Kashmir sites for UNESCO: ಕಾಶ್ಮೀರದಲ್ಲಿ ಹೊಸ ಯುಗ ಆರಂಭ; ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಯೋಜನೆ!

By Suvarna NewsFirst Published Nov 26, 2021, 4:52 PM IST
Highlights
  • ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಯುಗ ಆರಂಭಕ್ಕೆ ಮಾಸ್ಟರ್ ಪ್ಲಾನ್
  • UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಿಸಲು ಯೋಜನೆ
  • ಕಾಶ್ಮೀರಕ್ಕೆ ಭೇಟಿ ನೀಡಿದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ ಅಧ್ಯಕ್ಷ ತರುಣ್ ವಿಜಯ್ 

ನವದೆಹಲಿ(ನ.26): ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and Kashmir) ಆರ್ಟಿಕಲ್ 370 ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶ ಮಾಡಿದ ಬಳಿಕ ಕಣಿವೆ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಕ್ಕಿದೆ. ಕಾಶ್ಮೀರ ನಿಧಾನವಾಗಿ ಪ್ರವಾಸೋದ್ಯಮ, ವಾಣಿಜ್ಯ ವ್ಯವಾಹಾರಕ್ಕೆ ತೆರೆದುಕೊಳ್ಳುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿಯ  ರಾಷ್ಟ್ರೀಯ ಸ್ಮಾರಕ  ಉಳಿಸುವಿಕೆ ಹಾಗೂ ಅಭಿವೃದ್ಧಿಯಿಂದ ಪ್ರೇರಿತರಾದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ(National Monuments Authority ) ಅಧ್ಯಕ್ಷ ತರುಣ್ ವಿಜಯ್(Tarun Vijay), ವಿಶ್ವ ಪರಂಪರೆಯ ಸಪ್ತಾಹದ ಸ್ಮರಣಾರ್ಥ ಕಾಶ್ಮೀರದ ಮಹತ್ವದ ಸ್ಮಾರಕಗಳಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಕಾಶ್ಮೀರದ ಕೆಲ ತಾಣಗಳನ್ನು UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಿಸುವ ಕುರಿತು ಮಹತ್ವದ ಸುಳಿವು ನೀಡಿದ್ದಾರೆ.

ಕಾಶ್ಮೀರ ವಿಶ್ವದರ್ಜೆಯ ಪಾರಂಪರಿಕ ತಾಣ(World Heritage Sites), ಸ್ಮಾರಕಗಳ ಮೇಲೆ ನಿಂತಿದೆ. ಭವ್ಯ ಭಾರತದ ಇತಿಹಾಸ ಹೇಳುವ, ಐತಿಹಾಸಿಕ ಮಂದಿರ, ದೇಗುಲಗಳಿಂದ(Temple) ಕೂಡಿರುವ ಹಾಗೂ ದೇಶದ ನಾಗರೀಕತೆಯ ಕುರುಹುಗಳಿರುವ ಕಾಶ್ಮೀರದ ಹಲವು ತಾಣಗಳು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಇಲ್ಲದಿರುವುದು ಬೇಸರದ ವಿಚಾರ ಎಂದು ತರುಣ್ ವಿಜಯ್ ಹೇಳಿದ್ದಾರೆ. ಮಾರ್ತಾಂಡ್, ಪರಿಹಸ್ಪೋರಾ, ನರನಾಗ್ ಮತ್ತು ಹರ್ವಾನ್ ಸೇರಿದಂತೆ ಕನಿಷ್ಠ ನಾಲ್ಕು ಪುರಾತತ್ವ ಸ್ಥಳಗಳು ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳಲ್ಲಿ ಇರಬೇಕು ಎಂದು ತರುಣ್ ವಿಜಯ್ ಹೇಳಿದ್ದಾರೆ.

ಸಿಂಧು ನಾಗರೀಕತೆಗೆ ಸೇರಿದ ಗುಜರಾತ್‌ನ ಹರಪ್ಪನ್ ನಗರಕ್ಕೆ ಯುನೆಸ್ಕೋ ವಿಶ್ವ ಪರಂಪರೆ ತಾಣ ಸ್ಥಾನಮಾನ!

ಮಾರ್ತಾಂಡ್, ಪರಿಹಸ್ಪೋರಾ, ನರನಾಗ್ ಮತ್ತು ಹರ್ವಾನ್  ಪುರಾತತ್ವ ಸ್ಥಳಗಳಿಗೆ ಭೇಟಿ ನೀಡಿದ ತರುಣ್ ವಿಜಯ್, ಕಾಶ್ಮೀರದಲ್ಲಿ ಭಯೋತ್ಪಾದಕರು(Terrorist) ಹಾಗೂ ಕಿಡಿಗೇಡಿಗಳಿಂದ ಶಿಥಿಲಗೊಂಡಿರುವ, ಸಂಪೂರ್ಣವಾಗಿ ನಾಶಗೊಂಡಿರುವ ಹಿಂದೂ ದೇವಾಲಯಗಳು(Hindu temples), ಬೌದ್ಧ ಸ್ಮಾರಗಳನ್ನು(Buddhist monuments) ಪುನರುತ್ಥಾನ ಮಾಡಲು ವರದಿಯನ್ನು ಸಿದ್ಧಪಡಿಸುವುದಾಗಿ ಹೇಳಿದ್ದಾರೆ. ಹಿರಿಯ ASI ರಾಜ್ಯ ಅಧಿಕಾರಿಗಳು ಸೇರಿದಂತೆ ರಾಜ್ಯ ಅಧಿಕಾರಿಗಳ ಜೊತೆ ತಾಣಗಳಿಗೆ ಭೇಟಿ ನೀಡಿದರು.  

ಈ ಕುರಿತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾಗೆ ವಿವರವಾದ ವರದಿ ಸಿದ್ದಪಡಿಸಿ ನೀಡುವುದಾಗಿ ತರುಣ್ ವಿಜಯ್ ಹೇಳಿದ್ದಾರೆ. ಅಪಘಾತದಿಂದ ಕಾಲಿಗೆ ಗಾಯಗೊಂಡಿದ್ದರೂ ಗಾಲಿ ಕುರ್ಚಿಯಲ್ಲಿ ತರುಣ್ ವಿಜಯ್ ಕಾಶ್ಮೀರ ತಾಣಗಳಿಗೆ ಭೇಟಿ ನೀಡಿದ್ದಾರೆ.  

ರಾಮಪ್ಪ ಮಂದಿರಕ್ಕೆ ಯುನೆಸ್ಕೂ ವಿಶ್ವ ಪಾರಂಪರಿಕ ತಾಣ ಸ್ಥಾನಮಾನ; ಪ್ರಧಾನಿ ಮೋದಿ ಅಭಿನಂದನೆ!

ಪರಿಹಸ್ಪೋರಾ ಅತ್ಯಂತ ಶ್ರೇಷ್ಠ ಇತಿಹಾಸ ಹೊಂದಿದೆ. ಚಕ್ರವರ್ತಿ ಲಲಿತಾದಿತನ್ಯ ರಾಜಧಾನಿಯಾಗಿದ್ದ ಪರಿಹಸ್ಪೋರಾ ಭವ್ಯ ಇತಿಹಾಸ ಹಾಗೂ ಹಲವು ಪುರಾತತ್ವ ಸ್ಮಾರಕಗಳನ್ನು ಹೊಂದಿದೆ. ಇಲ್ಲಿ ವಿಶ್ವದ ಅತೀ ದೊಡ್ಡ ಕಲ್ಲಿನ ಸ್ತೂಪವಿದೆ. ಆದರೆ ಭಯೋತ್ಪಾದಕರು, ಕಿಡಿಗೇಡಿಗಳ ದಾಳಿಗೆ ಈ ಸ್ತೂಪ ಶಿಥಿಲಗೊಂಡಿದೆ. ಪರಿಹರಸ್ಪೋರಾ ಭಾರತದ ಪಾರಂಪರಿಕ ತಾಣಗಳ ರತ್ನ ಎಂದೇ ಹೇಳಲಾಗುತ್ತದೆ. ಇಲ್ಲಿ 1,000 ವರ್ಷಗಳಿಗೂ ಹಳೆಯದಾದ  ರೈನಾವಾರಿ ಭೈರವ ದೇವಾಲಯವಿದೆ. ಆದರೆ ಈ ದೇವಾಲಯ ಸಂಪೂರ್ಣವಾಗಿ ನಾಶಗೊಂಡಿದೆ. ಇದರ ನವೀಕರಣಕ್ಕಾಗಿ ಯೋಜನೆ ಸಿದ್ದಪಡಿಸಿರುವುದಾಗಿ ತರುಣ್ ವಿಜಯ್ ಹೇಳಿದ್ದಾರೆ. 
 
ಕಾಶ್ಮೀರದ ಐತಿಹಾಸಿಕ ತಾಣಗಳು, ಇಲ್ಲಿರುವ ರಾಷ್ಟ್ರೀಯ ಸ್ಮಾರಕಗಳು ಶಿಥಿಲಗೊಂಡಿದೆ. ಹಲವು ಸ್ಮಾರಕಗಳ ಕುರುಹುಗಳು ಮಾತ್ರವಿದೆ. ವಿರೂಪಗೊಂಡಿರುವ ದೇವಾಲಯದೊಳಗೆ ಮೂರ್ತಿಗಳೇ ಇಲ್ಲ. ದೇವಾಲಯದಲ್ಲಿನ ಇತಿಹಾಸ ಹೇಳುವ ಹಲವು ಪುರಾವೆಗಳು ನಾಶಗೊಂಡಿದೆ.  ಕಾಶ್ಮೀರದಲ್ಲಿರುವ 43 ಸ್ಮಾರಕ ಹಾಗೂ ಜಮ್ಮುವಿನಲ್ಲಿರುವ 15 ಸ್ಮಾರಗಳ ಪೈಕಿ ಬೆರಳೆಣಿಕೆ ಸ್ಮಾರಕ ಮಾತ್ರ ಉಳಿದುಕೊಂಡಿದೆ. ಇವುಗಳ ಜೊತೆ ಕೆಲ ಪುರಾತನ ದೇವಾಲಯಗಳನ್ನು ರಕ್ಷಿಸುವ ಹಾಗೂ ನವೀಕರಿಸುವ ಕೆಲಸವಾಗಬೇಕು ಎಂದು ತರುಣ್ ವಿಜಯ್ ಹೇಳಿದ್ದಾರೆ.ಶಿಥಿಲಗೊಂಡಿರುವ ಸ್ಮಾರಗಳು, ದೇವಾಲಯಗಳು ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ಪುನರುತ್ಥಾನ ಮಾಡವು ಕುರಿತು ವರದಿ ಸಿದ್ದಪಡಿಸಲಾಗಿದೆ. ಈ ಕುರಿತು ಚರ್ಚೆ ನಡೆಸಿ ಶೀಘ್ರದಲ್ಲೇ ಕ್ರಮಕೈಗೊಳ್ಳಲಾಗುವುದು ಎಂದು ತರುಣ್ ವಿಜಯ್ ಹೇಳಿದ್ದಾರೆ.

click me!