
ನವದೆಹಲಿ (ಜು.22): 'ಕಾಕ್ರೋಚ್ ಜನತಾ ಪಾರ್ಟಿ' (CJP) ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಸರಣಿ ಪ್ರತಿಭಟನೆ ಹಾಗೂ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಎದುರಾದ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಸಂಘಟನೆಯ ಪ್ರತಿಭಟನೆ ತೀವ್ರಗೊಂಡಂತೆ, ಸೋಶಿಯಲ್ ಮೀಡಿಯಾದಲ್ಲಿ ನೈಮಿಷಾ ಅವರನ್ನು ಗುರಿಯಾಗಿಸಿಕೊಂಡು ಹಲವು ಪೋಸ್ಟ್‌ಗಳು ಹಾಗೂ ಕಮೆಂಟ್‌ಗಳು ಹರಿದಾಡತೊಡಗಿದ್ದವು.
ನೈಮಿಷಾ ಪ್ರಧಾನ್ ಅವರು ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿರುವ ಟಫ್ಟ್ಸ್ ವಿಶ್ವವಿದ್ಯಾಲಯದ (Tufts University) 'ದಿ ಫ್ಲೆಚರ್ ಸ್ಕೂಲ್ ಆಫ್ ಲಾ ಅಂಡ್ ಡಿಪ್ಲೊಮಸಿ'ಯಿಂದ ಕಾನೂನು ವಿಭಾಗದಲ್ಲಿ ಸ್ನಾತಕೋತ್ತರ ಪದವಿ (LLM) ಪಡೆದಿದ್ದಾರೆ. 2023 ರಲ್ಲಿ ಪದವಿ ಪೂರೈಸಿರುವ ಇವರು, ಪ್ರಸ್ತುತ 'ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ' (USISPF) ಸಂಸ್ಥೆಯಲ್ಲಿ ಸೀನಿಯರ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಸಂಘಟನೆಯು ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದೆ. ಈ ಪ್ರತಿಭಟನೆಯ ನಡುವೆ, ಸೋಶಿಯಲ್ ಮೀಡಿಯಾ ಯೂಸರ್‌ಗಳ ಕಣ್ಣು ನೈಮಿಷಾ ಪ್ರಧಾನ್ ಅವರ ಇನ್‌ಸ್ಟಾಗ್ರಾಮ್ ಖಾತೆಯ ಮೇಲೆ ಬಿದ್ದಿದ್ದು, ಅವರ ಹಳೆಯ ಪೋಸ್ಟ್‌ಗಳ ಕಮೆಂಟ್ ಬಾಕ್ಸ್‌ನಲ್ಲಿ ಟ್ರೋಲ್ ಹಾಗೂ ಟೀಕೆಗಳ ಮಹಾಪೂರವೇ ಹರಿದುಬಂದಿದೆ. ವಿಶೇಷವಾಗಿ, ಸಿಜೆಪಿ ಪ್ರತಿಭಟನಾಕಾರರು ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದ ಘಟನೆಯ ನಂತರ, ನೈಮಿಷಾ ಅವರನ್ನು ಟ್ಯಾಗ್ ಮಾಡಿ ಅನೇಕ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿತ್ತು.
ನೈಮಿಷಾ ಪ್ರಧಾನ್ ಅವರು ವಿದೇಶಕ್ಕೆ ಹೋಗಿ ಶಿಕ್ಷಣ ಪಡೆದಿರುವ ನಿರ್ಧಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಪ್ರಶ್ನಿಸಿದ್ದರು. ಇದು ಭಾರತೀಯ ಶಿಕ್ಷಣ ವ್ಯವಸ್ಥೆಯ ಮೇಲಿರುವ ನಂಬಿಕೆಯ ಕೊರತೆಯನ್ನು ತೋರಿಸುತ್ತದೆ ಎಂದು ಕೆಲವರು ವಾದಿಸಿದ್ದರು.
ದೇಶದ ಇತರೆ ವಿದ್ಯಾರ್ಥಿಗಳಿಗೂ ಇಷ್ಟೊಂದು ಸಂಪನ್ಮೂಲ ಹಾಗೂ ಆರ್ಥಿಕ ಸೌಲಭ್ಯಗಳಿದ್ದರೆ, ಅವರು ಕೂಡ ವಿದೇಶದಲ್ಲೇ ಓದಲು ಬಯಸುತ್ತಿದ್ದರು ಎಂದು ಯೂಸರ್ ಒಬ್ಬರು ಬರೆದುಕೊಂಡಿದ್ದರು. ಇದೇ ವೇಳೆ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ ತೀವ್ರಗೊಂಡಿತ್ತು. ಇಷ್ಟೇ ಅಲ್ಲದೆ, ನೈಮಿಷಾ ಓದಿದ ಟಫ್ಟ್ಸ್ ವಿಶ್ವವಿದ್ಯಾಲಯದ ಅಧಿಕೃತ ಪೇಜ್‌ಗಳಿಗೂ ತೆರಳಿದ ಕೆಲ ಯೂಸರ್‌ಗಳು, "ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ" ಹಾಗೂ "ನೈಮಿಷಾ ಅವರನ್ನು ಸಂಸ್ಥೆಯಿಂದ ಅಮಾನತುಗೊಳಿಸಿ" ಎಂದೆಲ್ಲಾ ಕಮೆಂಟ್ ಮಾಡಿದ್ದರು.
ಈ ವಿವಾದಕ್ಕೆ ಸಚಿವರ ಕುಟುಂಬದ ಸದಸ್ಯರನ್ನು ಎಳೆದುತರುವುದನ್ನು ಹಲವು ಸೋಶಿಯಲ್ ಮೀಡಿಯಾ ಯೂಸರ್‌ಗಳು ವಿರೋಧಿಸಿದ್ದಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರದಲ್ಲಿ ಇರುವವರಿಂದ ಮಾತ್ರ ಉತ್ತರದಾಯಿತ್ವ ಕೇಳಬೇಕು. ಅಧಿಕಾರದಲ್ಲಿ ಇರುವವರ ನೀತಿಗಳು ಮತ್ತು ನಿರ್ಧಾರಗಳನ್ನು ಟೀಕಿಸಬಹುದೇ ಹೊರತು, ಅವರ ಕುಟುಂಬದ ಸದಸ್ಯರನ್ನು ಗುರಿಯಾಗಿಸುವುದು ಸರಿಯಲ್ಲ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲಾ ವಿವಾದಗಳ ನಡುವೆ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಯ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಕಾಂಗ್ರೆಸ್ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನ್ ಆರೋಪಿಸಿದ್ದಾರೆ.
ಸರ್ಕಾರವು ಸಂಸತ್ತಿನಲ್ಲಿ ನೀಟ್ (NEET) ಮತ್ತು ಯುವಜನತೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಕುರಿತು ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನ್, "ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗೊಂದಲ ಸೃಷ್ಟಿಸಲು ವಿದ್ಯಾರ್ಥಿಗಳನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿವೆ" ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಹಾಗೂ ಇತರೆ ನಾಯಕರು ಪ್ರಧಾನಮಂತ್ರಿಯವರ ನಿವಾಸದ ಹೊರಗೆ ಧರಣಿ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದಾರೆ ಹಾಗೂ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ. ಸರ್ಕಾರವು ಸಂಸತ್ತಿನಲ್ಲಿ ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದ್ದರೂ, ಕಾಂಗ್ರೆಸ್ ಪ್ರಜಾಸತ್ತಾತ್ಮಕ ಚರ್ಚೆಗಿಂತ ರಾಜಕೀಯ ನಾಟಕವಾಡಲು ಆದ್ಯತೆ ನೀಡಿದೆ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ