ಗೋವಾದಲ್ಲಿ ಹೊಸವರ್ಷದ ಮೋಜಿಗೆ ಖೋತಾ, ಯಾಕೇಂತ..?

By Suvarna News  |  First Published Dec 31, 2019, 3:33 PM IST

ಸೀಫುಡ್, ಬೀಚ್ ಸೌಂದರ್ಯದಿಂದಲೇ ಪ್ರವಾಸಿಗರನ್ನು ಸೆಳೆಯುವ ಗೋವಾ ವರ್ಷದ ಬಹುತೇಕ ದಿನಗಳಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ 2019ರಲ್ಲಿ ಗೋವಾ ಪ್ರವಾಸೋದ್ಯಮಕ್ಕೆ ಬಲವಾದ ಹೊಡೆತ ಬಿದ್ದಿದೆ. ಹೊಸವರ್ಷಕ್ಕೆ ಪ್ರವಾಸಿಗರೇ ತುಂಬಿರುವ ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಶೇ.50ರಷ್ಟು ಇಳಿಕೆಯಾಗಿದೆ. ಕಾರಣವೇನು..? ಗೋವಾ ಪ್ರವಾಸೋದ್ಯಮ ಕುಸಿದಿದ್ದೇಕೆ..? ಇಲ್ಲಿ ಓದಿ.


ನವದೆಹಲಿ(ಡಿ.31): ವಿದೇಶಿಯರಿಗೂ, ಸ್ವದೇಶಿಯರಿಗೂ ಗೋವಾ ನೆಚ್ಚಿನ ಪ್ರವಾಸಿ ತಾಣ. ಯುವ ಸಮೂಹವಂತೂ ವರ್ಷದಲ್ಲಿ ಒಮ್ಮೆಯಾದರೂ ಗೋವಾ ಟ್ರಿಪ್ ಪ್ಲಾನ್ ಮಾಡುತ್ತಾರೆ. ಆದರೆ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದಲ್ಲಿ 2019ರಲ್ಲಿ ಗೋವಾ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಹೊಸ ವರ್ಷಾಚರಣೆಗೆ ಪ್ರವಾಸಿಗರು ಕಿಕ್ಕಿರಿದು ತುಂಬುವ ಗೋವಾದಲ್ಲಿ ಈ ಬಾರಿ ಮಾತ್ರ ಜೋಶ್ ಕಡಿಮೆ ಇದೆ.

ಸೀಫುಡ್, ಬೀಚ್ ಸೌಂದರ್ಯದಿಂದಲೇ ಪ್ರವಾಸಿಗರನ್ನು ಸೆಳೆಯುವ ಗೋವಾ ವರ್ಷದ ಬಹುತೇಕ ದಿನಗಳಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ 2019ರಲ್ಲಿ ಕೆಲವೊಂದು ಕಾರಣಗಳ ಪರಿಣಾಮ ಗೋವಾ ಪ್ರವಾಸೋದ್ಯಮಕ್ಕೆ ಬಲವಾದ ಹೊಡೆತ ಬಿದ್ದಿದೆ.

Tap to resize

Latest Videos

ಬಜೆಟ್‌ ಫ್ರೆಂಡ್ಲಿ ಪಯಣದಲ್ಲಿ ಜವಾಬ್ದಾರಿಯುತ ಟ್ರಾವೆಲ್ಲರ್ ಆಗುವುದು ಹೀಗೆ!

ಪ್ರತಿಬಾರಿ ಕ್ರಿಸ್ಮಸ್‌ ಆಚರಣೆ ಸಂದರ್ಭದಲ್ಲಿ ವಿಶೇಷ ಆಕರ್ಷಣೆ ಜೊತೆ ನಿಲ್ಲುವ ಗೋವಾದಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬಿರುತ್ತಾರೆ. ಈ ಬಾರಿ ಕ್ರಿಸ್ಮಸ್ ಆಚರಣೆಗೆ ಗೋವಾ ಎಲ್ಲಾ ರೀತಿಯಲ್ಲಿ ಸಿದ್ದವಾಗಿದ್ದರೂ ಪ್ರವಾಸಿಗರು ಮಾತ್ರ ಭೇಟಿ ನೀಡಲು ಹಿಂದೇಟು ಹಾಕಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು:

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಹಲವು ಕಡೆ ನಡೆದ ಪ್ರತಿಭಟನೆಗಳೂ ಗೋವಾ ಪ್ರವಾಸೋದ್ಯಮಕ್ಕೆ ಹೊಡೆತ ನೀಡಿದೆ. ಪ್ರತಿ ಬಾರಿ ಗೋವಾದಲ್ಲಿ ಕ್ರಿಸ್ಮಸ್ ಆಚರಿಸಲು ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.50ರಷ್ಟು ಈ ಬಾರಿ ಇಳಿಕೆಯಾಗಿದೆ ಎಂದು ಪ್ರವಾಸೋದ್ಯಮಿಗಳು ತಿಳಿಸಿದ್ದಾರೆ. ಕ್ರಿಸ್ಮಸ್ ರಜೆಯ ಸಂದರ್ಭದಲ್ಲಿಯೇ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯೂ ಕಾವೇರಿದ್ದು, ಗೋವಾಕ್ಕೆ ಬರುವ ಪ್ರವಾಸಿರ ಸಂಖ್ಯೆ ಇಳಿಕೆಯಾಗಿತ್ತು.

ಎನ್‌ಪಿಆರ್,ಎನ್‌ಆರ್‌ಸಿಗೆ ದಾಖಲೆ ಕೊಡಲ್ಲ: ಅಖಿಲೇಶ್ ಗುಡುಗು!

ಕಾಯ್ದೆ ವಿರೋಧಿಸಿ ದೇಶದ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿದ್ದುದರಿಂದ ಪ್ರವಾಸಿಗರು ಗೋವಾದತ್ತ ಪ್ರಯಾಣ ಬೆಳೆಸಲು ಹಿಂದೇಟು ಹಾಕಿದ್ದಾರೆ. ಸಾಮಾನ್ಯ ಗೋವಾದಲ್ಲಿ ಹೋಟೆಲ್‌ ಬುಕ್ ಮಾಡುವುದೇ ಕಷ್ಟ ಎಂಬಂತಹ ಸ್ಥಿತಿ ಇದ್ದರೆ ಈ ಬಾರಿ ಮಾತ್ರ ಬಹುತೇಕ ಲಾಡ್ಜ್, ಹೊಟೇಲ್‌ಗಳು ಬಿಕೋ ಎನ್ನುತ್ತಿತ್ತು. ಬೀಚ್‌ ಬದಿಯ ವ್ಯಾಪಾರಿಗಳ ಉದ್ಯಮಕ್ಕೂ ಬಲವಾದ ಹೊಡೆತ ಬಿದ್ದಿದ್ದು, ವ್ಯಾಪಾರದಲ್ಲಿ ನಷ್ಟ ಉಂಟಾಗಿದೆ ಎಂದು ಗೋವಾ ಪ್ರವಾಸೋದ್ಯಮಿಗಳ ಶ್ರೇಯಾಭಿವೃದ್ಧಿ ಸಂಘದ ಅಧ್ಯಕ್ಷ ಕ್ರೂಸ್ ಕಾರ್ಡೋಸ್ ತಿಳಿಸಿದ್ದಾರೆ. ಕ್ರಿಸ್ಮಸ್‌ ಆಚರಣೆಗಾಗಿ ಮಾಡಿದ್ದ ಅದ್ಧೂರಿ ತಯಾರಿಗಳೆಲ್ಲ ಖಾಲಿ ಬಿದ್ದಿವೆ ಎಂದು ಅವರು ತಿಳಿಸಿದ್ದಾರೆ.

ಪ್ರವಾಸೋದ್ಯಮಕ್ಕಾಗಿಯೇ ಗೋವಾ ಬೀಚ್‌ ಲೈನ್‌ನಲ್ಲಿ ಕ್ರಿಸ್ಮಸ್‌ಗೆಂದು 300ಕ್ಕೂ ಹೆಚ್ಚು ಶಾಕ್ಸ್‌ ನಿರ್ಮಿಸಲಾಗುತ್ತದೆ. ಅಕ್ಟೋಬರ್‌ನಲ್ಲಿ ಆರಂಭಗೊಂಡು ಜೂನ್‌ ತನಕ ಹೆಚ್ಚಿನ ಪ್ರವಾಸಿಗರು ಬರುವುದರಿಂದ ವ್ಯಾಪಾರಿಗಳೂ ಲಾಭ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿ ಲಾಭವೂ ಕಡಿಮೆಯಾಗಿದೆ.

ನೋಟ್ ಬ್ಯಾನ್‌ಗಿಂತಲೂ ಎನ್‌ಆರ್‌ಸಿ, ಎನ್‌ಪಿಆರ್ ಘೋರ: ರಾಹುಲ್ ಗಾಂಧಿ!

ಈ ಬಾರಿಯ ಕ್ರಿಸ್ಮಸ್ ಆಚರಣೆಯಲ್ಲಿ ನಿರೀಕ್ಷೆಯಂತೆ ಪ್ರವಾಸಿಗರು ಆಗಮಿಸದೆ ಪೇಲವವಾಗಿತ್ತು. ಹೊಸ ವರ್ಷಾಚರಣೆಯಾದರೂ ಪ್ರವಾಸೋದ್ಯಮಕ್ಕೆ ಸ್ವಲ್ಪ ಹುರುಪು ತುಂಬಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಕ್ರೂಸ್ ಕಾರ್ಡೋಸ್. ಆರ್ಥಿಕ ಕುಸಿತವೂ ಪ್ರವಾಸೋದ್ಯಮಕ್ಕೆ ಬಲವಾದ ಹೊಡೆತ ನೀಡಿದೆ ಎನ್ನಲಾಗುತ್ತಿದೆ.

ದೇಶದ ಹಲವು ರಾಜ್ಯಗಳಲ್ಲಿ ಪ್ರವಾಹ, ಚಂಡಮಾರುತ

ಕೇರಳ, ಕರ್ನಾಟಕ ಸೇರಿ ದೇಶದ ಹಲವು ಕಡೆ ಪ್ರವಾಹ, ನೆರೆ ಉಂಟಾಗಿದ್ದು, ಆರ್ಥಿಕ ಹೊಡೆತದ ಪ್ರಭಾವದಿಂದಲೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಕ್ಯಾರ್, ಮಹಾ ಚಂಡಮಾರುತ ಸೇರಿ ಹಲವು ಚಂಡಮಾರುತಗಳ ಪ್ರಭಾವದಿಂದಲೂ ಪ್ರವಾಸಿಗರ ಸಂಖ್ಯೆ ಇಳಿಕೆಯಾಯಿತು. ಸ್ವಂತ ಸೂರುಗಳನ್ನೇ ಕಳೆದುಕೊಂಡು, ಹೊತ್ತಿನ ತುತ್ತಿಗೆ ಪರಾಡಿದ ಜನ ಆರ್ಥಿಕವಾಗಿ ಕುಸಿದು ಪ್ರವಾಸಗಳ ಕುರಿತು ಯೋಚಿಸುವ ಸ್ಥಿತಿಯಲ್ಲಿಯೂ ಇರಲಿಲ್ಲ. ಇದರಿಂದಾಗಿಯೂ ಗೋವಾ ಪ್ರವಾಸೋದ್ಯಮಕ್ಕೆ ಹೊಡೆತ ಬಿತ್ತು.

ಗೋವಾ ಪ್ರವಾಸೋದ್ಯಮ ನೀತಿಗಳು

ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳು ಮತ್ತು ರಾಜ್ಯದ ಸ್ವಚ್ಛತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗೋವಾದ ಪ್ರವಾಸೋದ್ಯಮ ಇಲಾಖೆ ತನ್ನ ನೀತಿಯಲ್ಲಿ ಹಲವು ಬದಲಾವಣೆಗಳನ್ನು ತಂದಿತು. ಪ್ರಮುಖವಾಗಿ ಸಂಜೆ ಆರು ಗಂಟೆ ಬಳಿಕ ಬೀಚ್‌ನಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಯಿತು. ಮಹಿಳೆಯರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ಹೊಸ ನೀತಿ ಜಾರಿಗೊಳಿಸಲಾಯಿತು. ಆದರೆ ಈ ನೀತಿಯಿಂದ ಮೋಜು ಮಸ್ತಿಗೆ ಹೆಸರಾದ ಗೋವಾದ ಬೀಚ್‌ಗಳು ಜನರೇ ಇಲ್ಲದೆ ಬಣಗುಟ್ಟುವಂತಾಯಿತು.

ಭಾರತೀಯರ ನೆಚ್ಚಿನ ಪ್ರವಾಸಿ ತಾಣ ಪಟ್ಟಿ: ಮೈಸೂರಿಗೆ 5ನೇ ಸ್ಥಾನ

ಅಲ್ಲದೆ ಬೀಚ್‌ಗಳಲ್ಲಿ ಮದ್ಯ ಮಾರಾಟ ನಿಷೇಧ ಹಾಗೂ ಸಾರ್ವಜನಿಕವಾಗಿ ಅಡುಗೆ ಮಾಡುವ ಮೊದಲಿನ ಪದ್ಧತಿಗೆ ಎಳ್ಳು ನೀರು ಬಿಡಲಾಯಿತು. ಈ ನೀತಿಗಳು ಗೋವಾ ರಾಜ್ಯದ ಸುರಕ್ಷತೆಗೆ ಒಳಿತನ್ನು ಮಾಡಿದರೂ ದೇಶದ ಎಲ್ಲ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ತಡೆಗೋಡೆ ನಿರ್ಮಿಸಿತು. ಇಷ್ಟಾದರೂ ಹೊಸ ವರ್ಷಾಚರಣೆಗೆ ಇಂದಿಗೂ ಭಾರತೀಯರಿಗೆ ಗೂವಾ ರಾಜ್ಯವೇ ಹಾಟ್‌ ಫೇವರೇಟ್ ತಾಣ ಎಂಬುದರಲ್ಲಿ ಎರಡು ಮಾತಿಲ್ಲ.

ಥಾಮಸ್‌ ಕುಕ್‌ ವಿಮಾನ ಯಾನ ಸಂಸ್ಥೆ ಸ್ಥಗಿತ

ಪ್ರವಾಸೋದ್ಯಮ ಪ್ಯಾಕೇಜ್‌ಗಳಿಗೆ ಹೆಸರಾಗಿದ್ದ ಜಗತ್ತಿನ ಅತ್ಯಂತ ಹಳೆಯ ಥಾಮಸ್ ಕುಕ್ ವಿಮಾನಯಾನ ಸಂಸ್ಥೆ ಮುಚ್ಚಲ್ಪಟ್ಟಿದ್ದು ಗೋವಾ ಪ್ರವಾಸೋದ್ಯಮಕ್ಕೆ ಇನ್ನೊಂದು ಹೊಡೆತ. ವಿದೇಶಿಯರಿಗೂ ಗೋವಾ ವಿಶೇಷ ಆಕರ್ಷಣೆ. ಸುಲಭವಾಗಿ ಪ್ರವಾಸಿಗರ ಕೈಗೆಟುಕುತ್ತಿದ್ದ ಥಾಮಸ್ ಕುಕ್ ಮುಚ್ಚಲ್ಪಡುವುದರೊಂದಿಗೆ ವಿದೇಶಿ ಪ್ರವಾಸಿರ ಸಂಖ್ಯೆ ಗಣನೀಯವಾಗಿ ಇಳಿಮುಖವಾಯಿತು.

ಗೋವಾ ಹೊಸವರ್ಷಾಚರಣೆಯ ಪ್ರಮುಖ ಆಕರ್ಷಣೆ ಸನ್‌ಬರ್ನ್‌ ಫೆಸ್ಟಿವಲ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. ಕೊನೆಯ ಸಂದರ್ಭ ಟಿಕೆಟ್ ಸಿಗದೆಯೂ, ಕೈಗೆಟುಕುವ ದರದಲ್ಲಿ ವಿಮಾನ ಟಿಕೆಟ್‌ಗಳು ಲಭ್ಯವಿಲ್ಲದಿರುವುದರಿಂದಲೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

ವಯನಾಡ್‌ನಲ್ಲಿ ಎರಡು ದಿನದಲ್ಲಿ ಏನೆಲ್ಲ ನೋಡಬಹುದು?

ಹಲವು ಕಾರಣಗಳಿಂದ ದೇಶದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಕ್ರಿಸ್ಮಸ್‌ಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡು ಪ್ರವಾಸಿಗರನ್ನು ಎದುರು ನೋಡುತ್ತಿದ್ದ ಗೋವಾ ಪ್ರವಾಸೋದ್ಯಮಿಗಳಿಗೆ ಪ್ರವಾಸಿಗರಿಂದ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಹೊಸ ವರ್ಷಕ್ಕೆ ಮತ್ತಷ್ಟು ಸಿದ್ಧತೆಗಳೊಂದಿಗೆ ಪ್ರವಾಸಿಗರನ್ನು ಎದುರು ನೋಡುತ್ತಿದ್ದಾರೆ ಗೋವಾ ಪ್ರವಾಸೋದ್ಯಮಿಗಳು.

ಡಿಸೆಂಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!