
11 ನಿಮಿಷದಲ್ಲಿ 7 ಸ್ಫೋಟ, 189 ಸಾವು: 11 ಆರೋಪಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್
ಮುಂಬೈ: 2006ರ ಮುಂಬೈನಲ್ಲಿ ನಡೆದ ಸ್ಪೋಟದ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 11 ಆರೋಪಿಗಳನ್ನು ನಿರಪರಾಧಿಗಳು ಎಂದು ಖುಲಾಸೆಗೊಳಿಸಿದೆ. ನ್ಯಾಯಮೂರ್ತಿ ಅನಿಲ್ ಕಿಲೋರ್ ಮತ್ತು ನ್ಯಾಯಮೂರ್ತಿ ಎಸ್.ಜಿ. ಚಂದಕ್ ಅವರ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ. ಕೆಳ ಹಂತದ ನ್ಯಾಯಾಲಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 12 ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಮಾನಿಸಿ ಶಿಕ್ಷೆಯನ್ನು ಪ್ರಕಟಿಸಿತ್ತು. 12 ಜನರಲ್ಲಿ ಐವರಿಗೆ ಮರಣದಂಡನೆ ಮತ್ತು ಏಳು ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇದೀಗ ಈ ತೀರ್ಪನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ.
11ನೇ ಜುಲೈ 2006ರಲ್ಲಿ ಮುಂಬೈನ 11 ಕಡೆ ನಡೆದ ಸ್ಪೋಟದಲ್ಲಿ 189 ಜನರು ಮೃತರಾಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯ 2015ರಲ್ಲಿ 13 ಆರೋಪಿಗಳಲ್ಲಿ 12 ಜನರನ್ನು ದೋಷಿಗಳು ಎಂದು ತೀರ್ಪು ನೀಡಿತ್ತು. ಈ 12 ಜನವರಲ್ಲಿ ಒಬ್ಬರು ಕೊರೊನಾ ವೈರಸ್ ಸೋಂಕು ತಗುಲಿ ಮೃತರಾಗಿದ್ದಾರೆ. ಇನ್ನುಳಿದ 11 ಜನರನ್ನು ನ್ಯಾಯಾಲಯ ಆರೋಪಗಳಿಂದ ಖುಲಾಸೆಗೊಳಿಸಿದೆ.
ಈ ಪ್ರಕರಣದ ವಿಚಾರಣೆ ಈ ವರ್ಷ ಜನವರಿಯಲ್ಲಿ ಪೂರ್ಣಗೊಂಡಿತ್ತು. ಪ್ರಕರಣದ ವಿಚಾರಣೆ ಬಳಿಕ ಬಾಂಬೆ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಲ್ಲಾ ಆರೋಪಿಗಳನ್ನು ನಾಸಿಕ್, ಯೆರವಡಾ ಮತ್ತು ನಾಗ್ಪುರ ಜೈಲುಗಳಲ್ಲಿ ಇರಿಸಲಾಗಿದೆ. ಜೈಲುಗಳಿಂದಲೇ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗಿತ್ತು.
ಜುಲೈ 11ರಂದು ಕೇವಲ 11 ನಿಮಿಷಗಳಲ್ಲಿಯೇ 7 ಕಡೆ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 189 ಜನರು ಮೃತರಾಗಿದ್ರೆ 827 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಈ ಸರಣಿ ಸ್ಪೋಟ ಇಡೀ ದೇಶದಲ್ಲಿ ಆತಂಕದ ವಾತಾವರಣ ನಿರ್ಮಿಸಿತ್ತು. ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಶ್ನಿಸಿ 12 ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸೋದರ ಜೊತೆ ಖುಲಾಸೆಗೊಳಿಸಿದೆ.
ಆರೋಪಿಗಳಾದ ಮೊಹಮ್ಮದ್ ಫೈಸಲ್ ಶೇಖ್, ಎಹ್ತೇಷಾಮ್ ಸಿದ್ದಿಕಿ, ನವೇದ್ ಹುಸೇನ್ ಖಾನ್, ಆಸಿಫ್ ಖಾನ್ ಮತ್ತು ಕಮಲ್ ಅನ್ಸಾರಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ಇವರಲ್ಲಿ ಕಮಲ್ ಅನ್ಸಾರಿ ಅವರು 2022 ರಲ್ಲಿ ಕರೋನಾ ವೈರಸ್‌ನಿಂದಾಗಿ ಜೈಲಿನಲ್ಲಿಯೇ ನಿಧನರಾಗಿದ್ದರು.
ನ್ಯಾಯಾಲಯ ಹೇಳಿದ್ದೇನು?
ಪಿಟಿಐ ವರದಿಯ ಪ್ರಕಾರ, ನ್ಯಾಯಮೂರ್ತಿ ಅನಿಲ್ ಕಿಲೋರ್ ಮತ್ತು ನ್ಯಾಯಮೂರ್ತಿ ಎಸ್.ಜಿ. ಚಂದಕ್ ಅವರ ವಿಭಾಗೀಯ ಪೀಠ, ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ. ಆರೋಪಿಗಳು ಈ ಅಪರಾಧವನ್ನು ಮಾಡಿದ್ದಾರೆ ಎಂದು ನಂಬುವುದು ಕಷ್ಟ , ಆದ್ದರಿಂದ ಅವರ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ.
ಐದು ಜನರಿಗೆ ವಿಧಿಸಲಾದ ಮರಣದಂಡನೆ ಮತ್ತು ಉಳಿದ ಏಳು ಜನರಿಗೆ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ದೃಢೀಕರಿಸಲು ನಿರಾಕರಿಸುವುದಾಗಿ ಹೇಳಿದ ಪೀಠ, ಅವರನ್ನು ಖುಲಾಸೆಗೊಳಿಸಿದೆ. ಆರೋಪಿಗಳು ಬೇರೆ ಯಾವುದೇ ಪ್ರಕರಣದಲ್ಲಿ ಅಗತ್ಯವಿಲ್ಲದಿದ್ದರೆ, ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ