
ನವದೆಹಲಿ: ಎಲ್ ನಿನೋ ಹವಾಮಾನ ವೈಪರೀತ್ಯದ ಪರಿಣಾಮ ಈ ವರ್ಷ ಭಾರತ ತೀವ್ರ ಮಳೆ ಕೊರತೆ ಎದುರಿಸತೊಡಗಿದ್ದು, ಈ ಬಾರಿ 126 ವರ್ಷಗಳಲ್ಲೇ 5ನೇ ಅತಿ ಶುಷ್ಕ ಜೂನ್ ತಿಂಗಳನ್ನು ಕಂಡಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ. ಇದೇ ವೇಳೆ, ಜುಲೈ ತಿಂಗಳಿನಲ್ಲೂ ದೇಶಾದ್ಯಂತ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
ಐಎಂಡಿ ಮುಖ್ಯಸ್ಥ ಡಾ. ಮೃತ್ಯುಂಜಯ ಮಹಾಪಾತ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ದೇಶಾದ್ಯಂತ ಸರಾಸರಿ 165.3 ಮಿ.ಮೀ. ಮಳೆಗೆ ಬದಲಾಗಿ ಕೇವಲ 99.5 ಮಿ.ಮೀ. ಮಳೆಯಷ್ಟೇ ಬಿದ್ದಿದ್ದು, ಸುಮಾರು ಶೇ.40 ಮಳೆ ಕೊರತೆ ದಾಖಲಾಗಿದೆ. 1901ರ ನಂತರ ಅಂದರೆ 126 ವರ್ಷಗಳಲ್ಲೇ ಇದು 5ನೇ ಅತಿ ಶುಷ್ಕ ಜೂನ್ ತಿಂಗಳು’ ಎಂದರು.
’ಈ ಹಿಂದೆ 2009ರಲ್ಲಿ 87.6 ಮಿ.ಮೀ., 1905ರಲ್ಲಿ 91.9 ಮಿ.ಮೀ., 2014ರಲ್ಲಿ 92.8 ಮಿ.ಮೀ. ಮತ್ತು 1926ರಲ್ಲಿ 96.7 ಮಿ.ಮೀ.ನಷ್ಟು ಕಡಿಮೆ ಮಳೆ ದಾಖಲಾಗಿತ್ತು’ ಎಂದು ಮಾಹಿತಿ ನೀಡಿದ್ದಾರೆ.
ಜುಲೈನಲ್ಲೂ ಮಳೆ ಇಲ್ಲ:
‘ಜುಲೈನಲ್ಲಿ ವಾಡಿಕೆಯ 280.4 ಮಿ.ಮೀ.ನಲ್ಲಿ, ಶೇ.94ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಕಡಿಮೆ ಮಳೆ ಆಗುವ ಸಾಧ್ಯತೆ ಇದ್ದರೂ, ವಾಯುವ್ಯ, ಈಶಾನ್ಯ, ಪೂರ್ವ-ಮಧ್ಯ ಭಾರತ ಪ್ರದೇಶಗಳಲ್ಲಿ ಸಾಧಾರಣಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ರೈತರು ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಾಗಿರಬೇಕು’ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ