
ಅಹಮದಾಬಾದ್ (ಜೂನ್ 15, 2023): ಗುಜರಾತ್‌ನ ತಾಪಿ ಜಿಲ್ಲೆಯಲ್ಲಿ ಮಾಯಾಪುರ ಮತ್ತು ದೇಗಾಮಾ ಗ್ರಾಮಗಳನ್ನು ಸಂಪರ್ಕಿಸಲು ಮಿಂದೋಲಾ ನದಿಗೆ ಅಡ್ಡಲಾಗಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆಯು ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿದೆ. ಕುಸಿದ ಸೇತುವೆಯಿಂದ 15 ಗ್ರಾಮಗಳಿಗೆ ತೊಂದರೆಯುಂಟಾಗಿದೆ.
2021ರಲ್ಲಿ ನಿರ್ಮಾಣ ಆರಂಭವಾಗಿದ್ದ ಸೇತುವೆಯ ಕಾಮಗಾರಿ ಶೇ. 95ರಷ್ಟು ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ಇದು ಉದ್ಘಾಟನೆಗೆ ಸಿದ್ಧವಾಗುತ್ತಿತ್ತು. ಬುಧವಾರ ಮುಂಜಾನೆ ಸೇತುವೆ ದಿಢೀರ್ ಕುಸಿದಿದ್ದು ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ಇದನ್ನು ಓದಿ; Bihar: ಉದ್ಘಾಟನೆಗೂ ಮುನ್ನವೇ ಎರಡು ತುಂಡಾದ 13 ಕೋಟಿ ರೂ. ವೆಚ್ಚದ ಸೇತುವೆ
ಇನ್ನು ಸೇತುವೆ ನಿರ್ಮಾಣ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು ಕಳಪೆ ಗುಣಮಟ್ಟದ ವಸ್ತುಗಳನ್ನು ಸೇತುವೆ ನಿರ್ಮಾಣಕ್ಕೆ ಬಳಸಲಾಗಿದೆ. ಹೀಗಾಗಿಯೇ ಸೇತುವೆ ಕುಸಿದು ಬಿದ್ದಿದೆ ಎಂದು ಗುತ್ತಿಗೆದಾರರ ವಿರುದ್ಧ ಸ್ಥಳೀಯರು ದೂರಿದ್ದಾರೆ. ಇತ್ತೀಚೆಗೆ ಬಿಹಾರದಲ್ಲೂ ಇಂತದ್ದೇ ಘಟನೆ ನಡೆದಿತ್ತು.
ಈ ಸಂಬಂಧ ಮಾಹಿತಿ ನೀಡಿದ ತಾಪಿ ಜಿಲ್ಲಾಧಿಕಾರಿ ವಿಪಿನ್ ಗಾರ್ಗ್, ಸೇತುವೆಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಸೇತುವೆಯ ಕೆಲವು ಭಾಗವು ಕುಸಿದಿದೆ. ನಾವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ ಮತ್ತು ಬಳಸಿದ ವಸ್ತುಗಳ ಗುಣಮಟ್ಟವನ್ನು ಸಹ ಸಂಪೂರ್ಣವಾಗಿ ಪರಿಶೀಲಿಸಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಇದನ್ನೂ ಓದಿ: Gujarat Election Results 2022: ಮೋರ್ಬಿ ಸೇತುವೆ ದುರಂತದ ಕ್ಷೇತ್ರದಲ್ಲೂ ಬಿಜೆಪಿಗೆ ಭಾರಿ ಮುನ್ನಡೆ..!
ಇನ್ನು, ಈ ಹಿಂದೆಯೂ ಅದೇ ಸ್ಥಳದಲ್ಲಿ ಸೇತುವೆ ಇತ್ತು, ಆದರೆ ಮಳೆಗಾಲದಲ್ಲಿ ಅದು ನದಿಗೆ ಮುಳುಗುತ್ತಿತ್ತು. ಇದರಿಂದಾಗಿ ಜನರು ತೊಂದರೆಗಳನ್ನು ಎದುರಿಸುತ್ತಿದ್ದರು. ಜನರು ರಾಜಕೀಯ ಮುಖಂಡರು ಮತ್ತು ರಾಜ್ಯ ಸರ್ಕಾರಕ್ಕೆ ಮನವಿಗಳನ್ನು ಕಳುಹಿಸಿದ ನಂತರ, ಅದೇ ಸ್ಥಳದಲ್ಲಿ ಹೊಸ ಸೇತುವೆಯ ನಿರ್ಮಾಣದ ಕಾರ್ಯಾದೇಶವು 2021 ರಲ್ಲಿ ಪ್ರಾರಂಭವಾಯಿತು ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ.
ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತುಕ್ಕು ಹಿಡಿದ ಸೇತುವೆಗೆ ಬಣ್ಣ ಬಳಿದು ನಾಟಕ: Bridge Collapse ದೇವರಿಚ್ಛೆ ಎಂದ ಕಂಪನಿ ಮ್ಯಾನೇಜರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ