ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ 258 ಕೋಟಿ ರೂ. ಖರ್ಚು ಮಾಡಿದ್ದರೆ, ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಪ್ರಯಾಣಕ್ಕೆ 31 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು (ಮಾ.21): ಕಳೆದ ಎರಡು ಹಾಗೂ ಎರಡೂವರೆ ವರ್ಷಗಳಲ್ಲಿ ದೇಶ ಹಾಗೂ ರಾಜ್ಯದ ಮುಖ್ಯಸ್ಥರು ಮಾಡಿರುವ ವೆಚ್ಚಗಳ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕಳೆದ ಎರಡೂವರೆ ವರ್ಷಗಳಲ್ಲಿ ಮಾಡಿರುವ ವಿದೇಶ ಪ್ರವಾಸಗಳ ವೆಚ್ಚವನ್ನು ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ. ಇನ್ನೊಂದೆಡೆ ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ತಿರುಗಾಟಕ್ಕಾಗಿ ಹೆಲಿಕಾಪ್ಟರ್‌ಗೆ ಮಾಡಿದ ವಿವರವನ್ನು ತಿಳಿಸಿದೆ. ಎರಡೂವರೆ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಕ್ಕೆ 258 ಕೋಟಿ ವೆಚ್ಚ ಮಾಡಿದ್ದರೆ, ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಪ್ರಯಾಣಕ್ಕೆ 2023-24ರಲ್ಲಿ 12.65 ಕೋಟಿ ರೂ. ಮತ್ತು 2024-25ರಲ್ಲಿ, ಜನವರಿ 15 ರವರೆಗೆ. 19.35 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಂದರೆ, ಎರಡು ವರ್ಷದಲ್ಲಿ 31 ಕೋಟಿಗೂ ಅಧಿಕ ಮೊತ್ತವನ್ನು ಹೆಲಿಕಾಪ್ಟರ್‌ನಲ್ಲಿ ಹಾರಾಟಕ್ಕೆ ಖರ್ಚು ಮಾಡಿದ್ದಾರೆ.
ಸುಮಾರು ಎರಡೂವರೆ ವರ್ಷದಲ್ಲಿ 38 ದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಮೇ 2022 ರಿಂದ ಡಿಸೆಂಬರ್ 2024 ರವರೆಗೆ ಪ್ರಧಾನಿ ನರೇಂದ್ರ ಮೋದಿಯವರ 38 ವಿದೇಶ ಪ್ರವಾಸ ಮಾಡಿದ್ದು ಇದಕ್ಕೆ ಅಂದಾಜು 258 ಕೋಟಿ ಖರ್ಚಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೂನ್ 2023 ರಲ್ಲಿ ಪ್ರಧಾನಿಯವರ ಅಮೆರಿಕ ಪ್ರವಾಸದ ಸಮಯದಲ್ಲಿ ಒಂದೇ ಭೇಟಿಗೆ ಅತಿ ಹೆಚ್ಚು ಎನ್ನುವಂತೆ 22 ಕೋಟಿ ಖರ್ಚು ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (ಎಂಒಎಸ್) ಪಬಿತ್ರಾ ಮಾರ್ಗರಿಟಾ ಉತ್ತರ ನೀಡಿದ್ದಾರೆ
ಈ ವರ್ಷಗಳಲ್ಲಿ ಪ್ರಧಾನಿ ಮೋದಿ ಜರ್ಮನಿ, ಕುವೈತ್, ಡೆನ್ಮಾರ್ಕ್, ಫ್ರಾನ್ಸ್, ಯುಎಇ, ಉಜ್ಬೇಕಿಸ್ತಾನ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಈಜಿಪ್ಟ್, ದಕ್ಷಿಣ ಆಫ್ರಿಕಾ, ಗ್ರೀಸ್, ಪೋಲೆಂಡ್, ಉಕ್ರೇನ್, ರಷ್ಯಾ, ಇಟಲಿ, ಬ್ರೆಜಿಲ್ ಹಾಗೂ ಗಯಾನಾ ದೇಶಗಳಿಗೆ ಭೇಟಿ ನೀಡಿದ್ದಾರೆ.
ಮೋದಿ ಅವರ ಪೋಲೆಂಡ್ ಭೇಟಿಗೆ 10.10 ಕೋಟಿ ಖರ್ಚಾಗಿದ್ದರೆ, ಉಕ್ರೇನ್ (2.52 ಕೋಟಿ), ರಷ್ಯಾ (5.34 ಕೋಟಿ), ಇಟಲಿ (14.36 ಕೋಟಿ), ಬ್ರೆಜಿಲ್ (5.51 ಕೋಟಿ) ಹಾಗೂ ಗಯಾನಾ (5.45) ದೇಶಗಳಿಗೆ ಪ್ರಮುಖ ವೆಚ್ಚವಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 2014 ಕ್ಕಿಂತ ಮೊದಲು ಮಾಡಿದ ಹಿಂದಿನ ವಿದೇಶ ಪ್ರವಾಸಗಳ ವಿವರವನ್ನು ನೋಡುವುದಾದರೆ, 2011ರಲ್ಲಿ ಅಮೆರಿಕ ಭೇಟಿಗೆ 10.74 ಕೋಟಿ, 2013ರಲ್ಲಿ ರಷ್ಯಾ ಭೇಟಿಗೆ 9.95 ಕೋಟಿ, 2011ರಲ್ಲಿ ಫ್ರಾನ್ಸ್ ಭೇಟಗೆ 8.33 ಕೋಟಿ ಹಾಗೂ 2013ರಲ್ಲಿ ಜರ್ಮನಿ ಭೇಟಿಗೆ 6.02 ಕೋಟಿ ರೂಪಾಯಿ ಖರ್ಚಾಗಿತ್ತು.
ಸುನಿತಾ ವಿಲಿಯಮ್ಸ್ಗೆ ಪ್ರಧಾನಿ ಮೋದಿ ಆಹ್ವಾನ: ಸಮೋಸಾ ಪಾರ್ಟಿಗೆ ಕುಟುಂಬಸ್ಥರ ಸಿದ್ಧತೆ! ಏನಿದು ಸ್ಟೋರಿ?
ಮುಖ್ಯಮಂತ್ರಿ ಹೆಲಿಕಾಪ್ಟರ್ ಖರ್ಚು: ಇನ್ನೊಂದೆಡೆ ಸಿಎಂ ಸಿದ್ಧರಾಮಯ್ಯ ಕಳೆದ ಎರಡು ವರ್ಷಗಳಲ್ಲಿ ಹೆಲಿಕಾಪ್ಟರ್‌ನಲ್ಲಿ ತಿರುಗಾಟ ನಡೆಸಲು 31 ಕೋಟಿ ರೂಪಾಯಿ ಅನ್ನು ಸರ್ಕಾರಿ ಬೊಕ್ಕಸದಿಂದ ಖರ್ಚಿ ಮಾಡಿದ್ದಾರೆ.ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಪ್ರಯಾಣಕ್ಕೆ 2023-24ರಲ್ಲಿ 12.65 ಕೋಟಿ ರೂ. ಮತ್ತು 2024-25ರಲ್ಲಿ, ಜನವರಿ 15 ರವರೆಗೆ. 19.35 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಬುಧವಾರ ಸದನಕ್ಕೆ ತಿಳಿಸಿದೆ. ಬೆಂಗಳೂರಿನಿಂದ ಕೇವಲ 1.5 ಗಂಟೆ ಪ್ರಯಾಣದಂತಹ ಮೈಸೂರಿನ ಹತ್ತಿರದ ಸ್ಥಳಗಳಿಗೂ ಸಿಎಂ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ್ದು, ಅಚ್ಚರಿಯ ಸಂಗತಿಯಾಗಿದೆ.
ಸುನಿತಾ ವಿಲಿಯಮ್ಸ್ ಜೊತೆಗೆ ಬಾಹ್ಯಾಕಾಶದಲ್ಲಿ ಗಣೇಶನ ವಿಗ್ರಹ, ಭಗವಗ್ದೀತೆ: ಗಗನಯಾತ್ರಿಯ ರೋಚಕ ಪಯಣ...
ಇನ್ನೊಂದೆಡೆ ದೆಹಲಿ ಮತ್ತು ಚೆನ್ನೈಗೆ ಪ್ರಯಾಣ ಮಾಡಲು, ಚಾರ್ಟರ್ ವಿಮಾನಗಳನ್ನು ಬುಕ್ ಮಾಡಿದ್ದಾರೆ. ಈ ನಗರಗಳಿಗೆ ವಾಣಿಜ್ಯ ವಿಮಾನಗಳು ಲಭ್ಯವಿದೆಯಾದರೂ, ಸಿದ್ದರಾಮಯ್ಯ ಚಾರ್ಟರ್ ವಿಮಾನಗಳನ್ನು ಬುಕ್ ಮಾಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ದೆಹಲಿಗೆ ಚಾರ್ಟರ್ ವಿಮಾನದಲ್ಲಿ ಪ್ರಯಾಣ ಮಾಡಲು 44.40 ಲಕ್ಷ ರೂ. ಖರ್ಚು ಮಾಡಲಾಗಿದೆ. ಆದರೆ, ವಾಣಿಜ್ಯ ವಿಮಾನಗಳ ಬಿಸಿನೆಸ್ ಕ್ಲಾಸ್ ಟಿಕೆಟ್‌ನಲ್ಲಿ ದೆಹಲಿಗೆ ಪ್ರಯಾಣ ಮಾಡಲು ಸುಮಾರು 70,000 ರೂ. ಖರ್ಚಾಗುತ್ತದೆ.