Yasin Malik Sentenced ಕಾಶ್ಮೀರ ಪ್ರತ್ಯೇಕತಾವಾದಿ ಉಗ್ರ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ!

By Suvarna NewsFirst Published May 25, 2022, 6:17 PM IST
Highlights
  • ಉಗ್ರ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ!

  • ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಪೂರೈಕೆ 

  • ಕಲ್ಲು ತೂರಾಟ ನಡೆಸಿದ ಘಟನೆಗಳು ಆಕಸ್ಮಿಕವಲ್ಲ

ನವದೆಹಲಿ (ಮೇ. 25): ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿದ್ದ ಆರೋಪದ ಮೇಲೆ ದೋಷಿ ಎಂದು ಸಾಬೀತಾಗಿರುವ ಉಗ್ರ ಯಾಸಿನ್ ಮಲಿಕ್‌ ಗೆ  ದೆಹಲಿಯ ಎನ್‌ಐಎ ನ್ಯಾಯಾಲಯ ಜೀವಾವದಿ ಶಿಕ್ಷೆ  ಪ್ರಕಟಿಸಿದೆ. 5 ಪ್ರಕರಣಗಳಿಗೆ ಸಂಬಂಧಿಸಿ ಇಂದು ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಎರಡು ಜೀವಾವಧಿ ಶಿಕ್ಷೆ ಜೊತೆಗೆ 10 ವರ್ಷಗಳ ಕಠಿಣ ಶಿಕ್ಷೆಯನ್ನು ದೆಹಲಿ ನ್ಯಾಯಾಲಯ ವಿಧಿಸಿದೆ. ಒಂದು ಪ್ರಕರಣದಲ್ಲಿ 10 ಲಕ್ಷ ರೂಪಾಯಿ, ಎರಡನೇ ಪ್ರಕರಣದಲ್ಲಿ 5 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.

ಭಾರಿ ಭದ್ರತೆಯೊಂದಿಗೆ ಯಾಸಿನ್ ಮಲಿಕ್‌ನನ್ನೂ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಇತ್ತ ಯಾಸಿನ್ ಮಲಿಕ್ ಪರ ಕಾಶ್ಮೀರದ ಕೆಲ ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಶ್ರೀನರದಲ್ಲಿರುವ ಯಾಸಿನ್ ಮಿಲಿಕ್ ನಿವಾಸದ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. 

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಮಾಡುವ ಸಲುವಾಗಿ ಪಾಕಿಸ್ತಾನದಿಂದ ಹಣ ಪಡೆದ ಆರೋಪವನ್ನು ಯಾಸಿನ್ ಮಲಿಕ್ ಮೇಲೆ ಹೊರಿಸಲಾಗಿತ್ತು. ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೇರಿದಂತೆ ಎಲ್ಲಾ ಆರೋಪಗಳ ಬಗ್ಗೆ ಯಾಸಿನ್ ಮಲಿಕ್ ಕಳೆದ ಮಂಗಳವಾರ ತಪ್ಪೊಪ್ಪಿಕೊಂಡ ನಂತರ ಅವರನ್ನು ಕೋರ್ಟ್ ದೋಷಿ ಎಂದು ಘೋಷಿಸಿತ್ತು.

ನನಗೆ ಪಾಕ್‌ ಅಂದ್ರೆ ಇಷ್ಟ, ನೀನಂದ್ರೆ ಇನ್ನೂ ಇಷ್ಟ: ಹುಡುಗಿಯ ಸೌಂದರ್ಯಕ್ಕೆ ಫಿದಾ ಆಗಿದ್ದ ಯಾಸಿನ್ ಮಲಿಕ್

ದೆಹಲಿಯ ತಿಹಾರ್ ಜೈಲಿನಲ್ಲಿ 2019ರಿಂದಲೂ ಭಾರಿ ಭದ್ರತೆಯಲ್ಲಿರುವ ಯಾಸಿನ್ ಮಲಿಕ್ ವಿರುದ್ಧ ಯುಎಪಿಎ ಕಾಯ್ದೆಯ ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ), 17 (ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ಸಂಗ್ರಹ), 18 (ಭಯೋತ್ಪಾದನಾ ಕೃತ್ಯ ಎಸಗಲು ಸಂಚು) ಮತ್ತು 20 (ಭಯೋತ್ಪಾದನಾ ಗುಂಪು ಅಥವಾ ಸಂಘಟನೆಯ ಸದಸ್ಯನಾಗಿರುವುದು), ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-B (ಅಪರಾಧ ಸಂಚು) ಮತ್ತು 124-A (ದೇಶದ್ರೋಹ) ಪ್ರಕರಣಗಳನ್ನು ದಾಖಲಿಸಲಾಗಿದೆ. ಆತನ ವಿರುದ್ಧ ಹಾಕಲಾದ ಯಾವುದೇ ಆರೋಪಗಳಿಗೆ ಯಾಸಿನ್ ಮಲಿಕ್ ಒಂಚೂರು ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.

"ಬುರ್ಹಾನ್ ವಾನಿ ಎನ್‌ಕೌಂಟರ್ ಆದ 30 ನಿಮಿಷಗಳಲ್ಲಿ ನನ್ನನ್ನು ಬಂಧಿಸಲಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರು ನನಗೆ ಪಾಸ್‌ಪೋರ್ಟ್ ಮಂಜೂರು ಮಾಡಿದರು ಮತ್ತು ನಾನು ಕ್ರಿಮಿನಲ್ ಅಲ್ಲದ ಕಾರಣ ಹೇಳಿಕೆ ನೀಡಲು ಭಾರತ ನನಗೆ ಅವಕಾಶ ಮಾಡಿಕೊಟ್ಟಿತು" ಎಂದು ಯಾಸಿನ್ ಮಲಿಕ್ ನ್ಯಾಯಾಲಯದಲ್ಲಿ ಹೇಳಿದ್ದರು. ಈ ಮೊದಲು ಯಾಸಿನ್ ಮಲಿಕ್ ವಿರುದ್ಧ ಯಾವುದೇ ಪ್ರಕರಣ ನಡೆಯುತ್ತಿರಲಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಮರಣದಂಡನೆಯಾಗಿರುವ ಸೆಕ್ಷನ್ 121 (ಸರ್ಕಾರದ ವಿರುದ್ಧ ಸಮರ ಸಾರುವುದು) ಅಡಿಯಲ್ಲಿ ಗರಿಷ್ಠ ಶಿಕ್ಷೆಯನ್ನು NIA ಒತ್ತಾಯಿಸಿದೆ. ಕನಿಷ್ಠ ಶಿಕ್ಷೆಯಾಗಿ ಜೀವಾವಧಿಯನ್ನು ನೀಡಬೇಕು ಎಂದು ಕೇಳಿಕೊಂಡಿದೆ.

1994 ರಲ್ಲಿ ಅವರು ಶಸ್ತ್ರಾಸ್ತ್ರ ತ್ಯಜಿಸಿದಾಗಿನಿಂದ ಮಹಾತ್ಮ ಗಾಂಧಿಯವರ ತತ್ವಗಳನ್ನು ಅನುಸರಿಸುತ್ತಿದ್ದೇನೆ ಎಂದು ಯಾಸಿನ್ ಮಲಿಕ್ ಹೇಳಿದರು. "ನಾನು ಕಾಶ್ಮೀರದಲ್ಲಿ ಅಹಿಂಸಾತ್ಮಕ ರಾಜಕೀಯವನ್ನು ಮಾಡುತ್ತಿದ್ದೇನೆ" ಎಂದೂ ಅವರು ಹೇಳಿದ್ದರು.

click me!