
ಅದು ಮಾರ್ಚ್ ತಿಂಗಳು ನೇಪಾಳದಲ್ಲಿ ಜನರಲ್-ಝಡ್ (Gen-Z) ಯುವಜನರ ಬೃಹತ್ ಚಳವಳಿಯ ಅಲೆಯಲ್ಲಿ ಸವಾರಿ ಮಾಡುತ್ತಾ, ಕೆ.ಪಿ. ಶರ್ಮಾ ಓಲಿ ಸರ್ಕಾರವನ್ನು ಪತನಗೊಳಿಸಿ ಬಾಲೆನ್ ಶಾ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದರು. ವಿದೇಶಿ ರಾಯಭಾರಿಗಳನ್ನು ಖಾಸಗಿಯಾಗಿ ಭೇಟಿಯಾಗುವುದೇ ಇಲ್ಲ ಎಂದು ಪ್ರಪಂಚದ ಬಲಿಷ್ಠ ದೇಶಗಳಿಗೇ ಸವಾಲೆಸೆದಿದ್ದರು. ಭಾರತದ ರಾಯಭಾರಿಯನ್ನು ಭೇಟಿ ಮಾಡಲು ನಿರಾಕರಿಸಿದ್ದರಿಂದ, ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಮ್ಮ ಕಠ್ಮಂಡು ಪ್ರವಾಸವನ್ನೇ ರದ್ದುಗೊಳಿಸಿದ್ದರು. ಆದರೆ, ಕೇವಲ 100 ದಿನಗಳು ಕಳೆಯುವುದರೊಳಗೆ ಕಠ್ಮಂಡುವಿನ ಅರಮನೆಯಲ್ಲಿ ಭಾರಿ ಸಸ್ಪೆನ್ಸ್ ಒಂದಕ್ಕೆ ತೆರೆಬಿದ್ದಿದೆ. ತಾನು ವಿಧಿಸಿಕೊಂಡಿದ್ದ ನಿಯಮವನ್ನು ತಾನೇ ಗಾಳಿಗೆ ತೂರಿ, ಬಾಲೆನ್ ಶಾ ಏಕಾಏಕಿ ದೊಡ್ಡ ಯು-ಟರ್ನ್ ಹೊಡೆದಿದ್ದಾರೆ. ಅದೇನು ಎಂದು ನೋಡೋಣ ಬನ್ನಿ!
ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಬಾಲೆನ್ ಶಾ ಸರ್ಕಾರ ಎರಡು ಬೃಹತ್ ಸಾರ್ವಜನಿಕ ಪ್ರತಿಭಟನೆಗಳನ್ನು ಎದುರಿಸಬೇಕಾಯಿತು. ಭಾರತ-ನೇಪಾಳ ಗಡಿಯಲ್ಲಿ ಕಸ್ಟಮ್ಸ್ ಸುಂಕ ಹೇರಿಕೆ ಮತ್ತು ರೈಡ್-ಶೇರ್ ಚಾಲಕನೊಬ್ಬ ಪೊಲೀಸ್ ಕ್ರಮಕ್ಕೆ ಹೆದರಿ ಸ್ವಯಂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ದೇಶಾದ್ಯಂತ ಕ್ರಾಂತಿಯ ಕಿಡಿಯನ್ನು ಹೊತ್ತಿಸಿತು.
ಇದರ ಜೊತೆಗೆ, ಭಾರತ, ಚೀನಾ ಮತ್ತು ಅಮೆರಿಕದ ಪ್ರಮುಖ ರಾಜತಾಂತ್ರಿಕರನ್ನು ಮುಖಾಮುಖಿ ಭೇಟಿಯಾಗಲು ನಿರಾಕರಿಸಿದ ಅವರ ನಡವಳಿಕೆಗೆ ನೇಪಾಳದ ಮಾಧ್ಯಮಗಳು ಮತ್ತು ರಾಜತಾಂತ್ರಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ನೇಪಾಳದಂತಹ ಸಣ್ಣ ಮತ್ತು ವಿದೇಶಿ ನೆರವಿನ ಅಗತ್ಯವಿರುವ ದೇಶಕ್ಕೆ ಇಂತಹ ಅಹಂಕಾರ ಸೂಕ್ತವಲ್ಲ. ಇದರಿಂದ ಹಾನಿಯಾಗುತ್ತಿರುವುದು ಭಾರತಕ್ಕಾಗಲಿ ಅಥವಾ ಚೀನಾಗಗಲಿ ಅಲ್ಲ, ಬದಲಾಗಿ ನೇರ ನೇಪಾಳಕ್ಕೆ! ಎಂದು ಡೆನ್ಮಾರ್ಕ್‌ನ ಮಾಜಿ ನೇಪಾಳಿ ರಾಯಭಾರಿ ವಿಜಯ್ ಕಾಂತ್ ಕರ್ಣ ಸೇರಿದಂತೆ ಅನೇಕ ತಜ್ಞರು ಖಾರವಾಗಿ ಟೀಕಿಸಿದರು.
ಬಾಲೆನ್ ಶಾ ಅವರ ಈ ಏಕಪಕ್ಷೀಯ ನಿರ್ಧಾರದಿಂದ ಅವರ ಸ್ವಂತ ಸರ್ಕಾರದ ಮಂತ್ರಿಗಳೇ ಬೇಸತ್ತಿದ್ದರು. ಹಣಕಾಸು ಸಚಿವ ಸ್ವರ್ಣಿಮ್ ವಾಗ್ಲೆ ಮತ್ತು ವಿದೇಶಾಂಗ ಸಚಿವ ಶಿಶಿರ್ ಖಾನಲ್ ಅವರು ಪ್ರಧಾನಿಯನ್ನು ಹಲವು ಬಾರಿ ಭೇಟಿಯಾಗಿ, ಹಠಮಾರಿ ಧೋರಣೆ ಬಿಟ್ಟು ಭಾರತ ಮತ್ತು ಚೀನಾದ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಒತ್ತಾಯಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೇಪಾಳ ಸಂಪೂರ್ಣ ಒಂಟಿಯಾಗುವ ಭೀತಿ ಎದುರಾದಾಗ ಮತ್ತು ಸ್ವಂತ ಸಚಿವರಿಂದಲೇ ಒತ್ತಡ ಹೆಚ್ಚಾದಾಗ, ಪ್ರಧಾನಿ ಬಾಲೆನ್ ಶಾ ಅವರಿಗೆ ತಮ್ಮ ತಪ್ಪಿನ ಅರಿವಾಯಿತು.
ಅಂತಿಮವಾಗಿ ತಮ್ಮ ಮೊಂಡುತನವನ್ನು ಬದಿಗೊತ್ತಿರುವ ಬಾಲೆನ್ ಶಾ, ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ್ ಮತ್ತು ಚೀನಾದ ರಾಯಭಾರಿ ಜಾಂಗ್ ಮಾಮಿಂಗ್ ಅವರನ್ನು ಒಂದೇ ದಿನ ಪ್ರತ್ಯೇಕವಾಗಿ ಭೇಟಿಯಾಗಲು ನಿರ್ಧರಿಸಿದ್ದಾರೆ. ಈ ಮೂಲಕ ಅವರು ನವದೆಹಲಿ ಮತ್ತು ಬೀಜಿಂಗ್‌ಗೆ ಬಲಿಷ್ಠ ಮೆಸೇಜ್ ಒಂದನ್ನು ರವಾನಿಸಿದ್ದಾರೆ. ಅದೇನೆಂದರೆ ನೇಪಾಳಕ್ಕೆ ಭಾರತದ ಸಾಂಸ್ಕೃತಿಕ, ಐತಿಹಾಸಿಕ ಸಂಬಂಧ ಮತ್ತು ಚೀನಾದ ಆರ್ಥಿಕ ಪ್ರಭಾವ ಎರಡೂ ಸಮಾನವಾಗಿ ಮುಖ್ಯ. ಯಾವುದೇ ಒಂದು ಕಡೆ ವಾಲದೆ 'ನೇಪಾಳ ಫಸ್ಟ್' ನಯಪಾಲನೆಯೊಂದಿಗೆ ಭಾರತದ ಜೊತೆಗಿನ ಹಳೆಯ ಬಾಂಧವ್ಯವನ್ನು ಮರುಸ್ಥಾಪಿಸುವುದು. ತರಾತುರಿಯಲ್ಲಿ ಮಾಡಿದ ಗಂಭೀರ ತಪ್ಪನ್ನು ಸರಿಪಡಿಸಿಕೊಂಡು, ರಾಜತಾಂತ್ರಿಕ ಸಮತೋಲನ ಕಾಯ್ದುಕೊಳ್ಳಲು ನೇಪಾಳ ಪ್ರಧಾನಿ ಈಗ ಭಾರತದ ಮುಂದೆ ಕೈಮುಗಿದು ನಿಲ್ಲುವಂತಾಗಿದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ