ಬೆಂಗಳೂರು ಐಐಐಟಿಯಿಂದ ಜೊತೆ ಜೊತೆಗೆ ಡಿಗ್ರಿ ಪಡೆದ ಅಮ್ಮ ಮಗ: ನಮ್ಮ ಸಾಧನೆಯ ರೂವಾರಿ ಅಪ್ಪನೇ ಎಂದ್ರು

By Anusha KbFirst Published Jul 8, 2024, 4:25 PM IST
Highlights

ಇಂಟರ್‌ನ್ಯಾಷನಲ್‌ ಇನ್ಸ್ಟಿಟ್ಯೂಟ್ ಆಪ್ ಇನ್‌ಫಾರ್ಮೇಷನ್ ಟೆಕ್ನಾಲಾಜಿ ಸಂಸ್ಥೆ ಐಐಐಟಿ-ಬಿ ನಿನ್ನೆ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯ್ತು, ಇಲ್ಲಿ ಅಮ್ಮ ಮಗ ಇಬ್ಬರೂ ಒಂದೇ ವೇದಿಕೆಯಲ್ಲಿ ತಮ್ಮ ಶೈಕ್ಷಣಿಕ ಡಿಗ್ರಿ ಪಡೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. 

ಬೆಂಗಳೂರು: ಇಂಟರ್‌ನ್ಯಾಷನಲ್‌ ಇನ್ಸ್ಟಿಟ್ಯೂಟ್ ಆಪ್ ಇನ್‌ಫಾರ್ಮೇಷನ್ ಟೆಕ್ನಾಲಾಜಿ ಸಂಸ್ಥೆ ಐಐಐಟಿ-ಬಿ ನಿನ್ನೆ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯ್ತು, ಇಲ್ಲಿ ಅಮ್ಮ ಮಗ ಇಬ್ಬರೂ ಒಂದೇ ವೇದಿಕೆಯಲ್ಲಿ ತಮ್ಮ ಶೈಕ್ಷಣಿಕ ಡಿಗ್ರಿ ಪಡೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. 48 ವರ್ಷ ಪ್ರಾಯದ ಅಮ್ಮ ರಂಜನಿ ನಿರಂಜನ್ ಅವರು ಪಿಹೆಚ್‌ಡಿ ಡಿಗ್ರಿ ಪಡೆದರೆ ಅವರ 22 ವರ್ಷದ ಮಗ ರಾಘವ ಎಸ್‌ಎನ್‌ ಅವರು ಇಂಟಿಗ್ರೇಟೆಡ್ ಎಂ ಟೆಕ್ ಪದವಿಯನ್ನು ಒಂದೇ ವೇದಿಕೆಯಲ್ಲಿ ಸ್ವೀಕರಿಸಿದರು. 

ತಮ್ಮ ಈ ಬದುಕಿನ ಈ ವಿಶೇಷ ಕ್ಷಣದ ಬಗ್ಗೆ ಮಾತನಾಡಿದ ತಾಯಿ ರಂಜನಿ, ಮಗ ರಾಘವ್ ಜೊತೆಗೇ ತನ್ನ ಪಿಹೆಚ್‌ಡಿ ಡಿಗ್ರಿ ಪಡೆಯುತ್ತಿರುವುದಕ್ಕ ಖುಷಿಯಾಗುತ್ತಿದೆ. ನಮ್ಮ ಕುಟುಂಬದಲ್ಲಿ ಇದೊಂದು ಗಮನಾರ್ಹ ಸಾಧನೆ. ಪ್ರತಿಯೊಬ್ಬರಿಗೂ ಇಂತಹ ಅವಕಾಶ ಸಿಗುವುದಿಲ್ಲ, ಈ ವಿಚಾರಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನಾನು ನನಗಿಂತ 13 ವರ್ಷ ಚಿಕ್ಕವರಾದ ವಿದ್ಯಾರ್ಥಿಗಳ ಜೊತೆ ಕ್ಲಾಸ್‌ರೂಮ್‌ನಲ್ಲಿ ಕುಳಿತಿರುತ್ತಿದ್ದೆ, ಮೊದಮೊದಲೆಲ್ಲಾ ಇದೊಂದು ಸವಾಲಾಗಿತ್ತು. ಇದು ಕೇವಲ ಸಮಯದ ವಿಚಾರ, ದಿನದ ಕೊನೆಯಲ್ಲಿ ನಾವೆಲ್ಲರೂ ಕಲಿಯುವವರೇ ಆಗಿದ್ದೇವೆ ಎಂದು ರಂಜನಿ ನಿರಂಜನ್ ಹೇಳಿದ್ದಾರೆ.

Latest Videos

ಈ ಮೊದಲು ರಂಜನಿ ನಿರಂಜನ್ ಅವರು ಪಿಹೆಚ್‌ಡಿ ಮಾಡುವುದಕ್ಕೂ ಮೊದಲು ಪಿಇಎಸ್ ಯುನಿವರ್ಸಿಟಿಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತ ಅಮ್ಮನೊಂದಿಗೆ ಪದವಿ ಪಡೆದ ಖುಷಿಯಲ್ಲಿದ್ದ ಮಗ ರಾಘವ್ ಮಾತನಾಡಿ, ನಾನು ನನ್ನ ತಾಯಿಗೆ ಕಲಿಸುವ ವೇಳೆ ಕೆಲವು ಬಾರಿ ಪಾತ್ರಗಳು ಹೇಗೆ ವ್ಯತಿರಿಕ್ತವಾಗಿರುತ್ತವೆ ಎಂಬುದನ್ನು ಹೇಳಿಕೊಂಡರು. ಗಣಿತದ ಪ್ರಶ್ನೆಗಳಿಗೆ ಅದರಲ್ಲೂ 12ನೇ ತರಗತಿಯ ಮ್ಯಾಥ್ಸ್‌ನ ಕೆಲ ಸಮಸ್ಯೆಗಳಿಗೆ ತಾಯಿ ನನ್ನ ಸಹಾಯ ಕೇಳುತ್ತಿದ್ದರು. ಅದು ನನಗೆ ಬಹಳ ರೋಮಾಂಚನಕಾರಿ ಹಾಗೂ ವಿನೋದಮಯವಾಗಿತ್ತು. ಇದು ಅಮ್ಮ ಮಗನ ಪಾತ್ರ ಅದಲೂ ಬದಲಾದಂತಿತ್ತು. ನಾನು ನನ್ನಮ್ಮನ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ ಎಂದರು.

ಈ ಅಮ್ಮ ಮಗ ಇಬ್ಬರು ಕೂಡ ತಮ್ಮ ಸಾಧನೆಗೆ ಶಕ್ತಿಯಾಗಿ ನಿಂತಿರುವುದಕ್ಕೆ ಗಂಡ ಹಾಗೂ ತಂದೆಗೆ ಕ್ರೆಡಿಟ್ ನೀಡಿದ್ದಾರೆ. ನನ್ನ ಈ ಸಾಧನೆಯ ಹಿಂದೆ ನನ್ನ ತಂದೆಯ ದೊಡ್ಡ ಪಾತ್ರವಿದೆ. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುವ ಅವರು ಕಳೆದೈದು ವರ್ಷಗಳಲ್ಲಿ ನನ್ನ ತಾಯಿ ಬನಶಂಕರಿಯಲ್ಲಿರುವ ಕಾಲೇಜಿಗೆ ದಿನವೂ ಸರಿಯಾದ ಸಮಯಕ್ಕೆ ತಲುಪುವುದಕ್ಕೆ ಸಹಾಯ ಮಾಡಿದ್ದಾರೆ. ಅವರು ನಮ್ಮ ಕುಟುಂಬದ ಬೆನ್ನೆಲುಬು. ಸ್ವತಃ ಇಂಜಿನಿಯರ್ ಆಗಿರುವ ನಮ್ಮ ತಂದೆ ಅವರ ಪತ್ನಿಗೆ ಸಂಶೋಧನೆಗೆ ಬೇಕಾದ ಸಾಕಷ್ಟು ತಾಂತ್ರಿಕ ಮಾಹಿತಿಗಳನ್ನು ನೀಡಿದ್ದಾರೆ ಎಂದು ಅಮ್ಮನ ಸಾಧನೆಗೆ ಬೆನ್ನೆಲುಬಾಗಿ ನಿಂತ ಅಪ್ಪನನ್ನು ಕೊಂಡಾಡಿದ್ದಾರೆ ಮಗ ರಾಘವ್.

ಪದವಿ ಸ್ವೀಕರಿಸಿದ ಬಳಿಕ ತಮ್ಮ ಸಂಶೋಧನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ತಾಯಿ ರಂಜನಿ ಅವರು, ನನ್ನ ಸಂಶೋಧನೆ ವಿಚಾರವೂ ಕ್ಲಾಸಿಫಿಕೇಷನ್ ಆಫ್ ಅಲ್ಗೋರಿತಮ್‌ಗೆ ಸಂಬಂಧಿಸಿದ್ದಾಗಿತ್ತು. ಇದು ಟ್ರಸ್ಟ್‌ ಸ್ಕೋರ್‌ನೊಂದಿಗೆ ಭವಿಷ್ಯವನ್ನು ತೋರಿಸುತ್ತದೆ. ಅತ್ಯಾಧುನಿಕ ಅಲ್ಗಾರಿದಮ್‌ಗಳು ಸಹ ತಪ್ಪು ಮುನ್ಸೂಚನೆಗಳನ್ನು ವಿಶ್ವಾಸದಿಂದ ಮಾಡುವುದನ್ನು ನಾವು ನೋಡಿದ್ದೇವೆ. ಇದಕ್ಕೊಂದು ಮಾಡೆಲ್ ಇಲ್ಲ ಎಂದು ಹೇಳಬಹುದೇ ಎಂಬುದನ್ನು ನಾವು ಅನ್ವೇಷಿಸಲು ಬಯಸುತ್ತೇವೆ. ಟ್ರಸ್ಟ್ ಸ್ಕೋರ್‌ನೊಂದಿಗೆ ಸಂಶೋಧಕರು ಡಾಟಾವನ್ನು ತೆಗೆದುಕೊಳ್ಳಬೇಕೆ ಬೇಡವೇ ಎಂಬುದನ್ನು ನಿರ್ಧರಿಸಬಹುದಾಗಿದೆ ಎಂದರು.

ಅದೇನೆ ಇರಲಿ ಪ್ರತಿ ಪುರುಷನ ಸಾಧನೆಯ ಹಿಂದೊಬ್ಬಳು ಹೆಣ್ಣು ಮಗಳಿರುತ್ತಾಳೆ ಎಂಬ ವಿಚಾರವನ್ನು ಇದುವರೆಗೆ ಕೇಳ್ತಿದ್ದೆವು, ಇಲ್ಲಿ ಮನೆಯ ಸ್ತ್ರೀ ಹಾಗೂ ಮಗನ ಸಾಧನೆಯ ಹಿಂದೆ ಅಪ್ಪನೊಬ್ಬನ ಸಣ್ಣ ಸಣ್ಣ ತ್ಯಾಗವೂ ಇದೆ ಎಂದರೆ ತಪ್ಪಾಗಲಾರದು.

click me!