ಮೀಸಲಾತಿ ಇರುವುದು ದಮನಿತರ ಸಬಲೀಕರಣಕ್ಕೆ, ಅದು ಶಾಶ್ವತವಲ್ಲ: ಮೋಹನ್‌ ಭಾಗ್ವತ್‌

Published : Aug 07, 2026, 07:55 AM IST
Mohan Bhagwat arrives in Belagavi for RSS national meeting

ಸಾರಾಂಶ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗ್ವತ್‌ ಅವರು, ಮೀಸಲಾತಿ ಶಾಶ್ವತವಲ್ಲ ಮತ್ತು ಪ್ರಗತಿ ಸಾಧಿಸಿದವರು ಇತರರಿಗೆ ಅವಕಾಶ ನೀಡಬೇಕು ಎಂದು ಕರೆ ನೀಡಿದ್ದಾರೆ. ಜೆನ್‌ ಝೀ ಪ್ರತಿಭಟನೆಗಳನ್ನು ದೇಶವಿರೋಧಿ ಎಂದು ಪರಿಗಣಿಸಬಾರದು ಎಂದಿದ್ದಾರೆ.

ಮುಂಬೈ (ಆ.7): ‘ಮೀಸಲಾತಿಯು ಹಿಂದುಳಿದ ಮತ್ತು ಅವಕಾಶವಂಚಿತ ವರ್ಗಗಳ ಏಳಿಗೆಗಾಗಿ ಇರುವ ವ್ಯವಸ್ಥೆಯೇ ಹೊರತು, ಅದೊಂದು ಶಾಶ್ವತ ವ್ಯವಸ್ಥೆಯಲ್ಲ. ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಿರುವವರು, ಇತರರಿಗೂ ಅವಕಾಶಗಳು ನೀಡಬೇಕು’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌ ಗುರುವಾರ ಕರೆ ನೀಡಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, ‘ಮೀಸಲಾತಿಯು ಹಿಂದುಳಿದ ಮತ್ತು ಅವಕಾಶವಂಚಿತರ ಪ್ರಗತಿಗಾಗಿ ಇರುವ ವ್ಯವಸ್ಥೆಯೇ ಹೊರತು, ಅದೊಂದು ಶಾಶ್ವತ ವ್ಯವಸ್ಥೆಯಲ್ಲ. ಸಾಮಾಜಿಕ ತಾರತಮ್ಯ ನಿವಾರಿಸಲು ಮೀಸಲಾತಿಯನ್ನು ಪರಿಚಯಿಸಲಾಯಿತು. ತಾರತಮ್ಯ ಇರುವವರೆಗೆ, ಮೀಸಲಾತಿ ಅಸ್ತಿತ್ವದಲ್ಲಿರುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ಮೀಸಲಾತಿಯ ಫಲಾನುಭವಿಗಳಲ್ಲೇ ಕೆಲವರು, ‘ನಮಗೆ ಸಾಕಷ್ಟು ಸಿಕ್ಕಿದೆ, ಈಗ ಆ ಸೌಲಭ್ಯಗಳನ್ನು ಇತರರಿಗೂ ವಿಸ್ತರಿಸುವ ಸಮಯ ಬಂದಿದೆ’ ಎಂದು ಅಭಿಪ್ರಾಯಪಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ. ಮೀಸಲಾತಿಯಿಂದ ಪ್ರಗತಿ ಸಾಧಿಸಿರುವವರು, ಇತರರಿಗೂ ಅವಕಾಶಗಳು ಲಭ್ಯವಾಗುವಂತೆ ಮಾಡಲು ಸ್ವಯಂಪ್ರೇರಣೆಯಿಂದ ಮುಂದಿನ ಸೌಲಭ್ಯಗಳನ್ನು ಬಿಟ್ಟುಕೊಡುವ ಬಗ್ಗೆ ಯೋಚಿಸಬೇಕು’ ಎಂದು ಮನವಿ ಮಾಡಿದರು.

ಜೆನ್‌ ಝೀಗಳು ದೇಶವಿರೋಧಿಗಳಲ್ಲ: ಭಾಗವತ್‌

ಮುಂಬೈ: ಜೆನ್‌ ಝೀಗಳು ಕೂಡಾ ನಮ್ಮವರೇ. ಅವರು ತಮ್ಮ ಕಳವಳಗಳ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆಂದರೆ ಅದನ್ನು ಖಂಡಿತಾ ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು. ಜೆನ್‌ ಝೀಗಳು ಪ್ರತಿಭಟನೆ ನಡೆಸುತ್ತಿದ್ದಾರೆಂದ ಮಾತ್ರಕ್ಕೆ ಅವರು ದೇಶ ವಿರೋಧಿಗಳಾಗುವುದಿಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಂವಾದದ ಒಂದು ನ್ಯಾಯಸಮ್ಮತ ರೂಪ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರತಿಪಾದಿಸಿದ್ದಾರೆ. ನೀಟ್ ಪರೀಕ್ಷಾ ಅಕ್ರಮ ವಿರೋಧಿಸಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜೆನ್‌ ಝೀ ಪ್ರತಿಭಟನೆ, ಅದಕ್ಕೆ ದೇಶವ್ಯಾಪಿ ವ್ಯಕ್ತವಾದ ಪರ- ವಿರೋಧ ಅಭಿಪ್ರಾಯಗಳ ಬೆನ್ನಲ್ಲೇ ಭಾಗವತ್‌ ವ್ಯಕ್ತಪಡಿಸಿದ ಈ ಅಭಿಪ್ರಾಯ ಭಾರೀ ಮಹತ್ವ ಪಡೆದುಕೊಂಡಿದೆ.

ಗುರುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 2,000 ಜೆನ್ ಝೀ ಮತ್ತು ಜೆನ್ ಆಲ್ಫಾ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಂವಾದದ ಒಂದು ನ್ಯಾಯಸಮ್ಮತ ರೂಪ. ಅದು ವಿಭಜನೆಯನ್ನು ಉಂಟುಮಾಡುವ ಬದಲು ಒಮ್ಮತವನ್ನು ಮೂಡಿಸುವಂತಿರಬೇಕು. ವಿವಿಧ ಕಾರಣಗಳಿಂದಾಗಿ ಸಂವಾದದ ಮೂಲಕ ಆತಂಕಗಳಿಗೆ ಸೂಕ್ತ ಸ್ಪಂದನೆ ಸಿಗದಿದ್ದಾಗ, ಜನರು ಪ್ರತಿಭಟನೆಯ ಹಾದಿ ಹಿಡಿಯಬಹುದು. ಆದರೆ, ಇವೆಲ್ಲದರ ಉದ್ದೇಶ ಒಡಕನ್ನು ಉಂಟುಮಾಡುವುದಲ್ಲ, ಬದಲಾಗಿ ಒಮ್ಮತವನ್ನು ಮೂಡಿಸುವುದೇ ಆಗಿದೆ. ಜೆನ್ ಝೀ ಪೀಳಿಗೆಯವರ ಅಹವಾಲುಗಳು ನ್ಯಾಯಯುತವಾಗಿವೆ. ಅವರ ಪ್ರಾಮಾಣಿಕತೆಯನ್ನು ನಾನು ನಂಬುತ್ತೇನೆ. ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ವ್ಯಕ್ತವಾಗುತ್ತಿರುವ ಕಳವಳಗಳು ಸಮಂಜಸವಾಗಿವೆ’ ಎಂದು ಸ್ಪಷ್ಟಪಡಿಸಿದರು.

ನಿಜವಾದ ನಾಯಕತ್ವ

ಇದೇ ವೇಳೆ ‘ನಿಜವಾದ ನಾಯಕನೆಂದರೆ, ಹಿಂಬದಿಯಿಂದಲೇ ಮುನ್ನಡೆಸುವವನು. ಆತ ವ್ಯವಸ್ಥೆಯ ಒಳಗಿನಿಂದಲೇ ಕಾರ್ಯನಿರ್ವಹಿಸುತ್ತಾನೆ. ನಾಯಕತ್ವವನ್ನು ಕೇವಲ ಜನರ ಮುಂದೆ ನಿಲ್ಲುವುದು, ಭಾಷಣ ಮಾಡುವುದು ಅಥವಾ ಚುನಾವಣೆಗಳಲ್ಲಿ ಗೆಲ್ಲುವುದು ಎಂದು ಪರಿಗಣಿಸಬಾರದು. ನಾನು ನನ್ನನ್ನು ನಾಯಕನಾಗಿ ಭಾವಿಸುವುದಿಲ್ಲ. ಬದಲಿಗೆ ಒಬ್ಬ ಕಾರ್ಯಕರ್ತನೆಂದು ಭಾವಿಸುತ್ತೇನೆ. ನಾಯಕತ್ವದ ಉದ್ದೇಶವು ಜನರನ್ನು ಬೆಳಕಿನೆಡೆಗೆ ಕೊಂಡೊಯ್ಯುವುದು, ನಾಯಕರನ್ನು ಸೃಷ್ಟಿಸುವುದೇ ಹೊರತು, ಕೇವಲ ತಾನೊಬ್ಬನೇ ಮುನ್ನಡೆಯುವುದಲ್ಲ. ನಾಯಕತ್ವವು ನಾಯಕರನ್ನು ಸೃಷ್ಟಿಸುವಂತಿರಬೇಕು’ ಎಂದು ಪ್ರತಿಪಾದಿಸಿದರು.

ಸಲಿಂಗಿಗಳ ಬಾಳ್ವೆಗೆ ಸಮ್ಮತಿ ಅಗತ್ಯ: ‘ಎಲ್‌ಜಿಬಿಟಿಕ್ಯುಐಎ+ ವ್ಯಕ್ತಿಗಳು ನಾವು ಸೇರಿದ ಸಮಾಜದ ಭಾಗವೇ ಆಗಿದ್ದಾರೆ ಎಂದು ಸಂಘವು ಸತತವಾಗಿ ಪ್ರತಿಪಾದಿಸುತ್ತಾ ಬಂದಿದೆ. ಜೊತೆಗೆ, ನಮ್ಮ ಸಮಾಜದಲ್ಲಿ ಅವರನ್ನು ಅಳವಡಿಸಿಕೊಳ್ಳುವ ಸಂಪ್ರದಾಯವಿದೆ. ಸಲಿಂಗ ವಿವಾಹವಲ್ಲ, ಬದಲಿಗೆ ಸಲಿಂಗ ಸಂಗಾತಿಗಳು ಒಟ್ಟಿಗೆ ವಾಸಿಸಲು ಸಾಧ್ಯವಾಗುವಂತಹ ಯಾವುದಾದರೂ ವ್ಯವಸ್ಥೆಯನ್ನು ನಾವು ರೂಪಿಸಬೇಕಿದೆ. ಅದಕ್ಕಾಗಿ ಕಾನೂನನ್ನು ರೂಪಿಸಬಹುದು ಮತ್ತು ಸಮಾಜವು ಅದನ್ನು ಒಪ್ಪಿಕೊಳ್ಳಬಹುದು’ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

National News Live: ಮೀಸಲಾತಿ ಇರುವುದು ದಮನಿತರ ಸಬಲೀಕರಣಕ್ಕೆ, ಅದು ಶಾಶ್ವತವಲ್ಲ - ಮೋಹನ್‌ ಭಾಗ್ವತ್‌
ಪರೀಕ್ಷಾ ಅಕ್ರಮ: ಪ್ರಧಾನ್‌ ರೀತಿಯಲ್ಲೇ ಜಾರ್ಖಂಡ್ ಸಿಎಂ ಸೊರೇನ್‌ ರಿಸೈನ್‌ಗೆ ಪಟ್ಟು!