
ಬೆಂಗಳೂರು: ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ನೆಟ್‌ವರ್ಕ್ ನಿರ್ವಹಿಸುತ್ತಿರುವ ನೆಫ್ರೋಪ್ಲಸ್ 2026ರ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕ ಹಾಗೂ ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದ ಅತ್ಯುತ್ತಮ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದೆ.
ಕಂಪನಿಯು ಈ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬರೋಬ್ಬರಿ 585.2 ಕೋಟಿ ರೂ. ಆದಾಯ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 23.6ರಷ್ಟು ಭಾರಿ ಪ್ರಗತಿ ಸಾಧಿಸಿದೆ. ಇದೇ ಅವಧಿಯಲ್ಲಿ ಕಾರ್ಯಾಚರಣೆ ಲಾಭ (ಎಬಿಟ್ಡಾ) ಶೇ. 15.3ರಷ್ಟು ಏರಿಕೆ ಕಂಡು 134.4 ಕೋಟಿ ರೂ.ಗೆ ತಲುಪಿದೆ. ಹಾಗೆಯೇ, ನಿವ್ವಳ ಲಾಭ ಶೇ. 34.7ರಷ್ಟು ಗಣನೀಯ ಏರಿಕೆ ಕಂಡು 76.1 ಕೋಟಿ ರೂ.ಗೆ ಮುಟ್ಟಿದೆ.
ಕಳೆದ 6 ತಿಂಗಳ ಅವಧಿಯಲ್ಲಿ ಕಂಪನಿಯು ಒಟ್ಟು 21.01 ಲಕ್ಷ ಡಯಾಲಿಸಿಸ್ ಚಿಕಿತ್ಸೆಗಳನ್ನು ಒದಗಿಸಿದ್ದು, ಇದರಲ್ಲಿ ಶೇ. 12.6ರಷ್ಟು ವಾರ್ಷಿಕ ಏರಿಕೆ ದಾಖಲಾಗಿದೆ. ಕೇವಲ ಚಿಕಿತ್ಸೆಗಳ ಸಂಖ್ಯೆಯಲ್ಲಷ್ಟೇ ಅಲ್ಲದೆ, ಪ್ರತಿ ಚಿಕಿತ್ಸೆಯಿಂದ ಬರುವ ಆದಾಯವು ಶೇ. 9.7ರಷ್ಟು ಏರಿಕೆಯಾಗಿ 2,785 ರೂ.ಗೆ ತಲುಪಿದೆ.
ತನ್ನ ಸೇವಾ ಜಾಲವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸಿರುವ ನೆಫ್ರೋಪ್ಲಸ್, ಕಜಕಿಸ್ತಾನದ ಅಲ್ಮಾಟಿಯಲ್ಲಿ 34 ಯಂತ್ರಗಳಿರುವ ಎರಡು ಕ್ಲಿನಿಕ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಆ ದೇಶಕ್ಕೂ ಯಶಸ್ವಿಯಾಗಿ ಕಾಲಿಟ್ಟಿದೆ.
ಕಳೆದ ಆರು ತಿಂಗಳಲ್ಲಿ ಕಂಪನಿಯು ಬಂಡವಾಳ ವೆಚ್ಚಕ್ಕಾಗಿ 102 ಕೋಟಿ ರೂ. ಹೂಡಿಕೆ ಮಾಡಿದ್ದು, ಭಾರತದಲ್ಲಿ 40 ಮತ್ತು ಫಿಲಿಪೈನ್ಸ್‌ನಲ್ಲಿ 11 ಹೊಸ ಕ್ಲಿನಿಕ್‌ಗಳನ್ನು ಆರಂಭಿಸಿದೆ. ಸೌದಿ ಅರೇಬಿಯಾದ ರಿಯಾದ್ ಮತ್ತು ಜೆದ್ದಾದಲ್ಲಿ 'ಹೋಮ್ ಡಯಾಲಿಸಿಸ್' ಸೇವೆ ಪ್ರಾರಂಭವಾಗಿದ್ದು, ಸೌದಿಯ ಆರೋಗ್ಯ ಸಚಿವಾಲಯದ ಬಹುದೊಡ್ಡ ಟೆಂಡರ್ ಪ್ರಕ್ರಿಯೆಯಲ್ಲೂ ನೆಫ್ರೋಪ್ಲಸ್ ಅರ್ಹತೆ ಪಡೆದುಕೊಂಡಿದೆ.
ಇದರೊಂದಿಗೆ ಕಂಪನಿಯು ಪ್ರಸ್ತುತ ವಿಶ್ವದ 6 ದೇಶಗಳಲ್ಲಿ ಒಟ್ಟು 570 ಕ್ಲಿನಿಕ್‌ಗಳನ್ನು ಹೊಂದಿದಂತಾಗಿದೆ. ವಿಶೇಷವೆಂದರೆ, ಕಂಪನಿಯು ಗಳಿಸುತ್ತಿರುವ ಒಟ್ಟು ಆದಾಯದಲ್ಲಿ ಸರಿಸುಮಾರು ಶೇ. 47ರಷ್ಟು ಪಾಲು ಅಂತಾರಾಷ್ಟ್ರೀಯ ವಹಿವಾಟಿನಿಂದಲೇ ಬರುತ್ತಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆ ಪೂರೈಸಲು ಮತ್ತು ನುರಿತ ಸಿಬ್ಬಂದಿಯನ್ನು ರೂಪಿಸಲು 'ನೆಫ್ರೋಪ್ಲಸ್ ಇಂಟರ್ನ್ಯಾಷನಲ್ ಡಯಾಲಿಸಿಸ್ ಅಕಾಡೆಮಿ (ಎನ್‌ಐಡಿಎ)' ಸ್ಥಾಪಿಸಲಾಗಿದ್ದು, ಇಲ್ಲಿ ಭಾರತ ಮತ್ತು ಫಿಲಿಪೈನ್ಸ್‌ನ ನರ್ಸ್‌ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ಪಂಜಾಬ್‌ನಲ್ಲಿ 'ಪೆರಿಟೋನಿಯಲ್ ಡಯಾಲಿಸಿಸ್' ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, 50 ರೋಗಿಗಳು ನೋಂದಣಿಯಾಗಿದ್ದಾರೆ. ತಂತ್ರಜ್ಞಾನದ ಬಳಕೆಯ ಮೂಲಕ ರೋಗಿಗಳ ಪ್ರತಿಕ್ರಿಯೆಗಳನ್ನು ಪಡೆಯಲು ಸ್ವಯಂಚಾಲಿತ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.
ಹಣಕಾಸು ಫಲಿತಾಂಶಗಳ ಕುರಿತು ಮಾತನಾಡಿದ ಕಂಪನಿಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ (ಎಂಡಿ) ವಿಕ್ರಮ್ ವುಪ್ಪಲ, "ವಿಶ್ವಾದ್ಯಂತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗುತ್ತಿರುವ ಕಾರಣ ಡಯಾಲಿಸಿಸ್ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ನಾವು ಕಜಕಿಸ್ತಾನ ಪ್ರವೇಶಿಸಿರುವುದು ಅತ್ಯಂತ ಖುಷಿ ತಂದಿದೆ. ಸೌದಿ ಅರೇಬಿಯಾದ ಟೆಂಡರ್‌ನಲ್ಲಿ ನಾವು ಅರ್ಹತೆ ಪಡೆದ 12 ಸಂಸ್ಥೆಗಳಲ್ಲಿ ಒಂದಾಗಿದ್ದೇವೆ," ಎಂದು ಹೇಳಿದ್ದಾರೆ.
ಗ್ರೂಪ್ ಸಿಇಒ ರೋಹಿತ್ ಸಿಂಗ್ ಪ್ರತಿಕ್ರಿಯಿಸಿ, "ಹೊಸ ಮಾರುಕಟ್ಟೆ ಪ್ರವೇಶ ಹಾಗೂ ಸ್ವಾಧೀನ ಪ್ರಕ್ರಿಯೆಗಳ ಮೂಲಕ ನಮ್ಮ ಆದಾಯದಲ್ಲಿ ಸ್ಥಿರವಾದ ಏರಿಕೆ ಕಂಡಿದ್ದೇವೆ. ವಿಸ್ತರಣೆಯ ಜೊತೆಗೆ ರೋಗಿಗಳಿಗೆ ಉತ್ತಮ ಆರೈಕೆ ಒದಗಿಸುವುದೇ ನಮ್ಮ ಗುರಿ" ಎಂದಿದ್ದಾರೆ.
ಅಲ್ಲದೆ, "ನಮ್ಮ ಭಾರತೀಯ ನೆಟ್‌ವರ್ಕ್ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಬೆಳೆಯಲು ಸಹಾಯ ಮಾಡುತ್ತಿದೆ. ಪ್ರಸ್ತುತ ನಮ್ಮ ಬಳಿ ₹500 ಕೋಟಿಗೂ ಅಧಿಕ ನಗದು ಲಭ್ಯತೆಯಿದ್ದು ಮುಂದಿನ ಯೋಜನೆಗಳಿಗೆ ಮತ್ತು ಬೆಳವಣಿಗೆಗೆ ಯಾವುದೇ ಹಣಕಾಸಿನ ಕೊರತೆಯಿಲ್ಲ," ಎಂದು ಮುಖ್ಯ ಹಣಕಾಸು ಅಧಿಕಾರಿ ಪ್ರಶಾಂತ್ ಗೋಯೆಂಕಾ ವಿವರಿಸಿದ್ದಾರೆ.
ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ನೆಟ್‌ವರ್ಕ್ ಆಗಿರುವ ನೆಪ್ರೋಪ್ಲಸ್ ಭಾರತ, ನೇಪಾಳ, ಫಿಲಿಪೈನ್ಸ್, ಉಜ್ಬೇಕಿಸ್ತಾನ್, ಸೌದಿ ಅರೇಬಿಯಾ ಮತ್ತು ಕಜಕಿಸ್ತಾನದಲ್ಲಿ ತನ್ನ ಸೇವೆ ಒದಗಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ