
ಕಾಶ್ಮೀರ(ಸೆ.02): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ 6 ಲಕ್ಷ ಕೋಟಿ ರೂಪಾಯಿಯ ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆ ಜಾರಿಗೆ ತಂದಿದೆ. ಕೇಂದ್ರದ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೇಂದ್ರದ ಮೇಲೆ ಹರಿಹಾಯ್ದಿದೆ. ಬಿಜೆಪಿ ದೇಶವನ್ನೇ ಮಾರಲು ಹೊರಟಿದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದರು. ಈ ಆರೋಪ-ಪ್ರತ್ಯಾರೋಪಗಳ ನಡುವೆ ನರೇಂದ್ರ ಮೋದಿ ಸರ್ಕಾರವನ್ನು ಸದಾ ವಿರೋಧಿಸುವ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಇದೀಗ ಕೇಂದ್ರದ ರಾಷ್ಟ್ರೀಯ ನಗದೀಕರಣ ಯೋಜನೆ ಮೆಚ್ಚಿಕೊಂಡಿದ್ದಾರೆ. ಇಷ್ಟೇ ಅಲ್ಲ ವಿರೋಧಿಸಲು ಕಾರಣವಿಲ್ಲ ಎಂದಿದ್ದಾರೆ.
ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್‌ಗೆ ಚಾಲನೆ; 6 ಲಕ್ಷ ಕೋಟಿ ರೂ ಯೋಜನೆ ಘೋಷಿಸಿದ ನಿರ್ಮಲಾ!
ರಾಷ್ಟ್ರೀಯ ನಗದೀಕರಣ ಯೋಜನೆಯಲ್ಲಿ ಆಸ್ತಿಗಳನ್ನು ಖಾಸಗೀಕರಣ ಮಾಡುತ್ತಿಲ್ಲ. ದೇಶದ ಆಸ್ತಿಗಳನ್ನು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ನೀಡುತ್ತಿಲ್ಲ. ಈ ಯೋಜನೆಯಲ್ಲಿ ಅಂತಹ ಅಂಶಗಳಿದ್ದರೆ ಖಂಡಿತವಾಗಿ ನಾನು ಕೇಂದ್ರವನ್ನು ಪ್ರಶ್ನೆ ಮಾಡುತ್ತಿದ್ದೆ. ಇಷ್ಟೇ ಅಲ್ಲ ಆಸ್ತಿ ನಗದೀಕರಣ ಯೋಜನೆಯಲ್ಲಿ ಭೂಮಿ ಮಾರಾಟ ಮಾಡುವುದು ಒಳಗೊಂಡಿರುವುದಿಲ್ಲ. ಇದು ಸರ್ಕಾರದ ಬ್ರೌನ್‌ಫೀಲ್ಡ್ ಆಸ್ತಿಗಳಿಂದ ಹಣ ಸಂಗ್ರಹ ಯೋಜನೆಯಾಗಿದೆ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆ ಮೆಚ್ಚಿಕೊಂಡಿರುವ ಓಮರ್ ಅಬ್ದುಲ್ಲಾ ಎಚ್ಚರಿಕೆಯನ್ನು ನೀಡಿದ್ದಾರೆ. ಆಸ್ತಿ ನಗದೀಕರಣ ಪೈಪ್‌ಲೈನ್ ಯೋಜನೆ ಬಿಡ್ಡಿಂಗ್ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು ಎಂದಿದ್ದಾರೆ.
ನಗದೀಕರಣ ಹಾಗೂ ಖಾಸಗೀಕರಣದ ವ್ಯತ್ಯಾಸ ಗುರುತಿಸುವುದು ಮುಖ್ಯ. ಕೇಂದ್ರದ ಆಸ್ತಿ ನಗದೀಕರಣದಲ್ಲಿ ಆಸ್ತಿಯನ್ನು ಲೀಸ್‌ಗೆ ಅಥವಾ ಬಾಡಿಗೆ ನೀಡುತ್ತದೆ. ಆದರೆ ಆಸ್ತಿಯ ಮಾಲೀಕತ್ವವನ್ನು ವರ್ಗಾಯಿಸುವುದಿಲ್ಲ ಎಂದು ಜಮ್ಮು ಕಾಶ್ಮೀರ ನ್ಯಾಶಲ್ ಕಾನ್ಫೆರೆನ್ಸ್ ಪಕ್ಷದ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ದೇಶದ ಆಸ್ತಿ ಮಾರಿದ್ದೇ ಕಾಂಗ್ರೆಸ್: ರಾಹುಲ್ ಮೇಲೆ ನಿರ್ಮಲಾ ಕಿಡಿ!
ದೇಶದ ಅಭಿವೃದ್ಧಿ ಹಾಗೂ ಹಣಕಾಸು ಮೂಲ ಬಲಪಡಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆಗೆ ಚಾಲನೆ ನೀಡಿತ್ತು. ಆಗಸ್ಟ್ 23 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಯೋಜನೆ ಘೋಷಿಸಿದ್ದಾರೆ. ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ 6 ಲಕ್ಷ ಕೋಟಿ ರೂಪಾಯಿಯ ರಾಷ್ಟ್ರೀಯ ನಗದೀಕರಣ ಯೋಜನೆ ಘೋಷಿಸಲಾಗಿದೆ.
ಕೇಂದ್ರ ಘೋಷಿಸಿದ ನಾಲ್ಕು ವರ್ಷಗಳ ಈ ಯೋಜನೆಯನ್ನು ಕಾಂಗ್ರೆಸ್ ವಿರೋಧಿಸಿದೆ. ಬಿಜೆಪಿ ದೇಶದ ಆಸ್ತಿ ಜೊತೆಗೆ ಭಾರತವನ್ನೇ ಮಾರಾಟ ಮಾಡಲು ಹೊರಟಿದೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಿರ್ಮಲಾ ಸೀತಾರಾಮನ್, ದೇಶದ ಆಸ್ತಿ ಮಾರಿ ಹಣ ಜೇಬಿಗಿಸಿದ್ದು ಕಾಂಗ್ರೆಸ್ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ