
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಡಿ ವಂಚನೆಗೆ ಪ್ರಕರಣಗಳ ವಿಚಾರಣೆ (ಪ್ರಾಸಿಕ್ಯೂಷನ್) ಆರಂಭಿಸಲು ನಿಗದಿಪಡಿಸಲಾಗಿದ್ದ 1 ಕೋಟಿ ರು. ಮಿತಿಯನ್ನು 2 ಕೋಟಿ ರು.ಗೆ ಹೆಚ್ಚಿಸಲು ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದೇ ವೇಳೆ, ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿಪಡಿಸುವುದು, ಉದ್ದೇಶಪೂರ್ವಕವಾಗಿ ಸಾಕ್ಷ್ಯ ನಾಶ ಮಾಡುವುದು ಹಾಗೂ ಮಾಹಿತಿಯನ್ನು ಪೂರೈಸಲು ವಿಫಲವಾಗುವ ಕೃತ್ಯಗಳನ್ನು ಅಪರಾಧ ಮುಕ್ತಗೊಳಿಸಲೂ ನಿರ್ಧರಿಸಲಾಗಿದೆ. ಈ ಸಂಬಂಧ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಈ ಅಪರಾಧಗಳಿಗೆ ಈಗಾಗಲೇ ಭಾರತೀಯ ದಂಡಸಂಹಿತೆಯಡಿ ಶಿಕ್ಷೆ ವಿಧಿಸುವ ಅವಕಾಶವಿದೆ. ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮತ್ತೊಂದೆಡೆ, ಆಹಾರಧಾನ್ಯಗಳ ಹೊಟ್ಟು ಜಾನುವಾರುಗಳ ಫೀಡ್‌ಗೆ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರಧಾನ್ಯಗಳ ಹೊಟ್ಟನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಈವರೆಗೆ ಶೇ.5ರಷ್ಟು ತೆರಿಗೆ ಇತ್ತು. ಇನ್ನು ತೆರಿಗೆ ಇರುವುದಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅಧ್ಯಕ್ಷತೆಯಲ್ಲಿ ಜಿಎಸ್‌ಟಿ ಮಂಡಳಿಯ ಸಭೆ (GST Council meeting) ನಡೆಯಿತು. 15 ವಿಷಯಗಳು ಚರ್ಚೆಗೆ ಇದ್ದವಾದರೂ ಸಮಯದ ಅಭಾವದಿಂದ 8 ವಿಷಯಗಳ ಬಗ್ಗೆಯಷ್ಟೆ ತೀರ್ಮಾನ ಕೈಗೊಳ್ಳಲಾಯಿತು. ಜಿಎಸ್‌ಟಿ ಮೇಲ್ಮನವಿ ನ್ಯಾಯಾಧಿಕರಣ ಸ್ಥಾಪನೆ ಸೇರಿದಂತೆ ಉಳಿದ ವಿಷಯಗಳನ್ನು ಸಭೆಯಲ್ಲಿ ಪರಿಗಣಿಸಲಿಲ್ಲ.
Small Business Ideas: ಹೊಸ ವರ್ಷದಲ್ಲಿ ನೀವೂ ಶುರು ಮಾಡಿ ಇಂಥ ಬ್ಯುಸಿನೆಸ್
ಪಾನ್ ಮಸಾಲಾ (pan masala) ಹಾಗೂ ಗುಟ್ಕಾ ಉದ್ದಿಮೆಗಳು (gutka industries) ತೆರಿಗೆ ವಂಚನೆ ಮಾಡುವುದನ್ನು ನಿಗ್ರಹಿಸುವ ವಿಚಾರ ಮತ್ತು ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳಿಗೆ ಜಿಎಸ್‌ಟಿ ವಿಧಿಸುವ ವಿಷಯವೂ ಚರ್ಚೆಯಾಗಲಿಲ್ಲ. ಹೊಸ ತೆರಿಗೆ ಪ್ರಸ್ತಾವಗಳೂ ಚರ್ಚೆಗೆ ಬರಲಿಲ್ಲ. ಎಸ್‌ಯುವಿ (Sports Utility Vehicle) ಅಂದರೆ ಯಾವುವು ಎಂಬ ಬಗ್ಗೆ ಸ್ಪಷ್ಟನೆ ನೀಡಲಾಯಿತು.
ನೋ ಕ್ಲೇಮ್ ಬೋನಸ್ ಮೇಲೆ ಜಿಎಸ್‌ಟಿ ಇಲ್ಲ:
ವಿಮಾ ಕಂಪನಿಗಳು ವಾಹನಗಳ ಮಾಲೀಕರಿಗೆ ನೀಡುವ ನೋ ಕ್ಲೇಮ್ ಬೋನಸ್ ಮೇಲೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಜಿಎಸ್‌ಟಿ ಮಂಡಳಿ ಸ್ಪಷ್ಟಪಡಿಸಿದೆ. ವಾಹನ ಮಾಲೀಕರು ಹಿಂದಿನ ವರ್ಷ ಯಾವುದೇ ಅಪಘಾತ ವಿಮೆ ಕ್ಲೇಮ್ ಸಲ್ಲಿಕೆ ಮಾಡದೇ ಇದ್ದರೆ, ಮುಂದಿನ ವರ್ಷ ಪಾಲಿಸಿ ನವೀಕರಣದ ವೇಳೆ ಪ್ರೀಮಿಯಂನಲ್ಲಿ ಶೇ.20ರಷ್ಟು ಬೋನಸ್ ನೀಡುತ್ತವೆ. ಸತತ 2 ವರ್ಷ ಯಾವುದೇ ಕ್ಲೇಮ್ ಸಲ್ಲಿಕೆ ಮಾಡದೇ ಇದ್ದಲ್ಲಿ ಶೇ.25ರವರೆಗೂ ಬೋನಸ್ ನೀಡುತ್ತವೆ. ಇಂಥ ಮೊತ್ತಕ್ಕೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯ ಬಳಿಕ ಸ್ಪಷ್ಟನೆ ನೀಡಲಾಗಿದೆ.
ಟೆಕ್ಕಿಗಳಿಗೆ ಎಲ್ಐಸಿಯ ಹೊಸ ಪಾಲಿಸಿ; ವರ್ಷಕ್ಕೆ 4000ರೂ. ಪ್ರೀಮಿಯಂ ಪಾವತಿಸಿದ್ರೆ 50ಲಕ್ಷ ರೂ. ಕವರೇಜ್!
ಎಸ್‌ಯುವಿ ಗೊಂದಲಗಳಿಗೆ ಜಿಎಸ್‌ಟಿ ಮಂಡಳಿ ಸ್ಪಷ್ಟನೆ
ಎಸ್‌ಯುವಿಗಳ ಕುರಿತಾಗಿ ಇದ್ದ ಗೊಂದಲಗಳನ್ನು ಪರಿಹರಿಸುವ ಸಲುವಾಗಿ ಸರಕು ಮತ್ತು ಸೇವಾ ತೆರಿಗೆ ಮಂಡಳಿ (Goods and Services Tax Board)ಶನಿವಾರ ಸ್ಪಷ್ಟನೆ ನೀಡಿದೆ. ಅಲ್ಲದೇ ಈ ಕುರಿತಾಗಿ ಹಣಕಾಸು ಸಚಿವಾಲಯದೊಂದಿಗೆ (Ministry of Finance) ಚರ್ಚೆ ನಡೆಸಲಾಗುತ್ತಿದೆ ಎಂದು ಸಹ ಹೇಳಿದೆ. ಇದನ್ನು ಆಟೋಮೊಬೈಲ್ ಕಂಪನಿಗಳು ಸ್ವಾಗತಿಸಿವೆ. ಎಸ್‌ಯುವಿಗಳ ಮೇಳೆ ಶೇ.28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಹೆಚ್ಚುವರಿಯಾಗಿ ಶೇ.22ರಷ್ಟು ಸೆಸ್ ಸಹ ವಿಧಿಸಲಾಗುತ್ತಿತ್ತು. ಆದರೆ ಎಸ್‌ಯುವಿಗಳು ಯಾವುದು ಎಂಬುದರ ಕುರಿತಾಗಿ ರಾಜ್ಯಗಳಲ್ಲಿ ಹಲವು ಗೊಂದಲಗಳಿದ್ದವು. ಇದಕ್ಕೆ 48ನೇ ಜಿಎಸ್‌ಟಿ ಮಂಡಳಿ ಸಭೆ ಸ್ಪಷ್ಟನೆ ನೀಡಿದೆ. ಕಾರುಗಳ ಎಂಜಿನ್ ಸಾಮರ್ಥ್ಯ 1.500 ಸಿ.ಸಿ.ಗಿಂತ ಹೆಚ್ಚಿರಬೇಕು. ಕಾರಿನ ಉದ್ದ 4,000 ಮಿ.ಮೀ.ಗಿಂತ ಹೆಚ್ಚಿರಬೇಕು ಮತ್ತು ಕಾರಿನ ಗ್ರೌಂಡ್ ಕ್ಲಿಯರೆನ್ಸ್ (ನೆಲದಿಂದ ಕಾರು ಕೆಳಭಾಗ ಇರುವ ಎತ್ತರ) 170 ಮಿ.ಮೀ.ಗಿಂತ ಹೆಚ್ಚಿರಬೇಕು. ಇಂಥ ವಾಹನಗಳನ್ನು ಮಾತ್ರವೇ ಎಸ್‌ಯುವಿ ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ