
ಕೊಚ್ಚಿ: ಅಮೆರಿಕ-ಇರಾನ್ ಯುದ್ಧದ ಕಾರಣ ದೇಶಾದ್ಯಂತ ತೈಲ ಮತ್ತು ಅನಿಲ ಕೊರತೆಯ ಭೀತಿ ಎದುರಾಗಿರುವ ನಡುವೆಯೇ, ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಅದರಿಂದ ಉಂಟಾಗುವ ಇಂಧನ ಕೊರತೆಯು ದೇಶವು ಆತ್ಮನಿರ್ಭರವಾಗುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ಭಾರತ ಆತ್ಮನಿರ್ಭರವಾಗುವುದು ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಈ ಮೂಲಕ ಸ್ವಾವಲಂಬನೆ ಮಂತ್ರವನ್ನು ಪುನರುಚ್ಚರಿಸಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ರ್‍ಯಾಲಿ ನಡೆಸಿ ಮಾತನಾಡಿದ ಅವರು, ‘ಸದ್ಯ ನಡೆಯುತ್ತಿರುವ ಸಂಘರ್ಷ, ಭಾರತವು ಇಂಧನ ಸುಭದ್ರ ಮತ್ತು ಆರ್ಥಿಕವಾಗಿ ಸ್ವತಂತ್ರವಾಗುವ ಮಹತ್ವವನ್ನು ಒತ್ತಿಹೇಳಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಅದರಿಂದ ಉಂಟಾಗುವ ಇಂಧನ ಕೊರತೆಯು ದೇಶವು ಆತ್ಮನಿರ್ಭರವಾಗುವ ಮಹತ್ವವನ್ನು ಎತ್ತಿ ತೋರಿಸುತ್ತದೆ’ ಎಂದರು.
‘ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಭಾರತೀಯ ನಾಗರಿಕರಿಗೆ ಕೇಂದ್ರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಿದೆ. ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಂದಿನ ಭಾರತವು ತನ್ನ ನಾಗರಿಕರನ್ನು ಬೇರೆಡೆ ಸಿಲುಕಲು ಬಿಡುವುದಿಲ್ಲ. ಅಲ್ಲಿರುವ ಭಾರತೀಯರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಭರವಸೆ ನೀಡಿದರು.
ಇದೇ ವೇಳೆ, ಕೊಲ್ಲಿ ಯುದ್ಧದ ವಿಚಾರದಲ್ಲೂ ಕಾಂಗ್ರೆಸ್ ಹಾಗೂ ಅದರ ನಾಯಕ ರಾಹುಲ್ ಗಾಂಧಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮೋದಿ ಕಿಡಿಕಾರಿದರು.
ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದ ಕೊಲ್ಲಿರಾಷ್ಟ್ರಗಳಿಂದ ತೈಲ ಪೂರೈಕೆ ಸ್ಥಗಿತಗೊಂಡಿರುವ ನಡುವೆಯೇ ಭಾರತವು ಇದೀಗ ರಷ್ಯಾದಿಂದ 30 ದಶಲಕ್ಷ ಬ್ಯಾರೆಲ್ ತೈಲ ಖರೀದಿಸಿದೆ. ರಷ್ಯಾದಿಂದ ತೈಲ ಖರೀದಿಗೆ ಅಮೆರಿಕದಿಂದ 30 ದಿನಗಳ ವಿನಾಯ್ತಿ ಸಿಗುತ್ತಿದ್ದಂತೆ ಭಾರತವು ಭಾರೀ ಪ್ರಮಾಣದಲ್ಲಿ ತೈಲ ಖರೀದಿಗಿಳಿದಿದೆ ಎಂದು ಹೇಳಲಾಗಿದೆ.
ಅಮೆರಿಕದ ತೆರಿಗೆ ಒತ್ತಡದ ಹಿನ್ನೆಲೆಯಲ್ಲಿ ಕಳೆದ ಒಂದೆರಡು ತಿಂಗಳಿಂದ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಬಹುತೇಕ ಕಡಿಮೆ ಮಾಡಿತ್ತು. ಇದೀಗ ಕೊಲ್ಲಿ ಸಂಘರ್ಷ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಪೂರೈಕೆ ಅಸ್ತವ್ಯಸ್ತಗೊಂಡಿದ್ದು, ಇದರಿಂದ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಇದನ್ನು ಗಮನಿಸಿ ರಷ್ಯಾದಿಂದ 30 ದಿನಗಳ ಕಾಲ ತೈಲ ಖರೀದಿಗೆ ಅಮೆರಿಕ ವಿನಾಯ್ತಿ ನೀಡಿತ್ತು. ಇದರ ಬೆನ್ನಲ್ಲೇ ಭಾರತವು ಏಷ್ಯಾ ಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ರಷ್ಯಾದ ಟ್ಯಾಂಕರ್‌ಗಳಿಂದ ತೈಲ ಖರೀದಿಗೆ ಮುಂದಾಗಿದೆ.
ಹಿಂದೂ ಮಹಾಸಾಗರವನ್ನು ಪರ್ಷಿಯನ್ ಕೊಲ್ಲಿಯೊಂದಿಗೆ ಜೋಡಿಸುವ ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ತೈಲ ಸಾಗಣೆಗೆ ಅಡ್ಡಿ ಮಾಡಿರುವುದು ಹಾಗೂ ಕೊಲ್ಲಿ ರಾಷ್ಟ್ರಗಳ ತೈಲ ಘಟಕಗಳ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಭಾರತದ ಶೇ.40ರಷ್ಟು ತೈಲ ಆಮದು ಇದೇ ಜಲಸಂಧಿ ಮೂಲಕ ನಡೆಯುತ್ತಿತ್ತು.
ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ: ಗೊಬ್ಬರ ಉತ್ಪಾದನೆಗೆ ಹೊಡೆತ
ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕೊಲ್ಲಿ ರಾಷ್ಟ್ರಗಳಿಂದ ನೈಸರ್ಗಿಕ ಅನಿಲ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಯೂರಿಯಾ ಸೇರಿ ಹಲವು ಗೊಬ್ಬರಗಳ ಉತ್ಪಾದನೆ ಮೇಲೆ ಭಾರೀ ಹೊಡೆತ ಬೀಳುವ ಭೀತಿ ಎದುರಾಗಿದೆ. ಕಾರ್ಖಾನೆಗಳಿಗೆ ಎಲ್ಎನ್‌ಜಿ (ನೈಸರ್ಗಿಕ ಅನಿಲ) ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಇಫ್ಕೋ ಸೇರಿ ದೇಶದ ಪ್ರಮುಖ ಗೊಬ್ಬರ ಕಂಪನಿಗಳು ಯೂರಿಯಾ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.ಯೂರಿಯಾ ಉತ್ಪಾದನೆಗೆ ನೈಸರ್ಗಿಕ ಅನಿಲವೇ ಪ್ರಮುಖ ಕಚ್ಚಾ ವಸ್ತುವಾಗಿ ಬಳಕೆಯಾಗುವ ಹಿನ್ನೆಲೆಯಲ್ಲಿ ಈಗ ಗೊಬ್ಬರ ಉತ್ಪಾದನೆಗೆ ಸಮಸ್ಯೆಯಾಗಿದೆ. ಹೀಗಾಗಿ ಅನೇಕ ಗೊಬ್ಬರ ಕಂಪನಿಗಳು ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ಒಂದು ವೇಳೆ ಈ ಕಾರ್ಖಾನೆಗಳಿಗೆ ಮುಂದಿನ ದಿನಗಳಲ್ಲಿ ಗ್ಯಾಸ್ ಪೂರೈಕೆ ಪುನರ್ ಆರಂಭವಾದರೂ ಈ ಗೊಬ್ಬರ ಕಂಪನಿಗಳ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಪುನರ್ ಆರಂಭಿಸಲು ಇನ್ನೂ ಒಂದು ತಿಂಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ. ಸದ್ಯ ಗೊಬ್ಬರ ಕಾರ್ಖಾನೆಗಳಿಗೆ ಶೇ.70ರಷ್ಟು ಗ್ಯಾಸ್ ಅಷ್ಟೇ ಗ್ಯಾಸ್ ಪೂರೈಕೆಯಾಗುತ್ತಿದೆ.
ಅತಿದೊಡ್ಡ ಯೂರಿಯಾ ಆಮದು ರಾಷ್ಟ್ರ:
ಭಾರತವು ವಿಶ್ವದ ಅತಿದೊಡ್ಡ ಯೂರಿಯಾ ಆಮದುದಾರ ರಾಷ್ಟ್ರವಾಗಿದ್ದು, ಇದೀಗ ದೇಶೀಯ ಯೂರಿಯಾ ಕಾರ್ಖಾನೆಗಳು ಗೊಬ್ಬರ ಉತ್ಪಾದನೆ ಸ್ಥಗಿತಗೊಳಿಸಿದರೆ ಅನಿವಾರ್ಯವಾಗಿ ವಿದೇಶಗಳಿಂದ ಇನ್ನಷ್ಟು ಯೂರಿಯಾ ಆಮದು ಮಾಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಈಗಾಗಲೇ ಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ ಸಿಗುತ್ತಿರುವ ಹಿನ್ನೆಲೆಯಲ್ಲಿ ಯೂರಿಯಾ ಆಮದು ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹೊರೆ ಬೀಳುವ ನಿರೀಕ್ಷೆ ಇದೆ.ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ರಸಗೊಬ್ಬರದ ಬೇಡಿಕೆ ಹೆಚ್ಚಿರುತ್ತದೆ. ಈ ಹಂತದಲ್ಲೇ ಗೊಬ್ಬರ ಉತ್ಪಾದನೆ ಕಡಿತಗೊಂಡರೆ ಕೃಷಿ ಚಟುವಟಿಗೆಳಿಗೆ ಹಿನ್ನಡೆಯಾಗುವ ಆತಂಕ ಮನೆಮಾಡಿದೆ.
ಅಂ.ರಾ. ಇಂಧನ ಸಂಸ್ಥೆಯಿಂದ 40 ಕೋಟಿ ಬ್ಯಾರೆಲ್ ತೈಲ ಬಿಡುಗಡೆ: ದಾಖಲೆ
ಬರ್ಲಿನ್: ಮಧ್ಯಪ್ರಾಚ್ಯ ಯುದ್ಧ ಇಂಧನ ಮಾರುಕಟ್ಟೆಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕಾರಣ ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ತನ್ನ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಮಾಣದ ತುರ್ತು ತೈಲ ನಿಕ್ಷೇಪಗಳನ್ನು ಬಿಡುಗಡೆ ಮಾಡಲು ಬುಧವಾರ ಒಪ್ಪಿದೆ. ಈ ಪ್ರಕಾರ, ಪ್ಯಾರಿಸ್ ಮೂಲದ ಸಂಸ್ಥೆಯು ತನ್ನ ಸದಸ್ಯ ದೇಶಗಳ ತುರ್ತು ನಿಕ್ಷೇಪಗಳಿಂದ 40 ಕೋಟಿ ಬ್ಯಾರೆಲ್ ತೈಲವನ್ನು ಲಭ್ಯವಾಗುವಂತೆ ಮಾಡುವುದಾಗಿ ಹೇಳಿದೆ. 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧದ ವೇಳೆ ಐಇಎನ 32 ಸದಸ್ಯ ರಾಷ್ಟ್ರಗಳು 18 ಕೋಟಿ ಬ್ಯಾರೆಲ್ ಬಿಡುಗಡೆ ಮಾಡಿದ್ದವು. ಈಗ ಅದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ತೈಲ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಹೋರ್ಮುಜ್ ಉದ್ವಿಗ್ನತೆ: ಭಾರತಕ್ಕೆ ಪರ್ಯಾಯ ಮಾರ್ಗದಲ್ಲಿ 75 % ತೈಲ
ನವದೆಹಲಿ: ತೈಲ ಸಾಗಿಬರುವ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ನಿರ್ಬಂಧ, ದೇಶದಲ್ಲಿ ಅನಿಲಕ್ಕಾಗಿ ಹಾಹಾಕಾರದ ಲಕ್ಷಗಳ ನಡುವೆ ಭಾರತವು ಶೇ.75ರಷ್ಟು ತೈಲವನ್ನು ಪರ್ಯಾಯ ಮಾರ್ಗಗಳಲ್ಲಿ ತರಿಸಿಕೊಳ್ಳುತ್ತಿದೆ.ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಾಹಿತಿ ನೀಡಿದ್ದು, ‘ಭಾರತದಲ್ಲಿ ಪ್ರತಿದಿನ 55 ಲಕ್ಷ ಬ್ಯಾರಲ್ ತೈಲ ಬಳಕೆಯಾಗುತ್ತದೆ.
ಇಷ್ಟು ದಿನ ಅದು ಸಾಗಿರುತ್ತಿದ್ದ ಹೋರ್ಮುಜ್ ಪ್ರದೇಶ ಸದ್ಯ ಉದ್ವಿಗ್ನವಾಗಿದೆ. ಆದರೆ ನಾವು ಇಂಧನ ತರಿಸಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಆರಿಸಿಕೊಂಡಿರುವ ಕಾರಣ, ಅದರ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದು’ ಎಂಬ ಸಿಹಿಸುದ್ದಿ ನೀಡಿದ್ದಾರೆ.ಇದರಿಂದಾಗಿ ಭಾರತದ ಮೇಲೆ ಹೋರ್ಮುಜ್ ಬಂದ್‌ನಿಂದ ಆಗಬಹುದಾದ ಪ್ರತಿಕೂಲ ಪರಿಣಾಮಗಳು ತಗ್ಗಿದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ