ಅಜಿತ್ ಪವಾರ್‌ಗೆ ಮತ್ತೆ ಡಿಸಿಎಂ ಪಟ್ಟ, ಠಾಕ್ರೆ ಪುತ್ರ ಮಂತ್ರಿ| ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಮಂತ್ರಿಮಂಡಲ ವಿಸ್ತರಣೆ| 26 ಸಂಪುಟ ದರ್ಜೆ, 10 ರಾಜ್ಯ ದರ್ಜೆ ಸಚಿವರ ಸೇರ್ಪಡೆ| ಮಾಜಿ ಸಿಎಂ ಅಶೋಕ್ ಚವಾಣ್‌ಗೂ ಮಂತ್ರಿಗಿರಿ
ಮುಂಬೈ[ಡಿ.31]: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸೋಮವಾರ ತಮ್ಮ ಮಂತ್ರಿಮಂಡಲ ವಿಸ್ತರಿಸಿದ್ದಾರೆ. ವಿಶೇಷವೆಂದರೆ ಇತ್ತೀಚೆಗಷ್ಟೇ ಎನ್‌ಸಿಪಿ ವಿರುದ್ಧ ಬಂಡೆದ್ದು ಬಿಜೆಪಿಯ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಬಳಿಕ ರಾಜೀನಾಮೆ ನೀಡಿದ್ದ ಅಜಿತ್ ಪವಾರ್ ಅವರಿಗೆ ಮತ್ತೆ ಡಿಸಿಎಂ ಹುದ್ದೆಯ ಭಾಗ್ಯ ಲಭಿಸಿದೆ. ಉದ್ಧವ್ ಅವರ ಪುತ್ರ, ಮೊದಲ ಬಾರಿಯ ಶಾಸಕ ಆದಿತ್ಯ ಠಾಕ್ರೆ ಅವರಿಗೂ ಸಚಿವಗಿರಿ ಪ್ರಾಪ್ತಿಯಾಗಿದೆ.
ಅಧಿಕಾರಕ್ಕೆ ಬಂದು ಒಂದು ತಿಂಗಳಿಗೂ ಹೆಚ್ಚು ಅವಧಿಯ ಬಳಿಕ ಠಾಕ್ರೆ ಅವರು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ನ ‘ಮಹಾರಾಷ್ಟ್ರ ವಿಕಾಸ ಅಘಾಡಿ’ ಸರ್ಕಾರದ ಮಂತ್ರಿಮಂಡಲ ವಿಸ್ತರಿಸಿದರು. ಸೋಮವಾರ ಒಟ್ಟು 36 ಸಚಿವರು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಂದ ಪ್ರಮಾಣವಚನ ಸ್ವೀಕಾರ ಮಾಡಿದರು. ಇವರಲ್ಲಿ ಎನ್‌ಸಿಪಿಯ 14, ಶಿವಸೇನೆಯ 8 ಹಾಗೂ ಕಾಂಗ್ರೆಸ್‌ನ 10 ಸಚಿವರಿದ್ದಾರೆ.
ಇದರೊಂದಿಗೆ ಠಾಕ್ರೆ ಮಂತ್ರಿಮಂಡಲದಲ್ಲಿ ಎನ್‌ಸಿಪಿಯ 16 ಸಚಿವರು ಇದ್ದಂತಾಗಿದ್ದು, ಶರದ್ ಪವಾರ್ ಅವರ ಪಕ್ಷಕ್ಕೆ ಸಿಂಹಪಾಲು ಲಭಿಸಿದೆ. ಶಿವಸೇನೆಯ 14 ಹಾಗೂ ಕಾಂಗ್ರೆಸ್‌ನ 12 ಮಂತ್ರಿಗಳು ಇದ್ದಾರೆ. ಮುಖ್ಯಮಂತ್ರಿಯನ್ನು ಹೊರತುಪಡಿಸಿ 43 ಮಂತ್ರಿಗಳು ಈಗ ಇದ್ದಂತಾಗಿದ್ದು, ಮಂತ್ರಿಮಂಡಲದ ಗರಿಷ್ಠ ಗಾತ್ರ ಕೂಡ ಇದೇ ಆಗಿದೆ.
ಅಜಿತ್ ಮತ್ತೆ ಡಿಸಿಎಂ:
ಎನ್‌ಸಿಪಿ ವಿರುದ್ಧ ಬಂಡೆದ್ದಿದ್ದ ಅಜಿತ್ ಪವಾರ್ ಅವರಿಗೆ ಮತ್ತೆ ಉಪಮುಖ್ಯಮಂತ್ರಿ ಪದವಿ ದೊರೆತಿದೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಅಶೋಕ್ ಚವಾಣ್ ಕೂಡ ಉದ್ಧವ್ ಸಂಪುಟದಲ್ಲಿ ಮಂತ್ರಿಯಾಗಿದ್ದಾರೆ. 29 ವರ್ಷದ ಆದಿತ್ಯ ಠಾಕ್ರೆ ಅವರು ಸಂಪುಟ ದರ್ಜೆ ಸಚಿವರಾಗುವ ಮೂಲಕ ಮಂತ್ರಿಮಂಡಲದ ಅತಿ ಕಿರಿಯ ಎನ್ನಿಸಿಕೊಂಡಿದ್ದಾರೆ. ಕಾಂಗ್ರೆಸ್‌ನವರಾದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರಿಗೆ ಮಂತ್ರಿಗಿರಿ ಲಭಿಸಿಲ್ಲ. ಹೀಗಾಗಿ ಅವರು ವಿಧಾನಸಭಾಧ್ಯಕ್ಷರಾಗಬಹುದು ಎನ್ನಲಾಗಿದೆ.