
ಹಿಂದೂ ಭಕ್ತರಂತೆ ಹಣೆಗೆ ವಿಭೂತಿ ಕತ್ತಿಗೆ ರುದ್ರಾಕ್ಷಿ ಧರಿಸಿ ಹಿಂದೂ ಯುವತಿಯೊಂದಿಗೆ ಹಿಂದೂ ತೀರ್ಥಕ್ಷೇತ್ರ ಉಜ್ಜಯಿನಿಯ ಮಹಾಕಾಲನ ದರ್ಶನ ಪಡೆಯಲು ಬಂದ ಮುಸ್ಲಿಂ ಯುವಕನನ್ನು ಭಜರಂಗದಳದ ಯುವಕರು ಥಳಿಸಿದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಹಿಂದೂ ಮಹಿಳೆ ಹಾಗೂ ಮುಸ್ಲಿಂ ಯುವಕ ಇಬ್ಬರು ಪಂಜಾಬ್‌ನ ಮೊಹಾಲಿಯವರಾಗಿದ್ದು, ಉಜ್ಜಯಿನಿಯ ಹೊಟೇಲೊಂದರಲ್ಲಿ ರೂಮ್ ಪಡೆದು ವಾಸ್ತವ್ಯ ಹೂಡಿದ್ದರು. ಈ ವಿಚಾರ ಭಜರಂಗದಳದವರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಭಜರಂಗದಳದವರು ಆ ಮುಸ್ಲಿಂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆರಂಭದಲ್ಲಿ ಆ ಮುಸ್ಲಿಂ ಯುವಕ ತಾನು ಹಿಂದೂ ಎಂದು ಹೇಳಿಕೊಂಡಿದ್ದಾನೆ. ಆದರೆ ಭಜರಂಗದಳದವರು ಬಾರಿಸುತ್ತಿದ್ದಂತೆ ಆತ ತಾನು ಮುಸ್ಲಿಂ ಹೆಸರು ಜಾಫರ್ ಖಾನ್ ಎಂದು ಹೇಳಿದ್ದಾಗಿ ವರದಿಯಾಗಿದೆ.
ಆ ಜಾಫರ್‌ನ ವೇಷ ಭೂಷಣ ನೋಡಿದರೆ ಯಾರಿಗೂ ಆತ ಹಿಂದೂ ಅಲ್ಲ ಎಂಬ ಯಾವುದೇ ಅನುಮಾನ ಬರುವುದಕ್ಕೆ ಸಾಧ್ಯವಿರಲಿಲ್ಲ, ಏಕೆಂದರೆ ಆತ ಹಳದಿ ಬಣ್ಣದ ಬಟ್ಟೆ ಕುರ್ತಾ ಹಾಗೂ ಧೋತಿ ಧರಿಸಿದ್ದು, ಕತ್ತಿನಲ್ಲಿ ರುದ್ರಾಕ್ಷಿ ಮಾಲೆ ಹಾಕಿದ್ದ ಆತನ ಹಣೆಯ ಮೇಲೆ ವಿಭೂತಿ ಇತ್ತು. ಆದರೂ ಭಜರಂಗದಳದವರಿಗೆ ಅದು ಹೇಗೆ ಸುಳಿವು ಸಿಕ್ತೋ ಗೊತ್ತಿಲ್ಲ, ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಜರಂಗದಳದವರು ಆತನನ್ನು ವಿಚಾರಿಸಿದಾಗ ಆತ ತಾನು ಶಿವನ ಭಕ್ತನೆಂದು ಮಹಾಕಾಳೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಬಂದಿದ್ದಾಗಿ ಹೇಳಿದ್ದಾನೆ. ಈ ಗಲಾಟೆಯ ನಂತರ ಪೊಲೀಸರು ಸ್ಥಳಕ್ಕೆ ತಲುಪಿ ದಾಖಲೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದಾಗ ಆತನ ಹೆಸರು ಜಾಫರ್ ಖಾನ್ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಗೆ ಮಾರ್ಚ್‌ನಲ್ಲಿ ಚುನಾವಣೆ ಘೋಷಣೆ
ಬೇರೆ ರಾಜ್ಯದ ಜೋಡಿಯೊಂದು ಹೋಟೆಲ್‌ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಬಜರಂಗದಳದ ಕಾರ್ಯಕರ್ತರಿಗೆ ಸಿಕ್ಕಿದ್ದು, ಸುಮಾರು ಒಂದು ಗಂಟೆ ಹೋಟೆಲ್ ಹೊರಗೆ ಕಾದ ಅವರು, ಅವರು ಆ ವ್ಯಕ್ತಿಯನ್ನು ಕಂಡು ತಡೆದು ವಿಚಾರಣೆ ನಡೆಸಿದ್ದಾರೆ. ಅವನ ನಿಜವಾದ ಗುರುತು ಬಹಿರಂಗವಾದ ತಕ್ಷಣ, ಹಲವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೊದಲ್ಲಿ, ಆ ವ್ಯಕ್ತಿ ತನ್ನ ಹೆಸರು ಜಾಫರ್ ಖಾನ್ ಮತ್ತು ತಾನು ಶಿವನ ಭಕ್ತ ಎಂದು ಹೇಳುವುದನ್ನು ಕಾಣಬಹುದು. ಅವನ ತಲೆಗೆ ಗಾಯವಾಗಿದ್ದು, ರಕ್ತಸ್ರಾವವಾಗುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನಿದ್ರಿಸುತ್ತಿದ್ದ 4 ವರ್ಷದ ಮಗುವನ್ನು ಕ್ಯಾಬಲ್ಲೇ ಬಿಟ್ಟು ಹೋದ ಬೆಂಗಳೂರು ಪೋಷಕರು
ಈತ ಹಿಂದೂ ಮಹಿಳೆಯ ಜೊತೆಗೆ ಮಹಾಕಾಳೇಶ್ವರ ದೇವಸ್ಥಾನ, ಹರಸಿದ್ಧಿ ದೇವಸ್ಥಾನ ಮತ್ತು ಕಾಲ ಭೈರವ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ. ಈ ಗಲಾಟೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪುರುಷ ಮತ್ತು ಮಹಿಳೆ ಇಬ್ಬರೂ ಮೊಹಾಲಿಯ ನಿವಾಸಿಗಳು ಎಂದು ನಾನಖೇಡಾ ಪೊಲೀಸ್ ಠಾಣೆಯ ಉಸ್ತುವಾರಿ ನರೇಂದ್ರ ಯಾದವ್ ತಿಳಿಸಿದ್ದಾರೆ. ಆ ಮಹಿಳೆಗೆ 32 ವರ್ಷ, ಇಬ್ಬರೂ ಬೇರೆ ಬೇರೆ ಸಮುದಾಯಗಳಿಗೆ ಸೇರಿದವರು. ಆಕೆಗೆ ಅವನ ಧರ್ಮದ ಬಗ್ಗೆ ತಿಳಿದಿತ್ತು ಮತ್ತು ಅವರು ಮೊದಲೇ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು. ಪೊಲೀಸರು ಅವರ ಆಧಾರ್ ಕಾರ್ಡ್‌ಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದ್ದು, ದೂರು ಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ