
ಕೋಲ್ಕತ್ತಾ (ಜೂ.30): ಪಶ್ಚಿಮ ಬಂಗಾಳದ ಇತರ ಹಿಂದುಳಿದ ವರ್ಗಗಳ (OBC) ಮೀಸಲಾತಿ ವ್ಯವಸ್ಥೆಯಲ್ಲಿ ಆಡಳಿತಾರೂಢ ಸರ್ಕಾರ ಭಾರಿ ಬದಲಾವಣೆ ತಂದಿದೆ. ರಾಜ್ಯದ ಒಬಿಸಿ ಮೀಸಲಾತಿಯ ಕಾನೂನು ಚೌಕಟ್ಟನ್ನು ಸಂಪೂರ್ಣವಾಗಿ ಮರುರೂಪಿಸುವ ಎರಡು ಪ್ರಮುಖ ತಿದ್ದುಪಡಿ ವಿಧೇಯಕಗಳನ್ನು ಪಶ್ಚಿಮ ಬಂಗಾಳ ವಿಧಾನಸಭೆ ಸೋಮವಾರ ಅಂಗೀಕರಿಸಿದೆ. ಈ ಹೊಸ ನಿಯಮಾವಳಿಗಳ ಪ್ರಕಾರ, ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ಅವಧಿಯಲ್ಲಿ ಒಬಿಸಿ ಪಟ್ಟಿಗೆ ಸೇರಿಸಲಾಗಿದ್ದ ಬರೋಬ್ಬರಿ 65 ಮುಸ್ಲಿಂ ಉಪಜಾತಿಗಳನ್ನು ಹಾಗೂ 9 ಹಿಂದೂ ಉಪಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಕೈಬಿಡಲಾಗಿದೆ.
ಪಶ್ಚಿಮ ಬಂಗಾಳ ಸರ್ಕಾರದ ಹೊಸ ನಿಯಮಾವಳಿಗಳ ಅಡಿಯಲ್ಲಿ, ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಕ್ಕೆ (ST) ಸೇರದ ಒಟ್ಟು 66 ಸಮುದಾಯಗಳನ್ನು ಮಾತ್ರ ಒಬಿಸಿ ಮೀಸಲಾತಿಗೆ ಅರ್ಹರೆಂದು ಘೋಷಿಸಲಾಗಿದೆ. ಇದರಲ್ಲಿ 54 ಹಿಂದೂ ಮತ್ತು 12 ಮುಸ್ಲಿಂ ಸಮುದಾಯಗಳು ಸೇರಿವೆ. ಟಿಎಂಸಿ ಸರ್ಕಾರದ ಹಿಂದಿನ ಪಟ್ಟಿಯಲ್ಲಿ ಒಟ್ಟು 113 ಉಪಜಾತಿಗಳಿದ್ದವು, ಅದರಲ್ಲಿ 77 ಮುಸ್ಲಿಂ ಮತ್ತು 36 ಮುಸ್ಲಿಮೇತರ (ಹಿಂದೂ) ಸಮುದಾಯಗಳಿದ್ದವು. ಆದರೆ, ಮೇ 2024 ರಲ್ಲಿ ಕಲ್ಕತ್ತಾ ಹೈಕೋರ್ಟ್ ಈ ಹಳೆಯ ಪಟ್ಟಿಯನ್ನು ರದ್ದುಗೊಳಿಸಿ, ಒಬಿಸಿ ಮೀಸಲಾತಿಯನ್ನು ಶೇಕಡಾ 17 ರಿಂದ ಶೇಕಡಾ 7 ಕ್ಕೆ ಇಳಿಸಿ ಆದೇಶ ಹೊರಡಿಸಿತ್ತು.
ಈ ಹೊಸ ತಿದ್ದುಪಡಿಗಳ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವು 2012 ರಲ್ಲಿ ಮಾಡಿದ್ದ ಕಾನೂನು ಬದಲಾವಣೆಗಳನ್ನು ಹಿಂಪಡೆದಂತಾಗಿದೆ. ಹಿಂದಿನ ಸರ್ಕಾರವು ಅರ್ಹ ಹಿಂದೂ ಹಿಂದುಳಿದ ವರ್ಗಗಳನ್ನು ಕಡೆಗಣಿಸಿ, ಮುಸ್ಲಿಂ ಸಮುದಾಯಗಳಿಗೆ ಅಸಮರ್ಪಕವಾಗಿ ಒಬಿಸಿ ಸವಲತ್ತುಗಳನ್ನು ವಿಸ್ತರಿಸಿದೆ ಎಂದು ಬಿಜೆಪಿ ನಿರಂತರವಾಗಿ ಆರೋಪಿಸುತ್ತಾ ಬಂದಿತ್ತು. ಹೊಸ ಕಾಯ್ದೆಯ ಪ್ರಕಾರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದೊಂದಿಗೆ ಸಮಾಲೋಚನೆ ನಡೆಸಿ ಒಬಿಸಿ ಮೀಸಲಾತಿಯ ಶೇಕಡಾವಾರು ಪ್ರಮಾಣವನ್ನು ಸರ್ಕಾರ ನಿರ್ಧರಿಸಲಿದೆ. ಆದರೆ, ಯಾವುದೇ ಕಾರಣಕ್ಕೂ ಒಟ್ಟು ಮೀಸಲಾತಿ ಪ್ರಮಾಣವು ಶೇಕಡಾ 50 ರ ಮಿತಿಯನ್ನು ಮೀರುವಂತಿಲ್ಲ.
'ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ, 1993' ಕ್ಕೆ ತರಲಾದ ತಿದ್ದುಪಡಿಯ ಪ್ರಕಾರ, ಇನ್ನು ಮುಂದೆ ಯಾವುದೇ ವ್ಯಕ್ತಿ ತಮನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಆಯೋಗಕ್ಕೆ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲದೆ, ಅರ್ಹವಲ್ಲದ ಸಮುದಾಯಗಳನ್ನು ಸೇರಿಸಿರುವುದರ ಅಥವಾ ಅಗತ್ಯವಿರುವ ಸಮುದಾಯಗಳನ್ನು ಕೈಬಿಟ್ಟಿರುವುದರ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಈ ವಿಷಯಗಳ ಕುರಿತು ಆಯೋಗ ನೀಡುವ ಶಿಫಾರಸುಗಳನ್ನು ಪಾಲಿಸುವುದು ರಾಜ್ಯ ಸರ್ಕಾರಕ್ಕೆ ಕಡ್ಡಾಯವಾಗಿರುತ್ತದೆ (Binding). ಆಯೋಗದ ಸದಸ್ಯರ ಅಧಿಕಾರಾವಧಿ 3 ವರ್ಷ ಇರಲಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವ ಸರ್ಕಾರಿ ಅಧಿಕಾರಿಯ ಅವಧಿಯನ್ನು ಸರ್ಕಾರ ನಿರ್ಧರಿಸಲಿದೆ.
ಬಂಗಾಳದಲ್ಲಿ ಒಬಿಸಿ ಮೀಸಲಾತಿಯ ಇತಿಹಾಸವನ್ನು ಗಮನಿಸಿದರೆ ರಂಗನಾಥ್ ಮಿಶ್ರಾ ಆಯೋಗದ ವರದಿಯ ನಂತರ, ರಾಜ್ಯದ ಅಂದಿನ ಎಡರಂಗ (Left Front) ಸರ್ಕಾರವು ಮೊದಲ ಬಾರಿಗೆ ಒಬಿಸಿ ಮೀಸಲಾತಿಯನ್ನು ಜಾರಿಗೆ ತಂದಿತ್ತು. ಅದರಲ್ಲಿ ಹಿಂದುಳಿದಿದ್ದ ಆಧಾರದ ಮೇಲೆ 'ಕ್ಯಾಟಗರಿ ಎ' ಗೆ ಶೇ. 10 ಮತ್ತು 'ಕ್ಯಾಟಗರಿ ಬಿ' ಗೆ ಶೇ. 7 ರಷ್ಟು ಕೋಟಾ ನೀಡಲಾಗಿತ್ತು. 2010 ರಲ್ಲಿ ಅಂದಿನ ಸಚಿವ ಜೋಗೇಶ್ ಚಂದ್ರ ಬರ್ಮನ್ ಈ ವಿಧೇಯಕವನ್ನು ಮಂಡಿಸಿದ್ದರು. ಆದರೆ, 2012 ರಲ್ಲಿ ಅಧಿಕಾರಕ್ಕೆ ಬಂದ ಟಿಎಂಸಿ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತಂದು, 'ಕ್ಯಾಟಗರಿ ಎ' ಅಡಿಯಲ್ಲಿ 65 ಸಮುದಾಯಗಳನ್ನು ಮತ್ತು 'ಕ್ಯಾಟಗರಿ ಬಿ' ಅಡಿಯಲ್ಲಿ 78 ಸಮುದಾಯಗಳನ್ನು ಸೇರಿಸಿತು. ಇದರಲ್ಲಿ ಪರಿಶಿಷ್ಟ ಜಾತಿಯಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರನ್ನೂ 'ಕ್ಯಾಟಗರಿ ಬಿ' ಅಡಿಯಲ್ಲಿ ಸೇರಿಸಲಾಗಿತ್ತು.
ಮೇ 2024 ರಲ್ಲಿ ಕಲ್ಕತ್ತಾ ಹೈಕೋರ್ಟ್, 2010 ರ ನಂತರ ನೀಡಲಾದ ಎಲ್ಲಾ ಒಬಿಸಿ ಪ್ರಮಾಣಪತ್ರಗಳನ್ನು ರದ್ದುಗೊಳಿಸಿತ್ತು. ರಾಜ್ಯ ಸರ್ಕಾರವು ಅಂದಿನ ಹಿಂದುಳಿದ ವರ್ಗಗಳ ಆಯೋಗವನ್ನು ಬೈಪಾಸ್ ಮಾಡಿ (ಬದಿಗೊತ್ತಿ) ನೇರವಾಗಿ ರಾಜಕೀಯ ಲಾಭಕ್ಕಾಗಿ ಈ ಸಮುದಾಯಗಳನ್ನು ಸೇರಿಸಿದೆ, ಇದು ಕಾನೂನುಬದ್ಧವಾಗಿ ನಿಲ್ಲುವಂತದ್ದಲ್ಲ ಎಂದು ಕೋರ್ಟ್ ಕಟುವಾಗಿ ಟೀಕಿಸಿತ್ತು. ಹೈಕೋರ್ಟ್ ತಪರಾಕಿನ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಸದ್ಯಕ್ಕೆ 66 ಒಬಿಸಿ ವರ್ಗಗಳನ್ನು ಒಳಗೊಂಡಿರುವ ಅಧಿಸೂಚನೆಯ ಮೂಲಕ ಒಬಿಸಿ ಮೀಸಲಾತಿಯನ್ನು ಶೇ. 7 ಕ್ಕೆ ಸೀಮಿತಗೊಳಿಸಿದೆ. ಇನ್ನು ಮುಂದೆ ಯಾವುದೇ ಸಮುದಾಯದ ಸೇರ್ಪಡೆ ಪ್ರಕ್ರಿಯೆಯು ಕಡ್ಡಾಯವಾಗಿ ಆಯೋಗದ ಕೂಲಂಕಷ ತನಿಖೆಯ ಮೂಲಕವೇ ನಡೆಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ