ನವದೆಹಲಿ (ಜೂ.11): ಕೊರೋನಾ 3ನೇ ಅಲೆ ಮಕ್ಕಳಿಗೆ ಬಾಧಿಸಬಹುದು ಎಂಬ ತಜ್ಞರ ಮುನ್ಸೂಚನೆ ಬೆನ್ನಲ್ಲೇ, ಕೇಂದ್ರ ಸರ್ಕಾರವು 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಕೋವಿಡ್ ನಿರ್ವಹಣೆಗೆಂದು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ. ಇದರಲ್ಲಿ ರೆಮ್‌ಡೆಸಿವಿರ್ ಅನ್ನು ಮಕ್ಕಳಿಗೆ ನೀಡಕೂಡದು ಎಂದು ಶಿಫಾರಸು ಮಾಡಲಾಗಿದೆ. ಸರಿಯಾದ ಸಮಯದಲ್ಲಿ ಮಾತ್ರ ಸ್ಟಿರಾಯ್ಡ್ ಬಳಸಬೇಕು. ಸೋಂಕಿನ ಲಕ್ಷಣರಹಿತ ಮಕ್ಕಳಿಗೆ ಹಾಗೂ ಕಮ್ಮಿ ರೋಗಲಕ್ಷಣ ಹೊಂದಿದ ಮಕ್ಕಳಿಗೆ ಸ್ಟಿರಾಯ್ಡ್ ನೀಡಬಾರದು ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಶಿಫಾರಸುಗಳೇನು?
- ಸೋಂಕಿತರಿಗೆ ತುರ್ತುಬಳಕೆಗೆಂದು ಈವರೆಗೆ ನೀಡಲಾಗುತ್ತಿದ್ದ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಮಕ್ಕಳಿಗೆ ನೀಡಕೂಡದು. ಏಕೆಂದರೆ 18 ವರ್ಷದ ಕೆಳಗಿನ ಮಕ್ಕಳ ಮೇಲೆ ರೆಮ್‌ಡೆಸಿವಿರ್ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಯಾವುದೇ ದತ್ತಾಂಶ ಲಭ್ಯವಿಲ್ಲ.
- ಶ್ವಾಸಕೋಶದ ಮೇಲೆ ಸೋಂಕಿನ ಪರಿಣಾಮ ಉಂಟಾಗಿದೆಯೇ ಎಂಬುದನ್ನು ನೋಡಲು ಹೈ-ರೆಸಲ್ಯೂಶನ್ ಸಿಟಿ(ಎಚ್‌ಆರ್‌ಸಿಟಿ) ಸ್ಕಾನ್ ಅನ್ನು ವಿವೇಚನೆಯಿಂದ ಮಾಡಬೇಕು. ತೀರಾ ಅಗತ್ಯವಿದ್ದರೆ ಮಾತ್ರ ವೈದ್ಯರು ಎಚ್‌ಆರ್‌ಸಿಟಿ ಮಾಡಬೇಕು.
ಯಾವ ಲಸಿಕೆ ಪಡೆಯಲಿ? ರಾಜ್ಯದ ಜನರಲ್ಲಿ ಇನ್ನೂ ಗೊಂದಲ! ...
- ಲಕ್ಷಣರಹಿತ ಸೋಂಕಿತ ಮಕ್ಕಳಿದ್ದರೆ ಇಂಥದ್ದೇ ಔಷಧ ನೀಡಬೇಕು ಎಂದೇನಿಲ್ಲ. ಇಂಥ ಮಕ್ಕಳು ಮಾಸ್ಕ್ ಧರಿಸಬೇಕು. ಸ್ವಚ್ಛತೆ ಕಾಯ್ದುಕೊಳ್ಳಬೇಕು. ಸಾಮಾಜಿಕ ಅಂತರ ಪಾಲಿಸಬೇಕು ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು.
- ಸೋಂಕಿನ ಸೌಮ್ಯಲಕ್ಷಣಗಳಿದ್ದರೆ 10-15 ಎಂಜಿ/ಕೆಜಿ/ಡೋಸ್ ಪ್ಯಾರಾಸಿಟಮಾಲ್ ಅನ್ನು 4-6 ತಾಸಿಗೊಮ್ಮೆ ನೀಡಬೇಕು. ಕೆಮ್ಮು, ಗಂಟಲು ನೋವು ಇದ್ದರೆ ಉಪ್ಪು ನೀರಿನಿಂದ ಗಾರ್ಗಲ್ ಮಾಡಬೇಕು.
- ಮಧ್ಯಮ ಪ್ರಮಾಣದ ಸೋಂಕು ಲಕ್ಷಣಗಳಿದ್ದರೆ ಆಕ್ಸಿಜನ್ ಥೆರಪಿ ಅಗತ್ಯ. ಇವರಿಗೆ ಸ್ಟಿರಾಯ್ಡ್ ಬೇಡ. ಸೋಂಕು ವೇಗವಾಗಿ ಹರಡುತ್ತತಿದ್ದರೆ ಮಾತ್ರ ನೀಡಬಹುದು.
ಕೊರೋನಾ ಕಾಟ: 8 ಜಿಲ್ಲೆಗಳಲ್ಲಿ ಮತ್ತೊಂದು ವಾರ ಲಾಕ್‌ಡೌನ್ .
- ತೀವ್ರ ಸ್ವರೂಪದ ಸೋಂಕು ಲಕ್ಷಣವಿದ್ದ ಮಕ್ಕಳಿಗೆ ಉಸಿರಾಟ ಸಮಸ್ಯೆ ಉಂಟಾಗಬಹುದು. ಆ ವೇಳೆ ತುರ್ತಾಗಿ ಆಸ್ಪತ್ರೆಗೆ ದಾಖಲು ಮಾಡುವುದು ಅಗತ್ಯ. ಬ್ಯಾಕ್ಟೀರಿಯಾ ಸೋಂಕು ತೀವ್ರವಾಗಿದ್ದರೆ ದೇಹದಲ್ಲಿನ ಸೂಕ್ಷ್ಮಜೀವಿಗಳನ್ನು ಕೊಲ್ಲುವಂಥ ಔಷಧ ನೀಡಬೇಕು. ಅಂಗಾಂಗ ವೈಫಲ್ಯ ಸಂಭವಿಸುವುದಿದ್ದರೆ ಅಂಗಾಂಗ ಬದಲಾವಣೆ ಚಿಕಿತ್ಸೆ ನೀಡಬೇಕು: ಉದಾ: ಮೂತ್ರಪಿಂಡ ಕಸಿ.
- ಮಕ್ಕಳು ಆರೋಗ್ಯವಂತರಾಗಿದ್ದಾರಾ ಎಂಬುದನ್ನು ಪಾಲಕರು ಗಮನಿಸಬೇಕು. 12 ವರ್ಷಕ್ಕಿಂತ ಮೇಲ್ಪಟ್ಟಮಕ್ಕಳ ಬೆರಳಿಗೆ ಪಲ್ಸ್ ಆಕ್ಸಿಮೀಟರ್ ಹಾಕಿ 6 ನಿಮಿಷ ವಾಕ್ ಮಾಡುವಂತೆ ಹೇಳಿ ಆರೋಗ್ಯ ಗಮನಿಸಬೇಕು.
- ಇದೇ ವೇಳೆ, 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾಸ್ಕ್ ಧರಿಸುವ ಅಗತ್ಯವಿಲ್ಲ.
- 6ರಿಂದ 11 ವರ್ಷದ ಮಕ್ಕಳು ಪಾಲಕರು ಹಾಗೂ ವೈದ್ಯರ ನಿಗಾದಲ್ಲಿ ಮಾತ್ರ ಮಾಸ್ಕ್ ಧರಿಸಬೇಕು.