತ್ರಪಕ್ಷಗಳು ಹಿಂದೇಟು ಹಾಕಿರುವ ಬೆನ್ನಲ್ಲೇ, ಬಿಜೆಪಿಗೆ ಪಕ್ಷದೊಳಗಿಂದಲೇ ಅಪಸ್ವರ ಕೇಳಿಬಂದಿದೆ.
ನಮ್ಮ ರಾಜ್ಯದಲ್ಲಿ NRCಯ ಅವಶ್ಯಕತೆಯೇ ಇಲ್ಲ, ಎಂದು ಹೇಳುವ ಮೂಲಕ ಗೋವಾ ಸಿಎಂ ಪ್ರಮೋದ್ ಸಾವಂತ್ ಭಿನ್ನರಾಗ ಹಾಡಿದ್ದಾರೆ.
ಗೋವಾ ಜನತೆ CAA ಬಗ್ಗೆ ಆತಂಕ ಪಡಬೇಕಾಗಿಲ್ಲ. ಕಾಂಗ್ರೆಸ್ ಸುಖಾಸುಮ್ಮನೆ ಪೋರ್ಚುಗೀಸ್ ಪಾಸ್ಪೋರ್ಟ್ ಹೊಂದಿರುವ ಸಾವಿರಾರು ಮಂದಿಯನ್ನು ಬೆದರಿಸುತ್ತಿದೆ ಎಂದು ಸಾವಂತ್ ಹೇಳಿದ್ದಾರೆ.
NRC ಬಗ್ಗೆ ಪ್ರತಿಕ್ರಿಯೆ ನೀಡಿದ ಸಾವಂತ್, ಗೋವಾದಲ್ಲಿ ಅದರ ಅವಶ್ಯಕತೆಯೇ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | 'ಪೌರತ್ವ ಕಾಯ್ದೆ ಕಟ್ಟುಕತೆಗೆ ಕಿವಿಗೊಡಬೇಡಿ; ಮುಸ್ಲಿಮರಿಗೆ ತೊಂದರೆಯಾಗಲ್ಲ'..
ಸುಮಾರು 450 ವರ್ಷ ಪೋರ್ಚುಗೀಸ್ ವಸಾಹತು ಆಗಿದ್ದ ಗೋವಾಗೆ ಸ್ವಾತಂತ್ರ್ಯ ಲಭಿಸಿದ್ದು 1961ರಲ್ಲಿ. ಗೋವಾ ಬಿಟ್ಟು ಹೋಗುವ ಸಂದರ್ಭದಲ್ಲಿ ಪೋರ್ಚುಗೀಸ್ ಸರ್ಕಾರವು ಗೋವಾ ಮಂದಿಗೆ ಆ ದೇಶದ ಪೌರತ್ವ ಪಡೆಯುವ ಆಯ್ಕೆಯನ್ನು ಕೂಡಾ ನೀಡಿತ್ತು.
ಸಾವಿರಾರು ಮಂದಿ ಆ ಅವಕಾಶವನ್ನು ಪಡೆದು, ಪೋರ್ಚುಗಲ್‌ಗೆ, ಇಂಗ್ಲಂಡ್‌ಗೆ ವಲಸೆ ಹೋಗಿದ್ದಾರೆ. ಒಂದು ಅಂದಾಜಿನ ಪ್ರಕಾರ, ಸುಮಾರು 30000 ಗೋವಾ ಮಂದಿ ಪೋರ್ಚುಗೀಸ್ ಪಾಸ್ಪೋರ್ಟ್ ಪಡೆದು ಇಂಗ್ಲಂಡ್‌ನಲ್ಲಿ ನೆಲೆಸಿದ್ದಾರೆ.
ಬಿಜೆಪಿಯ NRC ನೀತಿಗೆ ಈಗಾಗಲೇ ಮಿತ್ರಪಕ್ಷಗಳು ಕೂಡಾ ವಿರೋಧ ವ್ಯಕ್ತಪಡಿಸಿವೆ. ಜೆಡಿಯುನ ನಿತೀಶ್ ಕುಮಾರ್ ಕೂಡಾ ಈ ಬಗ್ಗೆ ಸುಳಿವು ನೀಡಿದ್ದರು. CAA ಪರವಾಗಿದ್ದ ಒಡಿಶಾ ಸಿಎಂ ನವೀನ್ ಪಟ್ನಾಯಕ್, ಆಂಧ್ರ ಪ್ರದೇಶದ ಜಗನ್ ಮೋಹನ್ ರೆಡ್ಡಿ ಕೂಡಾ NRCಯನ್ನು ವಿರೋಧಿಸಿದ್ದಾರೆ. ಕೇರಳ, ಪಶ್ಚಿಮ ಬಂಗಾಳ, ಪಂಜಾಬ್, ಹಾಗೂ ಇನ್ನಿತರ ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳು ಕೂಡಾ CAAಯನ್ನು ವಿರೋಧಿಸುತ್ತಿವೆ.
ಇದನ್ನೂ ಓದಿ | NRC, CAA ತಡೆಯಲು 2 ದಾರಿ ತೋರಿಸಿದ ಚುನಾವಣಾ ಚಾಣಕ್ಯ
ಭಾರೀ ವಿವಾದಕ್ಕೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯು ಕಳೆದ ಡಿ.11ರಂದು ಅಂಗೀಕರಿಸಿದೆ. ಅದರ ಬೆನ್ನಲ್ಲೇ, ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಸುಮಾರು 20ಕ್ಕಿಂತಲೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ