
ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ದೇಶದಲ್ಲಿ ಶುರುವಾಗಿರುವ ವಾಣಿಜ್ಯ ಸಿಲಿಂಡರ್ ಅಭಾವ ಮುಂದುವರೆದಿದೆ. ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಉತ್ತರಪ್ರದೇಶ, ಉತ್ತರಾಖಂಡ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಹೋಟೆಲ್, ರೆಸ್ಟೋರೆಂಟ್, ಬೇಕರಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಿಲಿಂಡರ್ ಅಭಾವ ವದಂತಿಯಿಂದ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವರು ಉದ್ಯಮವನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರೆ, ಇನ್ನು ಕೆಲವರು ಬದಲಿ ವ್ಯವಸ್ಥೆ ಮೊರೆ ಹೋಗಿದ್ದಾರೆ.
ಸಮರ್ಪಕ ವಾಣಿಜ್ಯ ಅಡುಗೆ ಅನಿಲಗಳ ಲಭ್ಯತೆ ಇರದ ತಮಿಳುನಾಡಿನ ಚೆನ್ನೈ ಸೇರಿದಂತೆ ಹಲವು ಭಾಗಗಳಲ್ಲಿ ಕೆಲ ಹೋಟೆಲ್, ರೆಸ್ಟೋರೆಂಟ್‌ಗಳು ಎಲ್‌ಪಿಜಿ ಕೊರತೆಯಿಂದ ಬಂದ್ ಆಗಿವೆ. ನಗರದ ಪ್ರಸಿದ್ಧ ಹೋಟೆಲ್‌ಗಳಲ್ಲಿ ರಜಾದಿನ ಎನ್ನುವ ನೋಟಿಸ್ ಅಂಟಿಸಿದ್ದು ಕಂಡು ಬಂತು. ಮತ್ತೊಂದೆಡೆ ಕೆಲವು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ನೀಡುವ ಆಹಾರ ಪದಾರ್ಥಗಳು, ಅದರಲ್ಲಿಯೂ ಹೆಚ್ಚು ಗ್ಯಾಸ್ ವೆಚ್ಚವಾಗುವ ಖಾದ್ಯಗಳನ್ನು ಕಡಿತಗೊಳಿಸಿ, ಸೀಮಿತ ಸಂಖ್ಯೆಯ ಮೆನುಗಳನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಕೇರಳದಲ್ಲಿ ಶೇ.50ರಷ್ಟು ಹೋಟೆಲ್‌ಗಳು ಬಂದ್ ಆಗಿವೆ.
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಎಲ್‌ಪಿಜಿ ಕೊರತೆ ನೀಗಿಲು ಅಡುಗೆ ಘಟಕಗಳು ಮೈಕ್ರೋವೇವ್, ಇಂಡಕ್ಷನ್ ಬಳಸುವಂತೆ ಐಆರ್‌ಸಿಟಿಸಿ ಸೂಚಿಸಿದೆ. ಜತೆಗೆ ಪ್ರಯಾಣಿಕರ ಬೇಡಿಕೆ ಪೂರೈಸಲು ಪ್ಯಾಕೇಜಿಂಗ್ ಆಹಾರ ಮತ್ತು ಬೇಯಿಸಿ, ಸಿದ್ಧ ಆಹಾರಗಳನ್ನು ಸಾಕಷ್ಟು ದಾಸ್ತಾನು ಮಾಡಿಟ್ಟುಕೊಳ್ಳುವಂತೆಯೂ ನಿರ್ದೇಶಿಸಿದೆ.
ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಉತ್ತರಾಖಂಡ ಸರ್ಕಾರವು ವಾಣಿಜ್ಯ ಬಳಕೆಗಾಗಿ ಸೌದೆಗಳನ್ನು ಸಿದ್ಧಪಡಿಸುವಂತೆ ಸೂಚಿಸಿದೆ. ಇಂಧನಕ್ಕೆ ಪರ್ಯಾಯವಾಗಿ ಬಳಸುವಂತೆ ನೆರವಾಗಲು ಸಾಧ್ಯವಿರುವಷ್ಟು ಸೌದೆಗಳನ್ನು ಖಚಿತಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆಯು ನಿಗಮಕ್ಕೆ ಸೂಚಿಸಿದೆ.
ಯುಪಿಯಲ್ಲಿ ಖರೀದಿಗೆ ಮುಗಿಬಿದ್ದ ಜನ
ಇರಾನ್ ಯುದ್ಧದಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎನ್ನುವ ಸುದ್ದಿಗೆ ಉತ್ತರಪ್ರದೇಶದ ಲಖಿಂಪುರ ಕೇರಿಯಲ್ಲಿ ಜನರ ಆತಂಕಕ್ಕೆ ಒಳಗಾಗಿದ್ದಾರೆ. ಹಲವು ಗ್ಯಾಸ್ ಏಜೆನ್ಸಿಗಳ ಸಮೀಪ ನೂರಾರು ಸಂಖ್ಯೆಯಲ್ಲಿ ಜನರು ಬುಕ್ ಮಾಡಿದ್ದ ಅಡುಗೆ ಅನಿಲ ಖರೀದಿಗೆ ಮುಗಿ ಬಿದ್ದಿದ್ದಾರೆ. ಆದರೆ ಅಧಿಕಾರಿಗಳು ಎಲ್‌ಪಿಜಿ ಕೊರತೆ ವದಂತಿಯನ್ನು ತಳ್ಳಿ ಹಾಕಿದ್ದಾರೆ.
ರಾಜಸ್ಥಾನದಲ್ಲಿಯೂ ಜನರ ಪರದಾಟ:
ರಾಜಸ್ಥಾನದಲ್ಲಿಯೂ ಜನರು ಪರದಾಡುತ್ತಿದ್ದಾರೆ. ಬುಕ್ಕಿಂಗ್ ಮಾಡಿದ ಎಲ್‌ಪಿಜಿಗಳನ್ನು ಪಡೆಯಲು ಗ್ಯಾಸ್ ಏಜೆನ್ಸಿಗಳಿಗೆ ಜನರು ಧಾವಿಸಿ ಬರುತ್ತಿದ್ದಾರೆ. ವಾಣಿಜ್ಯ ಸಿಲಿಂಡರ್‌ಗಳ ಹೊಸ ಬುಕ್ಕಿಂಗ್ ಇಲ್ಲದಿರುವುದು ವಿವಿಧ ಕೈಗಾರಿಕೆಗಳಿಗೂ ಹೊಡೆತ ಬಿದ್ದಿದೆ. ಇಲ್ಲಿಯೂ ಕೆಲವರು ಕಲ್ಲಿದ್ದಲಿನ ಕುಲುಮೆ, ವಿದ್ಯುತ್ ಇಂಡಕ್ಷನ್ ಸೇರಿದಂತೆ ಪರ್ಯಾಯ ಆಯ್ಕೆಗಳ ಮೊರೆ ಹೋಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ