ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಪರಿಣಾಮ ಕರ್ನಾಟಕ ಸರ್ಕಾರ, ರಾತ್ರಿ ಸಂಚಾರ ತೆರವುಗೊಳಿಸಲು ಮುಂದಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ಆರೋಪಿಸಿದ್ದಾರೆ.
ನವದೆಹಲಿ (ಏ.04): ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಪರಿಣಾಮ ಕರ್ನಾಟಕ ಸರ್ಕಾರ, ರಾತ್ರಿ ಸಂಚಾರ ತೆರವುಗೊಳಿಸಲು ಮುಂದಾಗಿದೆ ಎಂದು ಮೈಸೂರು- ಕೊಡಗು ಸಂಸದ ಯದುವೀರ್ ಒಡೆಯರ್ ಆರೋಪಿಸಿದ್ದಾರೆ. ಈ ಸಂಬಂಧ ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಯದುವೀರ್, ‘2009ರಲ್ಲಿ ಕರ್ನಾಟಕವು ಚಾಮರಾಜನಗರದ ಬಂಡೀಪುರ ಮೂಲಕ ಹಾದುಹೋಗುವ ವಯನಾಡನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧಿಸಿತ್ತು.
ಹುಲಿ ಸಂರಕ್ಷಣೆ ಮತ್ತು ರಾತ್ರಿ ವೇಳೆಯಲ್ಲಿ ಕಾನೂನು ಬಾಹಿರ ಚಟುವಟಿಕೆಯನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಕೇರಳ ಹಲವು ಸಲ ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿತ್ತು. ಹಾಲಿ ಸಿಎಂ ಸಿದ್ದರಾಮಯ್ಯ ತಮ್ಮ ಹಿಂದಿನ ಅವಧಿಯಲ್ಲೂ ಇಂಥ ಬೇಡಿಕೆ ತಿರಸ್ಕರಿಸಿದ್ದರು ಎಂದರು. ಈ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ವಿರೋಧಿಸಿ ಸಲ್ಲಿಸಿದ್ದ ಅಫಿಡವಿಟ್ ಅನ್ನು ಕೂಡಾ ಪಕ್ಷದ ಹೈಕಮಾಂಡ್ ಒತ್ತಡದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹಿಂದಕ್ಕೆ ಪಡೆದಿದೆ. ರಾಜಕೀಯ ಕಾರಣಕ್ಕಾಗಿ ನೈಸರ್ಗಿಕ ಪಾರಂಪರಿಕತೆಯನ್ನು ಹಾಳುಗಡೆವುದು ಖಂಡನೀಯ. ಹೀಗಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಕೂಡಲೇ ಮಧ್ಯಪ್ರವೇಶ ಮಾಡಿ ಬಂಡೀಪುರ ಜೀವವೈವಿಧ್ಯ ರಕ್ಷಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್
ಜನರ ಕುಂದು ಕೊರತೆ ಆಲಿಸಿದ ಸಂಸದ: ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ವಡೆಯರ್ ಅವರು ಸ್ವತಃ ಕಾರು ಚಾಲನೆ ಮಾಡಿಕೊಂಡು ಶುಕ್ರವಾರ ಜಯಪುರ ಹೋಬಳಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರ ಕುಂದುಕೊರತೆ ಗಳನ್ನು ಆಲಿಸಿದರು. ಮೈಸೂರು ತಾಲೂಕು ಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮಸ್ಥರು ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿದರು. ಅರಮನೆ ಕಾವಲು ಜಮೀನುಗಳಿಗೆ ದುರಸ್ತಿ ಮಾಡಿಸಿಕೊಡಿ ಎಂದೂ ರೈತರು ಮನವಿ ಮಾಡಿದರು. ನಮ್ಮ ತಾಯಿಯವರ ಜೊತೆ ಮಾತನಾಡಿ, ಸಮಸ್ಯೆ ಬಗೆಹರಿಸುವೆ ಎಂದು ಯದುವೀರ್ ಭರವಸೆ ನೀಡಿದರು.
ಸೋಲಿಗರ ಕಾಲೋನಿ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಅರಣ್ಯ ಮದ್ಯಭಾಗದಲ್ಲಿ ಸ್ಮಶಾನ ಇದ್ದು, ಶವಸಂಸ್ಕಾರಕ್ಕೆ ಅರಣ್ಯ ಇಲಾಖೆಯವರು ತೊಂದರೆ ನೀಡುತ್ತಾರೆ ಎಂದು ದೂರಿದರು. ಕೇಂದ್ರ ಬುಡಕಟ್ಟು ಇಲಾಖೆಯ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಚುಂಚರಾಯನಹುಂಡಿ ಗ್ರಾಮದಿಂದ ಸಮೀಪ ವಿರುವ ಮಲ್ಲೇಶ್ವರ ಬೆಟ್ಟಕ್ಕೆ ರಸ್ತೆ ನಿರ್ಮಾಣ ಮಾಡಿಸಿಕೊಡಿ ಎಂದೂ ಗ್ರಾಮಸ್ಥರು ಮನವಿ ಮಾಡಿಕೊಂಡರು.
ಸಿದ್ದರಾಮಯ್ಯನವರು ಮಂಡಿಸಿದ್ದು ಅಲ್ಪಸಂಖ್ಯಾತರ ಓಲೈಕೆಯ ಬಜೆಟ್: ಸಂಸದ ಯದುವೀರ್ ಒಡೆಯರ್ ಟೀಕೆ
ಶಾಲೆ ದುರಸ್ತಿಗೆ ಅನುದಾನ ನೀಡುತ್ತೇನೆ: ಸರ್ಕಾರಿ ಶಾಲೆ ಶಿಥಿಲೀಕರಣ ಗೊಂಡಿದ್ದು, ಹೊಸ ಕಟ್ಟಡ ನಿರ್ಮಿಸಿಕೊಡಿ ಹಾಗೂ ಬಸವೇಶ್ವರ ಸಮುದಾಯ ಭವನ ನಿರ್ಮಿಸಿಕೊಡಿ ಎಂದು ಮದ್ದೂರು ಹುಂಡಿ ಗ್ರಾಮಸ್ಥರು ಮನವಿ ಮಾಡಿಕೊಂಡರು, ನನ್ನ ಐದು ವರ್ಷದ ಅವಧಿಯಲ್ಲಿ ಶಾಲೆ ದುರಸ್ತಿಗೆ ಅನುದಾನ ನೀಡಲಾಗುವುದು ಎಂದರು. ಮಂಡನಹಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನದ ಮುಂದುವರಿದ ಕಾಮಗಾರಿಗೆ 10 ಲಕ್ಷ ರು. ಅನುದಾನ ನೀಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು. ಸಂದರ ನಿಧಿಯಿಂದ ಕೊಡುತ್ತೇನೆ ಎಂದರು.