ಮಂಕಿಪಾಕ್ಸ್‌, ಕೋವಿಡ್ - 19 ಮಾತ್ರವಲ್ಲ ಈ ರೋಗಗಳ ಬಗ್ಗೆಯೂ ಎಚ್ಚರವಿರಲಿ..!

By BK Ashwin  |  First Published Jul 24, 2022, 2:10 PM IST

ಕೋವಿಡ್ - 19, ಮಂಕಿಪಾಕ್ಸ್ ಹೊರತುಪಡಿಸಿ ದೇಶದ ಯುವ ಜನತೆಗೆ ಎನ್ಸೆಫಲೈಟಿಸ್‌, ಡೆಂಗ್ಯೂ, ಹಂದಿ ಜ್ವರ, ಟೊಮ್ಯಾಟೋ ಫೀವರ್‌ ಸೇರಿ ಇತರೆ ರೋಗಗಳು ಹರಡಬಹುದಾಗಿದೆ. ಈ ಹಿನ್ನೆಲೆ, ನಿಮ್ಮ ಮಕ್ಕಳನ್ನು ಅಪಾಯಕ್ಕೆ ದೂಡುವ ಈ ರೋಗಗಳ ಬಗ್ಗೆ ಇಲ್ಲಿದೆ ವಿವರ..


ಕಳೆದ 2 - 3 ವರ್ಷಗಳಿಂದ ಜಗತ್ತು ಕೋವಿಡ್ - 19 ಸಾಂಕ್ರಾಮಿಕದಿಂದ ನಲುಗುತ್ತಲೇ ಇದೆ. ಈ ಸೋಂಕು ಇನ್ನೇನು ಕಡಿಮೆಯಾಗುತ್ತಿದೆ ಎಂಬ ನಿಟ್ಟುಸಿರ ಬೆನ್ನಲ್ಲೇ ಮಂಕಿಪಾಕ್ಸ್‌ ಎಂಬ ವೈರಾಣು ಸಹ ಜಗತ್ತಿನ ಹಲವು ದೇಶಗಳಿಗೆ ಕಾಲಿಟ್ಟಿದೆ. ಭಾರತದಲ್ಲಿ ಸಹ ಮಂಕಿಪಾಕ್ಸ್‌ನ 4 ಪ್ರಕರಣಗಳು ಈವರೆಗೆ ಪತ್ತೆಯಾಗಿದೆ. ಇದೇ ರೀತಿ, ಇತರೆ ಕೆಲ ರೋಗಗಳು ಸಹ ದೇಶ ಸೇರಿ ಜಗತ್ತಿನಾದ್ಯಂತ ಹರಡುತ್ತಿದ್ದು, ಈ ಎಲ್ಲ ರೋಗಗಳು ಮಕ್ಕಳಿಗೆ ಸಹ ಹರಡಬಹುದಾಗಿದೆ. ಈ ಹಿನ್ನೆಲೆ ಪೋಷಕರಿಗೆ ಈ ಬಗ್ಗೆ ಆತಂಕ ಆರಂಭವಾಗಿರಬಹುದು. 

ಹೌದು, ಆಫ್ರಿಕಾದಲ್ಲಿ ಶುರುವಾದ ಮಂಕಿಪಾಕ್ಸ್‌ ವೈರಾಣುವಿನ ಹಾವಳಿ ಇಡೀ ಜಗತ್ತನ್ನೇ ಆವರಿಸಿಕೊಳ್ಳುತ್ತಿದೆ. ಜಗತ್ತಿನಲ್ಲಿ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಈವರೆಗೆ ವರದಿಯಾಗಿವೆ. ಭಾರತದಲ್ಲೂ ನಾಲ್ಕನೇ ಪ್ರಕರಣ ಪತ್ತೆಯಾಗಿದೆ. ಅಮೆರಿಕದಲ್ಲಿ ಈಗಾಗಲೇ ಇಬ್ಬರು ಮಕ್ಕಳಲ್ಲಿ ಮಂಕಿಪಾಕ್ಸ್ ಹರಡಿದೆ ಎಂದೂ ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಕ್ಕಳಲ್ಲಿ ಮಂಕಿಪಾಕ್ಸ್‌ ಹರಡುತ್ತಿರುವುದರಿಂದ ಅವರಿಗೆ ಬರಬಹುದಾದ ಇತರೆ ರೋಗಗಳ ಬಗ್ಗೆಯೂ ಪೋಷಕರು ಎಚ್ಚರ ವಹಿಸಬೇಕಿದೆ.

Tap to resize

Latest Videos

4th Monkeypox Case in India: ವಿದೇಶಕ್ಕೇ ಹೋಗದ ವ್ಯಕ್ತಿಗೆ ಬಂತು ಮಂಕಿಪಾಕ್ಸ್‌..!

ಕೋವಿಡ್ - 19, ಮಂಕಿಪಾಕ್ಸ್ ಹೊರತುಪಡಿಸಿ ದೇಶದ ಯುವ ಜನತೆಗೆ ಎನ್ಸೆಫಲೈಟಿಸ್‌, ಡೆಂಗ್ಯೂ, ಹಂದಿ ಜ್ವರ, ಟೊಮ್ಯಾಟೋ ಫೀವರ್‌ ಸೇರಿ ಇತರೆ ರೋಗಗಳು ಹರಡಬಹುದಾಗಿದೆ. ಈ ಹಿನ್ನೆಲೆ, ನಿಮ್ಮ ಮಕ್ಕಳನ್ನು ಅಪಾಯಕ್ಕೆ ದೂಡುವ ಈ ರೋಗಗಳ ಬಗ್ಗೆ ಇಲ್ಲಿದೆ ವಿವರ..

ಮಂಕಿಪಾಕ್ಸ್  
ಅಮೆರಿಕದ ಇಬ್ಬರು ಮಕ್ಕಳಿಗೆ ಇದೇ ಮೊದಲ ಬಾರಿಗೆ ಮಂಕಿಪಾಕ್ಸ್ ಸೋಂಕು ತಗುಲಿದೆ ಎಂದು ಶುಕ್ರವಾರ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಕ್ಯಾಲಿಫೋರ್ನಿಯಾದ ಒಂದು ಮಗುವಿಗೆ ಸೋಂಕು ತಗುಲಿದ್ದರೆ, ವಾಷಿಂಗ್ಟನ್‌ ಡಿಸಿಯಲ್ಲಿ ಮತ್ತೊಂದು ಮಗುವಿಗೆ ಈ ವೈರಾಣು ಹರಡಿದೆ. ನಿಕಟ ವೈಯಕ್ತಿಕ ಸಂಪರ್ಕ, ಮತ್ತು ಟವೆಲ್ ಹಾಗೂ ಹಾಸಿಗೆ ಮೂಲಕ ಈ ವೈರಸ್ ಹರಡಬಹುದೆಂದೂ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಆಫ್ರಿಕಾದಲ್ಲಿ ಮಂಕಿಪಾಕ್ಸ್‌ ಈಗಾಗಲೇ ಸಾಮಾನ್ಯವಾಗಿದ್ದು, ಹಲವು ಮಕ್ಕಳಿಗೆ ಹರಡಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ, ಈ ಪೈಕಿ ಚಿಕ್ಕ ಮಕ್ಕಳಲ್ಲಿ ತೀವ್ರತರವಾದ ಪ್ರಕರಣಗಳು ಮತ್ತು ಸಾವುಗಳ ಹೆಚ್ಚಿನ ಪ್ರಮಾಣಗಳು ದಾಖಲಾಗಿರುವ ಬಗ್ಗೆ ವೈದ್ಯರು ಹೇಳಿಕೊಂಡಿದ್ದಾರೆ.    

ಡೆಂಗ್ಯೂ
ಪುಣೆಯಲ್ಲಿ ಡೆಂಗ್ಯೂ ಪ್ರೇರಿತ ಹೀಮೋಫ್ಯಾಗೋಸೈಟಿಕ್‌ ಲಿಮ್ಪೋಹಿಸ್ಟಿಯೋಸೈಟೋಸಿಸ್‌ (ಎಚ್‌ಎಲ್‌ಎಚ್‌) ಸೋಂಕು ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮಾಹಿತಿ ಬಂದಿದೆ.  ಹಾಗೆ, ಕರ್ನಾಟಕ, ತೆಲಂಗಾಣದಲ್ಲೂ ಮಕ್ಕಳಲ್ಲಿ ಡೆಂಗ್ಯೂ ಉಂಟಾಗುತ್ತಿದೆ. 

ಜಪಾನೀಸ್‌ ಎನ್ಸೆಫಲೈಟಿಸ್‌
ಅಸ್ಸಾಂನಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್ ಹೆಚ್ಚಾಗುತ್ತಿದ್ದು, ಈ ತಿಂಗಳು 38 ಜನರಿಗೆ ರೋಗ ಹರಡಿದೆ ಎಂದು ಸರ್ಕಾರ ಶುಕ್ರವಾರ  ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ. ಈ ರೋಗವು ಪ್ರಾಥಮಿಕವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸ್ಥಳೀಯ ದೇಶಗಳಲ್ಲಿ ಹೆಚ್ಚಿನ ವಯಸ್ಕರು ಬಾಲ್ಯದ ಸೋಂಕಿನ ನಂತರ ನೈಸರ್ಗಿಕ ಪ್ರತಿರಕ್ಷೆಯನ್ನು ಹೊಂದಿರುತ್ತಾರೆ. ಆದರೆ ಯಾವುದೇ ವಯಸ್ಸಿನ ವ್ಯಕ್ತಿಗಳ ಮೇಲೂ ಪರಿಣಾಮ ಬೀರಬಹುದು ಎಂದು ತಿಳಿದುಬಂದಿದೆ.

ಹಂದಿ ಜ್ವರ
ಜೂನ್‌ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಹಂದಿ ಜ್ವರ (ಎಚ್‌1ಎನ್‌1) ಪ್ರಕರಣಗಳು ಹೆಚ್ಚಾಗಿದ್ದವು. ಮಕ್ಕಳಿಗೆ ಸಹ ಸೋಂಕು ಹರಡಬಹುದಾಗಿದ್ದು, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ಸಹ ರೋಗ ತಗುಲಬಹುದು ಎಂಬುದು ಆತಂಕಕಾರಿ ವಿಚಾರ.

ಟೊಮ್ಯಾಟೋ ಜ್ವರ
ಇತ್ತೀಚೆಗೆ ಕೇರಳದಲ್ಲಿ ಟೊಮ್ಯಾಟೋ ಜ್ವರದ ಹರಡುವಿಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಇದುವರೆಗೆ 80 ಸೋಂಕಿತ ಪ್ರಕರಣಗಳು ದಾಖಲಾಗಿವೆ ಎಂದು ಕೆಲವು ವರದಿಗಳು ಹೇಳಿದರೆ, ಇತರ ವರದಿಗಳು 100 ಕ್ಕೆ ತಲುಪಿದೆ ಎಂದಿವೆ.

ಮಂಕಿಪಾಕ್ಸ್‌ ಈಗ ಜಾಗತಿಕ ತುರ್ತು: ಭಾರತ ಸೇರಿ 74 ದೇಶದಲ್ಲಿ 16,000 ಕೇಸ್‌

ಮಕ್ಕಳನ್ನು ರಕ್ಷಿಸುವುದು ಹೇಗೆ..?
ಮಕ್ಕಳು ನೀರಿನಿಂದ ಹರಡುವ ರೋಗಗಳ ಅಪಾಯದಲ್ಲಿರುವುದರಿಂದ ಮಕ್ಕಳು ಹೆಚ್ಚು ನೀರು ಮುಂತಾದ ದ್ರವ ಆಹಾರ ಸೇವಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಇದಲ್ಲದೆ, ಮುಂಗಾರು ಮಳೆಯ ಸಮಯದಲ್ಲಿ ಎಣ್ಣೆಯುಕ್ತ ಹಾಗೂ ಮಸಾಲೆಯುಕ್ತ ಆಹಾರ ಸೇವನೆ ತಪ್ಪಿಸಬೇಕಿದ್ದು ಮತ್ತು ವಿಟಮಿನ್ ಸಿ ಹಾಗೂ ಇತರ ಪೋಷಕಾಂಶಗಳಲ್ಲಿ ಹೆಚ್ಚಿನ ಆಹಾರವನ್ನು ಸೇವಿಸುವುದು ಸೂಕ್ತವಾಗಿದೆ.

click me!