- ಭವಿಷ್ಯದಲ್ಲಿ ವಿಜಯೇಂದ್ರಗೆ ದೊಡ್ಡ ಅವಕಾಶ ನೀಡುವ ಭರವಸೆ..
- ಮುಂದೆ ಬೇರೆ ಅವಕಾಶಗಳು ವಿಜಯೇಂದ್ರಗೆ ಇದೆ.
- ಟಿಕೆಟ್ ತಪ್ಪಿದ್ದಕ್ಕೆ ಬಿಎಲ್ ಸಂತೋಷ್ ಕಾರಣ ಅಲ್ಲ
ವರದಿ:ರವಿ ಶಿವರಾಮ್ , ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಮೇ.25) ಪ್ರತಿ ಬಾರಿ ರಾಜ್ಯದಲ್ಲಿ ಯಾವುದೇ ವಿಧಾನಸಭೆ ಉಪಚುನಾವಣೆ ಎದುರಾದಾಗಲೂ ಬಿ ವೈ ವಿಜಯೇಂದ್ರ ಹೆಸರು ಮುನ್ನಲೆಗೆ ಬರುತ್ತದೆ. ಅದು ಶಿರಾ ಇರಬಹುದು, ಕೆಆರ್ ಪೇಟೆ, ಬಸವಕಲ್ಯಾಣ, ಹಾನಗಲ್ ಹೀಗೆ ಉಪಚುನಾವಣೆ ನಡೆದ ಎಲ್ಲಾ ಕಡೆ ಬಿ ವೈ ವಿಜಯೇಂದ್ರ ಸ್ಪರ್ಧೆ ಮಾಡ್ತಾರಂತೆ ಎನ್ನುವ ಮಾತು ಕೇಳಿ ಬರುತ್ತಿರುತ್ತದೆ. ಆದ್ರೆ ಇದೇ ಮೊದಲ ಬಾರಿಗೆ ವಿಜಯೇಂದ್ರ ಹೆಸರು ಪರಿಷತ್ ಗೂ ಕೇಳಿ ಬಂದಿದ್ದು ಮಾತ್ರವಲ್ಲ. ಅವರ ಹೆಸರು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪಗೊಂಡು , ಹೈಕಮಾಂಡ್ ಗೆ ಹೆಸರನ್ನು ಶಿಫಾರಸು ಕೂಡ ಮಾಡಿದ್ರು. ಕೋರ್ ಕಮಿಟಿ ಹೆಸರು ಶಿಫಾರಸು ಮಾಡಿತ್ತು ನಿಜ.ಆದ್ರೆ ಹೈಕಮಾಂಡ್ ವಿಜಯೇಂದ್ರಗೆ ಟಿಕೆಟ್ ನೀಡಿಲ್ಲ ಎನ್ನುವ ಸತ್ಯ ಕೋರ್ ಕಮಿಟಿ ಸದಸ್ಯರಲ್ಲೆರಿಗೂ ಬಹುತೇಕ ಗೊತ್ತಿತ್ತು. ಅಂದುಕೊಂಡಂತೆ ನೆನ್ನೆ ವಿಧಾನ ಪರಿಷತ್ ಟಿಕೆಟ್ ಘೋಷಣೆ ಮಾಡಲಾಯಿತಾದ್ರೂ ಆ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಇರಲಿಲ್ಲ.
ವಿಜಯೇಂದ್ರಗೆ ಟಿಕೆಟ್ ನೀಡದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಅವರವರ ಮೂಗಿನ ನೇರಕ್ಕೆ ಒಂದಿಷ್ಟು ಕಮೆಂಟ್ ಮಾಡಿದ್ರು. ಕೆಲವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮೇಲು ಆರೋಪ ಮಾಡಿದ್ರು. ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದ್ದು ಬಿ ಎಲ್ ಸಂತೋಷ್ ಎನ್ನುವ ಚರ್ಚೆ ಹರಿ ಬಿಟ್ರು. ಆದ್ರೆ ಈ ಎಲ್ಲ ಆರೋಪಕ್ಕೆ ಸ್ವತಃ ಬಿ ಎಸ್ ಯಡಿಯೂರಪ್ಪ ಉತ್ತರ ನೀಡಿದ್ದಾರೆ.
ಪರಿಷತ್ ಟಿಕೆಟ್ ಗಿಟ್ಟಿಸಿಕೊಂಡ ಗಟ್ಟಿಗಿತ್ತಿ ಹೇಮಲತಾ ನಾಯಕ ಯಾರು? ಹೈಕಮಾಂಡ್ ಗುರುತಿಸಿದ್ದೇಗೆ?
ವಿಜಯೇಂದ್ರಗೆ ಮುಂದೆ ದೊಡ್ಡ ಅವಕಾಶ ಇದೆ ಎಂದ ಯಡಿಯೂರಪ್ಪ"
ಹೌದು, ವಿಜಯೇಂದ್ರಗೆ ಟಿಕೆಟ್ ನೀಡದ ಬಗ್ಗೆ ಇಂದು ವಿಧಾನಸೌಧದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರಗೆ ಟಿಕೆಟ್ ತಪ್ಪಿದ್ದರ ಬಗ್ಗೆ ವಿಶೇಷ ಅರ್ಥ ಕಲ್ಪಿಸೋದು ಬೇಡ ಎಂದು ತಿಳಿಸಿದ್ರು. ಸಹಜವಾಗಿ ವಿಜಯೇಂದ್ರಗೆ ಭವಿಷ್ಯದಲ್ಲಿ ದೊಡ್ಡ ಅವಕಾಶ ಕಲ್ಪಿಸಿಕೊಡುವ ಭರವಸೆ ನನಗೆ ಇದೆ ಎಂದ ಬಿಎಸ್ ವೈ, ಸಾಮರ್ಥ್ಯ ಮತ್ತು ಪಕ್ಷದಲ್ಲಿ ನಿಷ್ಠೆ ಇರುವವರಿಗೆ ಪಕ್ಷ ಯಾವತ್ತೂ ಕೈಬಿಡಲ್ಲ ಎನ್ನುವ ಮೂಲಕ ವಿಜಯೇಂದ್ರಗೆ ಸಾಮರ್ಥ್ಯ ಮತ್ತು ಪಕ್ಷ ನಿಷ್ಠೆ ಎರಡು ಇದೆ ಎನ್ನೋದನ್ನ ಸೂಚ್ಯವಾಗಿ ಹೇಳಿದ್ರು.
ಟಿಕೆಟ್ ಕೈ ತಪ್ಪಲು ಬಿಎಲ್ ಸಂತೋಷ್ ಕಾರಣ ಅಲ್ಲ
ವಿಜಯೇಂದ್ರಗೆ ಟಿಕೆಟ್ ತಪ್ಪಲು ಬಿಎಲ್ ಸಂತೋಷ್ ಕಾರಣವೇ ಎನ್ನುವ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಇಲ್ಲ ಆತರ ಏನೂ ಇಲ್ಲ. ಮಾಧ್ಯಮದಲ್ಲಿ ಈ ಬಗ್ಗೆ ಅಗತ್ಯ ಚರ್ಚೆ ಆಗುತ್ತಿದೆ ಎಂದು ಹೇಳಿದ್ರು. ವಿಜಯೇಂದ್ರಗೆ ಬೇರೆ ಬೇರೆ ಅವಕಾಶಗಳನ್ನು ವರಿಷ್ಠರು ಮಾಡಿಕೊಡ್ತಾರೆ. ಈಗ ವಿಜಯೇಂದ್ರ ಪಕ್ಷದ ಉಪಾಧ್ಯಕ್ಷ ಆಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಅವಕಾಶ ಮಾಡಿ ಕೊಡ್ತಾರೆ. ಇದೆಲ್ಲ ಪ್ರಧಾನಿ ಮೋದಿಯವ್ರು, ಜೆ ಪಿನಡ್ಡಾ ಅವರಿಗೆ ಬಿಟ್ಟ ವಿಚಾರ ಎಂದು ಯಡಿಯೂರಪ್ಪ ಹೇಳಿದ್ದಾರೆ. ಶೀಘ್ರದಲ್ಲೇ ಪಕ್ಷದಲ್ಲಿ ಕೆಲವು ಮಾರ್ಪಾಡುಗಳಾಗಬಹುದು ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ತಮ್ಮ ಪುತ್ರ ವಿಜಯೇಂದ್ರಗೆ ಹೆಚ್ಚಿನ ಜವಾಬ್ದಾರಿಗಳನ್ನು ಕೊಡಬಹುದು ಎಂಬ ಮಾತುಗಳನ್ನು ಹೇಳಿದ್ದಾರೆ.
ಮುಂದಿನ ವಿಧಾಸಭೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಸಿಗುತ್ತಾ?
ಹಾಗಾದರೆ ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಸಿಗಬಹುದೇ ಎನ್ನುವ ಪ್ರಶ್ನೆಗೆ,ಈಗಲೇ ಅದರ ಬಗ್ಗೆ ಯಾಕೆ ಚರ್ಚೆ ಮಾಡೋದು,ಸಮಯ ಬಂದಾಗ ಅದರ ಬಗ್ಗೆ ನೋಡೋಣ ಎಂದು ತೆರಳಿದರು.
2023ಕ್ಕೆ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು
ಇನ್ನು ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಮತ್ತು ಬರಲಿದೆ ಎನ್ನುವ ವಿಶ್ವಾಸದ ಮಾತುಗಳನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ಮುಂದೆ ಮತ್ತೆ ಪಕ್ಷ ಅಧಿಕಾರಕ್ಕೆ ಬರಬೇಕು
ಅನ್ನೋದು ನಮ್ಮ ಗುರಿ,ಆ ದಿಕ್ಕಿನಲ್ಲಿ ಏನೆಲ್ಲ ಪ್ರಯತ್ನಗಳನ್ನು ಮಾಡಬೇಕೋ ಅದನ್ನು ಈಗಿಂದಲೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ ಬಿಎಸ್ ವೈ, ಮೋದಿಯವರ ನೇತೃತ್ವದಲ್ಲಿ ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ ಮತ್ತೆ ನಾವೇ ಅಧಿಕಾರಕ್ಕೆ ಬರ್ತೇವೆ ಎಂಬ ಗಟ್ಡಿ ವಿಶ್ವಾಸ ಮೂಡಿಸಿದ್ದಾರೆ.
ಲಕ್ಷ್ಮಣ ಸವದಿಗೆ ಸಾಲು-ಸಾಲು ಆಫರ್, ಹೈಕಮಾಂಡ್ ಲೆಕ್ಕಾಚಾರವೇ ಬೇರೆ..!
ವಿಜಯೇಂದ್ರಗೆ ನಾಲ್ಕು ಕಡೆ ಗೆಲ್ಲುವ ಶಕ್ತಿ ಇದೆ ಸಿಟಿ ರವಿ
ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿಟಿ ರವಿ, ವಿಜಯೇಂದ್ರಗೆ ಟಿಕೆಟ್ ನಿರಾಕರಣೆ ಮಾಡಿದ ಮೇಲೆ ಹುಟ್ಟಿರುವ ಕೆಲವು ಊಹಾಪೋಹಗಳಿಗೆ ಸಿಟಿ ರವಿ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಈ ರೀತಿ ಬೇರೆ ಬೇರೆ ವ್ಯಾಖ್ಯಾನಗಳು ಇರುತ್ತವೆ. ವಿಜಯೇಂದ್ರಗೆ ಎರಡು ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ ಇದೆ ಎಂದ ಅವರು ನಿನ್ನೆ ಕೂಡ ಅವರ ಜೊತೆ ಮಾತಾಡಿದ್ದೇನೆ ಎಂದು ತಿಳಿಸಿದ್ದಾರೆ.ವಿಜಯೇಂದ್ರ ಹಾಲಿ ಪಕ್ಷದಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಮುಂದೆ ಅವರಿಗೆ ಪಕ್ಷದಲ್ಲಿ ಹೆಚ್ಚಿನ ಜವಬ್ದಾರಿ ಸಿಗುತ್ತದೆ ಎನ್ನುವ ಅರ್ಥದಲ್ಲಿ ಮಾತಾಡಿದ್ದಾರೆ.
ಬಿಜೆಪಿ ಅಲಿಖಿತ ನಿಯಮ ವಿಜಯೇಂದ್ರಗೆ ಅಡ್ಡಿ
ಹಾಲಿ ಶಾಸಕರು ಸಂಸದರ ಮಕ್ಕಳಿಗೆ ಕುಟುಂಬಕ್ಕೆ ಟಿಕೆಟ್ ತಪ್ಪಿದ್ರೆ ಅದಕ್ಕೆ ನನ್ನನ್ನು ಹೊಣೆ ಮಾಡಿ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಇತ್ತಿಚೆಗೆ ಪಾರ್ಟಿಯ ಸಂಘಟನಾ ಕಾರ್ಯಕ್ರಮದಲ್ಲಿ ಹೇಳಿದ್ದರು. ಕೌಟುಂಬಿಕ ರಾಜಕೀಯ ಪಕ್ಷದಲ್ಲಿ ಇರಬಾರದು ಎನ್ನುವ ಬಿಜೆಪಿಯ ಅಲಿಖಿತ ನಿಯಮದ ಆಧಾರದ ಮೇಲೆ ವಿಜಯೇಂದ್ರಗೆ ಪಕ್ಷ ಟಿಕೆಟ್ ನೀಡಿಲ್ಲ ಎನ್ನುತ್ತಿವೆ ಮೂಲಗಳು. ಯಡಿಯೂರಪ್ಪ ಹಾಲಿ ಶಾಸಕರಾಗಿದ್ದು ನಿಕಟಪೂರ್ವ ಮುಖ್ಯಮಂತ್ರಿ ಇದ್ದಾರೆ. ಅವರ ಹಿರಿಯ ಮಗ ರಾಘವೇಂದ್ರ ಹಾಲಿ ಸಂಸದ. ಹೀಗಿರುವಾಗ ಯಡಿಯೂರಪ್ಪ ಸಕ್ರಿಯ ರಾಜಕೀಯದಲ್ಲಿ ಇರುವಾಗಲೇ ಅವರ ಮತ್ತೊಬ್ಬ ಮಗನಿಗೂ ಹುದ್ದೆ ನೀಡಿದ್ರೆ, ಕಾರ್ಯಕರ್ತರಿಗೆ ನೈತಿಕವಾಗಿ ಉತ್ತರಿಸೋದು ಕಷ್ಟ. ಜೊತೆಗೆ ವಿಪಕ್ಷಗಳ ಮೇಲೆ ಕುಟುಂಬ ರಾಜಕೀಯದ ಅಸ್ತ್ರ ಪ್ರಯೋಗಿಸುವ ಪ್ರಧಾನಿ ಮೋದಿ ಮತ್ತು ಪಕ್ಷಕ್ಕೆ ಪ್ರಭಲ ಅಸ್ತ್ರವೊಂದು ಕೈ ತಪ್ಪಲಿದೆ ಎನ್ನುವ ಕಾರಣಕ್ಕೆ ವಿಜಯೇಂದ್ರಗೆ ಟಿಕೆಟ್ ನೀಡಿಲ್ಲ ಎನ್ನುತ್ತಿವೆ ಮೂಲಗಳು. ಆದ್ರೆ 2023 ರ ಚುನಾವಣೆಗೆ ವಿಜಯೇಂದ್ರಗೆ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ...