
ನವದೆಹಲಿ(ಜೂ.22): ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ 2024ರ ಲೋಕಸಭೆ ಚುನಾವಣೆಗೆ ಜಂಟಿ ರಣನೀತಿ ಹೆಣೆಯಲು ಪ್ರತಿಪಕ್ಷಗಳು ಸಿದ್ಧತೆ ಆರಂಭಿಸಿವೆ. ಈ ಕುರಿತಾದ ವಿಪಕ್ಷಗಳ ಮೊದಲ ಸಭೆ ಮಂಗಳವಾರ ನಡೆಯಲಿದೆ.
ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹಾಗೂ ತೃಣಮೂಲ ಕಾಂಗ್ರೆಸ್ ಮುಖಂಡ ಯಶವಂತ ಸಿನ್ಹಾ ಅವರ ಜಂಟಿ ಅಧ್ಯಕ್ಷತೆಯಲ್ಲಿ ಸಭೆ ಏರ್ಪಾಡಾಗಿದೆ. ವಿಪಕ್ಷಗಳ ಈ ಮಹಾಮೈತ್ರಿಕೂಟದ ಹಿಂದಿನ ಮಿದುಳು, ಚುನಾವಣಾ ರಣನೀತಿ ತಜ್ಞ ಪ್ರಶಾಂತ್ ಕಿಶೋರ್ ಎಂದು ತಿಳಿದುಬಂದಿದೆ. ಇದಕ್ಕೆ ಪೂರಕವೆಂಬಂತೆ ಸೋಮವಾರ ಪವಾರ್ ಅವರನ್ನು ಪ್ರಶಾಂತ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇತ್ತೀಚಿನ ದಿನದಲ್ಲಿ ಇಬ್ಬರ ನಡುವೆ ನಡೆದ ಎರಡನೇ ಭೇಟಿ.
ಸಭೆಗೆ ಈಗಾಗಲೇ ಯಶವಂತ ಸಿನ್ಹಾ ಅವರ ಕಡೆಯಿಂದ ಆರ್‌ಜೆಡಿ ಮುಖಂಡ ಮನೋಜ್ ಝಾ, ಆಮ್ ಆದ್ಮಿ ಪಾರ್ಟಿ ಸಂಸದ ಸಂಜಯ ಸಿಂಗ್ ಹಾಗೂ ಕಾಂಗ್ರೆಸ್ ಮುಖಂಡ ವಿವೇಕ್ ತಂಖಾ ಅವರಿಗೆ ಆಹ್ವಾನ ಹೋಗಿದೆ. ನರೇಂದ್ರ ಮೋದಿ ಅವರ ವಿರುದ್ಧ ಚುನಾವಣೆಯನ್ನು ಸಂಘಟಿತವಾಗಿ ಎದುರಿಸಿ, ಸಮರ್ಥ ಪ್ರಧಾನಿ ಅಭ್ಯರ್ಥಿಯನ್ನು ಸಿದ್ಧಪಡಿಸುವುದು ಪ್ರತಿಪಕ್ಷಗಳ ಉದ್ದೇಶ.
ಇತ್ತೀಚೆಗೆ ಪ್ರಶಾಂತ್ ಕಿಶೋರ್ ರೂಪಿಸಿದ ರಣನೀತಿ ಆಧರಿಸಿಯೇ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಕಠಿಣ ಯುದ್ಧದಲ್ಲಿ ಜಯಿಸಿದ್ದರು. ಈ ಹಿನ್ನೆಲೆಯಲ್ಲಿ ಮಮತಾ ಅವರೇನಾದರೂ ಪ್ರಧಾನಿ ಅಭ್ಯರ್ಥಿ ಆಗಬಹುದಾ ಎಂದು ಊಹೆ ಇದೆ. ಇದಕ್ಕೆ ಚುನಾವಣೆ ಗೆದ್ದ ಬಳಿಕ ಪ್ರತಿಕ್ರಿಯೆ ನೀಡಿದ್ದ ಮಮತಾ, ‘2024ರಲ್ಲಿ ನಾವೆಲ್ಲ (ವಿಪಕ್ಷ) ಒಗ್ಗಟ್ಟಾಗುವ ಅಗತ್ಯವಿದೆ’ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ