ಭಾರತದ ವಿರೋಧದ ಹೊರತಾಗಿಯೂ ಚೀನಾದ ಗೂಢಚರ ನೌಕೆ ‘ಯುನ್ ವಾಂಗ್ 5’ ಮಂಗಳವಾರ ಬೆಳಗ್ಗೆ ಶ್ರೀಲಂಕಾದ ಹಂಬನ್‌ತೋಟ ಬಂದರಿಗೆ ಆಗಮಿಸಿದೆ. ಈ ನೌಕೆ ಆ.22ರವರೆಗೂ ಬಂದರಿನಲ್ಲೇ ಇರಲಿದೆ.
ಕೊಲಂಬೋ: ಭಾರತದ ವಿರೋಧದ ಹೊರತಾಗಿಯೂ ಚೀನಾದ ಗೂಢಚರ ನೌಕೆ ‘ಯುನ್ ವಾಂಗ್ 5’ ಮಂಗಳವಾರ ಬೆಳಗ್ಗೆ ಶ್ರೀಲಂಕಾದ ಹಂಬನ್‌ತೋಟ ಬಂದರಿಗೆ ಆಗಮಿಸಿದೆ. ಈ ನೌಕೆ ಆ.22ರವರೆಗೂ ಬಂದರಿನಲ್ಲೇ ಇರಲಿದೆ.
ಈ ನಡುವೆ, ನೌಕೆ ಆಗಮನ ಕುರಿತ ವಿವಾದ ಅನಪೇಕ್ಷಿತ ಎಂದು ಲಂಕಾದಲ್ಲಿನ ಚೀನಾ ರಾಯಭಾರಿ ಹೇಳಿದ್ದಾರೆ. ಇಂಥ ಸಂಶೋಧನಾ ಹಡಗು ಲಂಕಾಕ್ಕೆ ಆಗಮಿಸುವುದು ಹೊಸದೇನಲ್ಲ. 2014ರಲ್ಲೂ ಇಂಥ ನೌಕೆ ಆಗಮಿಸಿತ್ತು. ಕೇವಲ ಮರುಪೂರಣ ಕಾರಣಕ್ಕಾಗಿ, ಸೀಮಿತ ಅವಧಿಗೆ ನೌಕೆ ಲಂಕಾ ಬಂದರಿನಲ್ಲಿ ಲಂಗರು ಹಾಕಲಿದೆ ಎಂದು ಅವರು ಹೇಳಿದ್ದಾರೆ. ಆದರೆ ನೌಕೆ ಆಗಮನದ ವೇಳೆ ಶ್ರೀಲಂಕಾದ ಹಿರಿಯ ರಾಜಕಾರಣಿಗಳು ಸ್ಥಳದಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಭಾರತದ ಅಸಮಾಧಾನದ ತೀವ್ರತೆ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಪಾಕ್ ಬತ್ತಳಿಕೆಗೆ ಚೀನಾದ ದೈತ್ಯ ಯುದ್ಧ ನೌಕೆ!
‘ದ ಯಾನ್ ವಾಂಗ್ 5’ ಸಂಶೋಧನೆ ಹಾಗೂ ಸಮೀಕ್ಷಾ ಹಡಗು ಎಂದು ಚೀನಾ ಘೋಷಿಸಿಕೊಂಡಿದ್ದರೂ, ಅದು ಬೇಹುಗಾರಿಕಾ ಸೌಲಭ್ಯವನ್ನು ಹೊಂದಿದೆ. ತನ್ನ ಸೇನಾ ನೆಲೆಗಳ ಮೇಲೆ ಕಣ್ಣಿಡಬಹುದು ಎಂಬುದು ಭಾರತದ ಆಕ್ಷೇಪ. ಇದೇ ಕಾರಣಕ್ಕಾಗಿಯೇ, ಚೀನಾ ಕಂಪನಿಯ ವಶದಲ್ಲೇ ಇರುವ ಹಂಬನ್‌ತೋಟ ಬಂದರಿನಲ್ಲಿ ನೌಕೆ ಲಂಗರು ಹಾಕಲು ಅನುಮತಿ ನೀಡಬಾರದು ಎಂದು ಭಾರತ ಶ್ರೀಲಂಕಾಕ್ಕೆ ಮನವಿ ಮಾಡಿತ್ತು. ಆದರೆ ನೌಕೆ ಆಗಮನವನ್ನು ಕೆಲ ದಿನಗಳ ಕಾಲ ಮುಂದೂಡಿದ್ದ ಲಂಕಾ ಕೊನೆಗೆ ಅನುಮತಿ ನೀಡಿತ್ತು.
ಭಾರತ ಜಲಸೀಮೆಗೆ ಪ್ರವೇಶ ಮಾಡಿದ್ದ ಚೀನಾದ ಹಡಗು
ಭಾರತದ ವಿರೋಧ ಏಕೆ?:
ಹಂಬನ್‌ತೋಟ ಬಂದರನ್ನು ಚೀನಾ ಅಭಿವೃದ್ಧಿಪಡಿಸಿದೆ. ಆದರೆ ಅಭಿವೃದ್ಧಿಪಡಿಸಿದ್ದಕ್ಕೆ ಶ್ರೀಲಂಕಾ ಹಣ ಪಾವತಿ ಮಾಡದ ಕಾರಣ, ಬಂದರನ್ನು 99 ವರ್ಷ ಕಾಲ ಚೀನಾ ಮೂಲದ ಕಂಪನಿಗೆ ಲೀಸ್ ನೀಡಿದೆ. ಈ ಬಂದರನ್ನು ಚೀನಾ ತಮ್ಮ ಮಿಲಿಟರಿ ನೆಲೆಯನ್ನಾಗಿ ಬಳಸಬಹುದು ಎಂಬುದು ಭಾರತದ ಆತಂಕಕ್ಕೆ ಕಾರಣ. ಜೊತೆಗೆ ದ ಯಾನ್ ವಾಂಗ್ ಹಡಗು, ಬಾಹ್ಯಾಕಾಶದ ಮೇಲೆ ನಿಗಾ ಇಡುವ ಸಾಮರ್ಥ್ಯ ಹೊಂದಿದೆ. ಅಂದರೆ ಅದನ್ನು ಉಪಗ್ರಹಗಳ ಮೇಲೆ ಕಣ್ಗಾವಲು ಇಡಲು, ರಾಕೆಟ್, ಖಂಡಾಂತರ ಕ್ಷಿಪಣಿ ಪ್ರಯೋಗದ ಮೇಲೆ ನಿಗಾ ಇಡಲು ಮತ್ತು ದಾಳಿ ನಡೆಸಲು ಬಳಸಬಹುದು. ಅಲ್ಲದೆ ಈ ನೌಕೆ ಕಲ್ಪಕಂ, ಕೂದಂಕುಳಂ ಪರಮಾಣು ಸ್ಥಾವರ, ಪರಮಾಣು ಸಂಶೋಧನಾ ಕೇಂದ್ರಗಳು, ಕೇರಳ, ತಮಿಳುನಾಡು, ಆಂಧ್ರಪ್ರದೇಶ ವ್ಯಾಪ್ತಿಯ ಬಂದರುಗಳ ಮಾಹಿತಿ ಕದಿಯಬಹುದು ಎಂಬುದು ಸರ್ಕಾರದ ಆತಂಕಕ್ಕೆ ಕಾರಣ. ಹೀಗಾಗಿ ಈ ಗೂಢಚರ ನೌಕೆ ತನ್ನ ದೇಶದ ಗಡಿಯಲ್ಲಿ ಲಂಗರು ಹಾಕುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.