ರಸ್ತೆ ಇಲ್ಲ, ಆಸ್ಪತ್ರೆ ಇಲ್ಲ : ತಾಯಿ ಮುಂದೆಯೇ ಪ್ರಾಣಬಿಟ್ಟ ನವಜಾತ ಅವಳಿ ಮಕ್ಕಳು

By Suvarna News  |  First Published Aug 17, 2022, 11:46 AM IST

ಅವಧಿಪೂರ್ವವೇ ಜನಿಸಿದ ಅವಳಿ ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ರಸ್ತೆಯೂ ಸರಿ ಇಲ್ಲದೇ, ಸಮೀಪದಲ್ಲಿ ಆಸ್ಪತ್ರೆಯೂ ಇಲ್ಲದೇ ತಾಯಿಯೆದುರೇ ಅವಳಿ ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.


ಮಹಾರಾಷ್ಟ್ರ: ಅವಧಿಪೂರ್ವವೇ ಜನಿಸಿದ ಅವಳಿ ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ರಸ್ತೆಯೂ ಸರಿ ಇಲ್ಲದೇ, ಸಮೀಪದಲ್ಲಿ ಆಸ್ಪತ್ರೆಯೂ ಇಲ್ಲದೇ ತಾಯಿಯೆದುರೇ ಅವಳಿ ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪಾಲ್‌ಘರ್‌ನಲ್ಲಿ ಈ ಮನಕಲುಕುವ ಘಟನೆ ನಡೆದಿದ್ದು, ಕುಟುಂಬಸ್ಥರು ಬಾಣಂತಿ ಮಹಿಳೆಯನ್ನು ಕೋಲಿಗೆ ಬೆಡ್‌ಶೀಟ್ ಕಟ್ಟಿ ನಿರ್ಮಿಸಿದ್ದ ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಸಮೀಪದ ಆಸ್ಪತ್ರೆಗೆ ಹೋಗುತ್ತಿರುವ ದೃಶ್ಯ ಹೃದಯವನ್ನು ಭಾರವಾಗಿಸುತ್ತಿದೆ.

ಅವಳಿ ಮಕ್ಕಳಿಗೆ ಅವಧಿ ಪೂರ್ವವೇ ಜನ್ಮ ನೀಡಿದ ಮಹಿಳೆಗೆ ನಂತರ ತೀವ್ರವಾಗಿ ಬ್ಲೀಡಿಂಗ್ ಆಗಲು ಶುರುವಾಗಿದ್ದು, ಹೀಗಾಗಿ ಆಕೆಯ ಕುಟುಂಬದ ಸದಸ್ಯರು ಕಲ್ಲು ಮುಳ್ಳುಗಳಿಂದ ಕೂಡಿದ್ದ ಕಡಿದಾದ ರಸ್ತೆಗಳಲ್ಲಿ ಸುಮಾರು ಮೂರು ಕಿಲೋ ಮೀಟರ್ ವರೆಗೆ ಆಕೆಯನ್ನು ಹೊತ್ತುಕೊಂಡು ಸಾಗಿದ್ದಾರೆ. 

Tap to resize

Latest Videos

ಹೀಗೆ ಆಸ್ಪತ್ರೆ ಇಲ್ಲದೇ ಹಾಗೂ ರಸ್ತೆಯ ದುರಾವಸ್ಥೆಯಿಂದಾಗಿ ಹೆತ್ತ ಎರಡೂ ಮಕ್ಕಳನ್ನು ಕಳೆದುಕೊಂಡ ನತದೃಷ್ಟ ತಾಯಿಯನ್ನು ವಂದನಾ ಬುಧರ್‌ ಎಂದು ಗುರುತಿಸಲಾಗಿದೆ. ಇವರು ಏಳು ತಿಂಗಳಲ್ಲೇ ಅಂದರೆ ಅವಧಿ ಪೂರ್ವವೇ ಅವಳಿ ಮಕ್ಕಳಿಗೆ ಮನೆಯಲ್ಲೇ ಜನ್ಮ ನೀಡಿದ್ದಾರೆ. ಅವಧಿಪೂರ್ವ ಜನಿಸಿದ ಈ ಮಕ್ಕಳು ದುರ್ಬಲವಾಗಿದ್ದು ತತ್‌ಕ್ಷಣವೇ ಸರಿಯಾದ ವೈದ್ಯಕೀಯ ಸೌಲಭ್ಯ ದೊರಕದ ಕಾರಣ ತಾಯಿ ಎದುರೇ ಪ್ರಾಣ ಬಿಟ್ಟಿವೆ. 

ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ರೂ, ಒಂದೂ ಬದುಕುಳಿಯಲಿಲ್ಲ!

ಇದಾದ ಬಳಿಕ ತೀವ್ರವಾದ ರಕ್ತಸ್ರಾವದ ಹಿನ್ನೆಲೆಯಲ್ಲಿ ತಾಯಿಯ ಸ್ಥಿತಿಯೂ ಶೋಚನೀಯವಾಗಿದೆ. ನಂತರ ಕುಟುಂಬ ಸದಸ್ಯರೆಲ್ಲಾ ಸೇರಿ ಮರದ ದೊಣ್ಣೆಯೊಂದಕ್ಕೆ ಬೆಡ್‌ಶಿಟ್‌ ಅನ್ನು ಜೋಳಿಗೆಯಂತೆ ಕಟ್ಟಿ ಅದರಲ್ಲಿ ತಾಯಿಯನ್ನು ಕೂರಿಸಿ ಸುಮಾರು ಮೂರು ಕಿಲೋ ಮೀಟರ್‌ವರೆಗೆ ಹೊತ್ತುಕೊಂಡು ಬಂದಿದ್ದಾರೆ. ಇಳಿಜಾರುಗಳಿಂದ ಕೂಡಿದ್ದ ಕಡಿದಾದ ಕಾಲುದಾರಿಯಲ್ಲಿ ನಿಧಾನವಾಗಿ ಕುಟುಂಬ ಸದಸ್ಯರು ತಾಯಿಯನ್ನು ಕರೆದುಕೊಂಡು ಬರುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಪ್ರಸ್ತುತ ಬಾಣಂತಿ ಮಹಿಳೆಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಒಟ್ಟಿಗೆ ಗರ್ಭಿಣಿಯರಾದ ಒಂದೇ ಆಸ್ಪತ್ರೆಯ 14 ನರ್ಸ್‌ಗಳು

ಪ್ರಸ್ತುತ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಸರ್ಕಾರದ ಭಾಗವಾಗಿರುವ ಬಿಜೆಪಿಯ ರಾಜ್ಯ ಉಪಾಧ್ಯಕ್ಷ, ಚಿತ್ರಾ ಕಿಶೋರ್ ವಾಗ್‌, ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸರಿಯಾದ ಸಮಯದಲ್ಲಿ ವೈದ್ಯಕೀಯ ಸೌಲಭ್ಯ ಸಿಗದೇ ಅವಳಿ ಮಕ್ಕಳು ಸಾವಿಗೀಡಾಗಿದ್ದು, ತುಂಬಾ ನೋವಿನ ವಿಚಾರ ಎಂದು ಅವರು ಟ್ವಿಟ್ ಮಾಡಿದ್ದಾರೆ. ಸರಿಯಾದ ರಸ್ತೆ ಸೌಲಭ್ಯಗಳಿಲ್ಲದೇ ಇಂತಹ ಘಟನೆಗಳು ಹೆಚ್ಚೆಚ್ಚು ಸಂಭವಿಸುತ್ತಿವೆ. ಈ ಬಗ್ಗೆ ಸಿಎಂ ಏಕನಾಥ್ ಶಿಂಧೆ ಹಾಗೂ ಡೆಪ್ಯೂಟಿ ಸಿಎಂ ದೇವೇಂದ್ರ ಫಡ್ನವಿಸ್‌ ಅವರ ಗಮನಕ್ಕೆ ತರುವುದಾಗಿ ಹೇಳಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಮುಂಡೆ ಕೂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಇದೊಂದು ದುರಾದೃಷ್ಟಕರ ಘಟನೆ. ದೇಶವೂ 75ನೇ ಸ್ವಾತಂತ್ರ ದಿನಾಚರಣೆಯ ಆಚರಿಸುತ್ತಿರುವ ಸಂದರ್ಭದಲ್ಲಿ ಬಡವರು ಇಂತಹ ದುಸ್ಥಿತಿ ಅನುಭವಿಸುತ್ತಿರುವುದು ಬೇಸರದ ವಿಚಾರ ಎಂದು ಅವರು ಹೇಳಿದರು. ದೇಶದಲ್ಲಿ ರಸ್ತೆ ಹಾಗೂ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆ. ಆದರೂ ಕೆಲವು ಹಳ್ಳಿಗಳ ರಸ್ತೆಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ. ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷಗಳೇ ಕಳೆದರೂ ಇಂತಹ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸವಾಗಿದೆ. 
 

click me!