
ಶಿಲ್ಲಾಂಗ್ (ಫೆ.22): ಚುನಾವಣೆಗೆ ಸಜ್ಜಾಗಿರುವ ಮೇಘಾಲಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಮೊಟ್ಟಮೊದಲ ಸಮಾವೇಶ ನಡೆಸಿದರು. ಇದು ಮೇಘಾಲಯದಲ್ಲಿ ಅವರ ಮೊದಲ ಸಮಾವೇಶ ಎನಿಸಿದೆ. ಶಿಲ್ಲಾಂಕ್‌ನ ಮಲ್ಕಿ ಮೈದಾನದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷರ ಪ್ರಚಾರ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ಅವರು, 'ಪ್ರಧಾನಿ ಮೋದಿಯವರೊಂದಿಗೆ ಸಂಬಂಧ ಹೊಂದಿರುವ 2-3 ದೊಡ್ಡ ಕೈಗಾರಿಕೋದ್ಯಮಿಗಳು ಮಾಧ್ಯಮವನ್ನು ನಿಯಂತ್ರಿಸುತ್ತಿದ್ದಾರೆ. ಇದರಿಂದ ನನ್ನ ಭಾಷಣವು ಮಾಧ್ಯಮಗಳಲ್ಲಿ ಪ್ರಧಾನಿ ಮೋದಿಯವರ ಭಾಷಣದಂತೆ ಕಾಣಲು ಸಾಧ್ಯವಿಲ್ಲ. ಇನ್ನು ಮುಂದೆ ನಾವು ಮಾಧ್ಯಮಗಳಲ್ಲಿ ನಮ್ಮನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ' ಎಂದು ಕಾಂಗ್ರೆಸ್ ಸಂಸದರೂ ಆಗಿರುವ ರಾಹುಲ್ ಗಾಂಧಿ ಹೇಳಿದ್ದಾರೆ. ನಿಮಗೆ ಟಿಎಂಸಿಯ ಇತಿಹಾಸ ಗೊತ್ತಿದೆ, ಬಂಗಾಳದಲ್ಲಿ ನಡೆಯುವ ಹಿಂಸಾಚಾರ ನಿಮಗೆ ಗೊತ್ತಿದೆ. ಅವರ ಸಂಪ್ರದಾಯದ ಬಗ್ಗೆ ನಿಮಗೆ ಅರಿವಿದೆ. ಅವರು ಗೋವಾಕ್ಕೆ ಬಂದಿದ್ದರು. ಅಲ್ಲಿ ಬೇಕಾದಷ್ಟು ಹಣವನ್ನು ಚೆಲ್ಲಿ, ಬಿಜೆಪಿಗೆ ಸಹಾಯ ಮಾಡಿದರು. ಇನ್ನು ಮೇಘಾಲಯದಲ್ಲೂ ಕೂಡ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಟಿಎಂಸಿಯ ಆಲೋಚನೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
'ಅದಾನಿ ಅವರ ಜೊತೆ ನಿಮಗಿರುವ ಸಂಬಂಧವೇನು ಎಂದು ಪ್ರಧಾನಿಯವರನ್ನು ಸಂಸತ್ತಿನಲ್ಲಿಯೇ ಕೇಳಿದೆ. ಅದಾನಿ ಅವರ ವಿಮಾನದಲ್ಲಿ ಅದಾನಿ ಮತ್ತು ಪ್ರಧಾನಿ ಕುಳಿತುಕೊಂಡಿರುವ ಚಿತ್ರವನ್ನೂ ನಾನು ತೋರಿಸಿದ್ದೇನೆ ಮತ್ತು ಪ್ರಧಾನಿ ಮೋದಿ ಅದು ಅವರ ತಮ್ಮ ಸ್ವಂತ ಮನೆಯಂತೆ ಅದರಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಪ್ರಧಾನಿ ಮೋದಿ ಈ ಬಗ್ಗೆ ಒಂದೇ ಒಂದು ಪ್ರಶ್ನೆಗೆ ಉತ್ತರಿಸಲಿಲ್ಲ' ಎಂದು ರಾಹುಲ್ ಗಾಂಧಿ ಹೇಳಿದರು. ಸಂಸತ್ತಿನಲ್ಲಿ ಪ್ರಧಾನಿ ಮೋದಿ ಕೂಡ ನನಗೆ ಒಂದು ಪ್ರಶ್ನೆ ಕೇಳಿದ್ದರು. ಗಾಂಧಿ ಬದಲು ನೆಹರು ಸರ್‌ನೇಮ್‌ಅನ್ನು ಏಕೆ ಇಟ್ಟುಕೊಂಡಿಲ್ಲ ಎಂದು ಕೇಳಿದ್ದರು. ಈ ವೇಳೆ ನೀವು ಗಮನಿಸಬೇಕು. ಮೋದಿ ಭಾಷಣ ಮಾಡುವ ವೇಳೆ ಎಲ್ಲಾ ಟಿವಿಗಳಲ್ಲಿ ಅವರ ಭಾಷಣಗಳೇ ಬರುತ್ತಿದ್ದವು. ಆದರೆ, ನ್ನನ ಭಾಷಣದ ಒಂದೇ ಒಂದು ತುಣುಕು ಕೂಡ ಕಾಣುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಫೆಬ್ರುವರಿ 16 ರಂದು ಮತದಾನ ನಡೆದ ತ್ರಿಪುರಾದಲ್ಲಿ ಪಕ್ಷದ ಪ್ರಚಾರದಲ್ಲಿ ವಯನಾಡ್ ಸಂಸದ ರಾಹುಲ್ ಗಾಂಧಿ ಸಂಪೂರ್ಣವಾಗಿ ನಾಪತ್ತೆಯಾಗಿದ್ದವು. ಇಲ್ಲಿಯವರೆಗೆ, ಈಶಾನ್ಯದ ಮೂರು ರಾಜ್ಯಗಳ ಪೈಕಿ ತ್ರಿಪುರಾದಲ್ಲಿ ಪ್ರಚಾರದಿಂದ ಕಾಂಗ್ರೆಸ್ ಉನ್ನತ ನಾಯಕತ್ವವು ಸಂಪೂರ್ಣವಾಗಿ ಗೈರುಹಾಜರಾಗಿದೆ. ಮಂಗಳವಾರ (ಫೆಬ್ರವರಿ 21) ಮಾತ್ರ ನಾಗಾಲ್ಯಾಂಡ್‌ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದರು.
'ಎಲ್‌ಎಸಿಗೆ ಸೇನೆಯನ್ನು ಕಳಿಸಿದ್ದು ಮೋದಿ, ರಾಹುಲ್ ಗಾಂಧಿ ಅಲ್ವಲ್ಲ..' ಕಾಂಗ್ರೆಸ್ ನಾಯಕನಿಗೆ ಜೈಶಂಕರ್ ತಿರುಗೇಟು!
ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೂಡ ತ್ರಿಪುರದ ಪ್ರಚಾರದಿಂದ ಹೊರಗುಳಿದಿದ್ದರು. ನಾಗಾಲ್ಯಾಂಡ್‌ನ ಚುಮೌಕೆಡಿಮಾದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಮಂಗಳವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೇಲೆ ಸರಣಿ ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ರಾಜ್ಯವನ್ನು ಲೂಟಿ ಮಾಡಿದೆ ಎಂದು ಹೇಳಿದರು. ಕಳೆದ 20 ವರ್ಷಗಳಿಂದ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಮತ್ತು ಬಿಜೆಪಿ ನಾಗಾಲ್ಯಾಂಡ್ ಅನ್ನು ಲೂಟಿ ಮಾಡಿದೆ. ಜನರಿಗೆ ನ್ಯಾಯ ಸಿಗಲು ಮತ್ತು ಜನರಿಗಾಗಿ ಕೆಲಸ ಮಾಡುವ ಸರ್ಕಾರಕ್ಕೆ ಇದು ಸೂಕ್ತ ಸಮಯ ಎಂದು ಖರ್ಗೆ ಹೇಳಿದ್ದರು.
ರಾಹುಲ್ ಗಾಂಧಿ ವಿಮಾನ ಲ್ಯಾಂಡಿಂಗ್ ಅನುಮತಿ ನಿರಾಕರಣೆ, ಮತ್ತೊಮ್ಮೆ ಕಥೆ ಕಟ್ಟಿದ ಕಾಂಗ್ರೆಸ್!
"ಬಿಜೆಪಿಯ ರಾಜಕೀಯವು ನಾಗಾಗಳ ಸ್ಥಳೀಯ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ನಾಶಮಾಡುವ ಗುರಿಯನ್ನು ಹೊಂದಿದೆ, ನಾಗಾಲ್ಯಾಂಡ್ ಸಂಸ್ಕೃತಿಯ ಮೇಲಿನ ಈ ದಾಳಿ ಮತ್ತು ಧ್ರುವೀಕರಣ ಮತ್ತು ದ್ವೇಷದ ರಾಜಕೀಯದ ವಿರುದ್ಧ ನಾಗಾಲ್ಯಾಂಡ್ ಜನರು ಎದ್ದು ನಿಲ್ಲಬೇಕು" ಎಂದು ಖರ್ಗೆ ಹೇಳಿದರು. ಮೇಘಾಲಯ ಮತ್ತು ನಾಗಾಲ್ಯಾಂಡ್ ಎರಡೂ ರಾಜ್ಯಗಳಲ್ಲಿ ಫೆಬ್ರವರಿ 27 ರಂದು (ಸೋಮವಾರ) ಮತದಾನ ನಡೆಯಲಿದ್ದು, ಮಾರ್ಚ್ 2 ರಂದು (ಗುರುವಾರ) ಮತ ಎಣಿಕೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ