
ಮುಂಬೈ (ಆ. 1): ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ಪಿಎಂಎಲ್‌ಎ ನ್ಯಾಯಾಲಯ ಆಗಸ್ಟ್ 4 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಕಳುಹಿಸಿದೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಸಂಜಯ್ ರಾವುತ್ ಅವರ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿತ್ತು. ಪತ್ರಾ ಚಾಲ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವತ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಭಾನುವಾರ ಬಂಧನ ಮಾಡಿತ್ತು. ಮತ್ತೊಂದೆಡೆ, ಸಂಜಯ್ ರಾವುತ್ ಬಂಧನದ ಕುರಿತು ರಾಜ್ಯಸಭೆಯಲ್ಲಿ ಸಾಕಷ್ಟು ಕೋಲಾಹಲ ಎದ್ದಿತ್ತು. ಈ ವಿಷಯವಾಗಿ ಲೋಕಸಭೆಯಲ್ಲೂ ಗದ್ದಲ ಎದ್ದಿತ್ತು. ಇಡಿ ಒಟ್ಟು 8 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯವನ್ನು ಕೇಳಿಕೊಂಡಿತ್ತು. ಆದರೆ, ಇಡಿಯ ಮನವಿಯನ್ನು ಪರಿಗಣಿಸದ ಕೋರ್ಟ್, 4 ದಿನದ ಕಸ್ಟಡಿಗೆ ಮಾತ್ರ ಒಪ್ಪಿದೆ. ತೀರ್ಪು ನೀಡುವಾಗ ರಾವತ್ ಅವರ ವಕೀಲರೊಂದಿಗೆ ಮಾತನಾಡುವ ಅವಕಾಶವನ್ನು ನೀಡಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ರಾವುತ್ ಅವರ ಔಷಧಿಗಳು ಹಾಗೂ ಇತರ ಸಮಸ್ಯೆಗಳ ಬಗ್ಗೆ ಇಡಿ ಗಮನ ನೀಡಬೇಕು ಅದರೊಂದಿಗೆ ಅವರನ್ನು ಎಷ್ಟು ಗಂಟೆಗಳ ಕಾಲ ವಿಚಾರಣೆ ಮಾಡಲಾಗುತ್ತದೆ ಎನ್ನುವುದನ್ನೂ ತಿಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆ ವೇಳೆ ಸಂಜಯ್ ರಾವುತ್ ಅವರ ಪರ ವಕೀಲ ಅಶೋಕ್ ಮುಂಡರಗಿ ಅವರು ಸಂಜಯ್ ರಾವುತ್ ಬಂಧನ ರಾಜಕೀಯ ಪಿತೂರಿಯ ಭಾಗವಾಗಿದೆ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ. ರಾವುತ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆಗಳಿವೆ. ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ನ್ಯಾಯಾಲಯದಲ್ಲಿ ತೋರಿಸಲಾಯಿತು.
"ಭಾನುವಾರ ಬೆಳಿಗ್ಗೆ, ಸಂಜಯ್ ರಾವುತ್ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ರಾತ್ರಿ ವೇಳೆ ಅವರನ್ನು ಬಂಧನ ಮಾಡಲಾಗಿದೆ' ಎಂದು ರಾವುತ್ ಪರ ವಕೀಲ ಅಶೋಕ್ ಮುಂಡರಗಿ ಹೇಳಿದ್ದಾರೆ. ಹೃದಯ ಸಂಬಂಧಿ ಕಾಯಿಲೆ ಇರುವ ಕಾರಣ ತಡರಾತ್ರಿಯವರೆಗೆ ಅವರ ವಿಚಾರಣೆ ನಡೆಸಬಾರದು. ರಾತ್ರಿ 10 ಗಂಟೆಯವರೆಗೆ ಮಾತ್ರ ವಿಚಾರಣೆ ನಡೆಸುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.
Maharashtra Political Crisis ನಡುವೆ ಶಿವಸೇನೆ ಸಂಜಯ್ ರಾವತ್‌ಗೆ ಇಡಿ ನೊಟೀಸ್
ಕಾಲ ಬದಲಾಗುತ್ತಿರುತ್ತದೆ: ಸಂಜಯ್ ರಾವತ್ ವಿರುದ್ಧ ಜಾರಿಯಲ್ಲಿರುವ ಇಡಿ ಕ್ರಮದ ನಡುವೆ ಉದ್ಧವ್ ಠಾಕ್ರೆ ಹೇಳಿಕೆ ಮುನ್ನೆಲೆಗೆ ಬಂದಿದೆ. ಉದ್ಧವ್ ಸಂಜಯ್ ರಾವತ್ ಅವರನ್ನು ಬೆಂಬಲಿಸಿದರು ಮತ್ತು ರಾವತ್ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು. ಕಾಲ ಯಾವಾಗಲೂ ಬದಲಾಗುತ್ತಿರುತ್ತದೆ ಎಂದು ಉದ್ಧವ್ ಹೇಳಿದ್ದಾರೆ. ನಮ್ಮ ಸಮಯ ಬಂದಾಗ ನಿಮಗೆ (ಬಿಜೆಪಿ) ಏನಾಗಬಹುದು ಎಂದು ಯೋಚಿಸಿ. ಈಗ ಇದನ್ನು ಮಹಾರಾಷ್ಟ್ರದ ಜನರು ನಿರ್ಧರಿಸುತ್ತಾರೆ ಎಂದು ಹೇಳಿದರು. ನಾನು ಸಾಯಲು ಬೇಕಾದರೂ ಸಿದ್ಧ, ಆದರೆ ನಾನು ಯಾರ ಆಶ್ರಯವನ್ನು ಬೇಡಿಕೊಂಡು ಹೋಗುವುದಿಲ್ಲ. ಇದೇ ವೇಳೆ ಸಂಜಯ್ ರಾವುತ್ ಕುಟುಂಬವನ್ನೂ ಭೇಟಿ ಮಾಡಿದ ಅವರು, ಯಾವುದೇ ಕಾರಣಕ್ಕೂ ಸಂಜಯ್ ರಾವುತ್ ತಲೆಬಾಗೋದಿಲ್ಲ ಎಂದು ಹೇಳಿದರು.
ಕಳೆದ 6 ವರ್ಷದಲ್ಲಿ ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಆಪರೇಷನ್ ಕಮಲ, 4 ಬಾರಿ ಸಕ್ಸಸ್!
ದಾಖಲೆಗಳನ್ನು ಆಧರಿಸಿಯೇ ಇಡಿಯ ಕ್ರಮ: ಶಿವಸೇನೆ ನಾಯಕ ಸಂಜಯ್ ರಾವತ್ ವಿರುದ್ಧ ಜಾರಿ ನಿರ್ದೇಶನಾಲಯದ ಕ್ರಮವು ಕೆಲವು ಪುರಾವೆಗಳನ್ನು ಆಧರಿಸಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. "ಇಡಿ ರಾಷ್ಟ್ರೀಯ ತನಿಖಾ ಸಂಸ್ಥೆಯಾಗಿದೆ. ಇದು ದಾಖಲೆಗಳು ಮತ್ತು ಪುರಾವೆಗಳ ಆಧಾರದ ಮೇಲೆ ರಾವುತ್ ವಿರುದ್ಧ ಕ್ರಮ ಕೈಗೊಂಡಿರಬೇಕು. ಈ ವಿಷಯದ ಬಗ್ಗೆ ನಾನು ಮುಂದೆ ಪ್ರತಿಕ್ರಿಯಿಸುವುದಿಲ್ಲ. ಅವರ ಬಂಧನ ಮತ್ತು ಇತರ ಸಂಬಂಧಿತ ವಿಷಯಗಳನ್ನು ನ್ಯಾಯಾಲಯದಲ್ಲಿ ಚರ್ಚಿಸಲಾಗುವುದು" ಎಂದು ಫಡ್ನವಿಸ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ