
ನವದೆಹಲಿ: ಪುಟ್ಟ ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುವವರು ಸಂಚಾರ ನಿಯಮ ಉಲ್ಲಂಘಿಸಿ ಅಪಘಾತಕ್ಕೊಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಅಂಥ ವಾಹನ ಚಾಲಕರಿಗೆ ದುಪ್ಪಟ್ಟು ದಂಡ ವಿಧಿಸುವ ಬಗ್ಗೆ ರಸ್ತೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ.
ಇದರ ಜತೆಗೆ ಎಲ್ಲ ಚಾಲಕರಿಗೆ ಸಂಚಾರ ನಿಯಮಗಳ ಅನುಸರಣೆ ಅಥವಾ ಉಲ್ಲಂಘನೆಯ ಆಧಾರದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಅಂಕ ಪದ್ಧತಿ ಆರಂಭಿಸಲು ಕೂಡಾ ಉದ್ದೇಶಿಸಲಾಗಿದೆ.
ಈ ಸಂಬಂಧ ಮೋಟಾರ್ ವಾಹನಗಳ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಅಭಿಪ್ರಾಯ ಸಂಗ್ರಹಕ್ಕಾಗಿ ವಿವಿಧ ಸಚಿವಾಲಯಗಳಿಗೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ.
ಮಕ್ಕಳನ್ನು ಕರೆದುಕೊಂಡು ವಾಹನ ಚಲಾಯಿಸುವ ಪಾಲಕರು, ಕುಟುಂಬಸ್ಥರು ಹಾಗೂ ಶಾಲಾ ಬಸ್‌ಗಳು ರಸ್ತೆ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಸಲ ನಿಯಮ ಉಲ್ಲಂಘಿಸಿದವರಿಗೆ ಪರವಾನಗಿ ರದ್ದತಿ, ವಿಮಾ ಮೊತ್ತದಲ್ಲಿ ಕಡಿತದಂಥ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಧನಾತ್ಮಕ ಅಂಕ ಪಡೆದವರಿಗೆ ವಿಮಾ ಪ್ರೀಮಿಯಂ ಕಡಿಮೆ ಮಾಡುವ ಪ್ರಸ್ತಾವ ಮಾಡಲಾಗಿದೆ. ಚಾಲನಾ ಪರವಾನಗಿ ನವೀಕರಣ ಮಾಡುವಾಗಲೂ ಪರೀಕ್ಷೆ ಕಡ್ಡಾಯಗೊಳಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ