ಪಾಕಿಸ್ತಾನದ ಟ್ಯೂನ್‌ಗೆ ಕಾಂಗ್ರೆಸ್‌ ಹಾಡು ಹೇಳ್ತಿದೆ, ಅವರ ವಕ್ತಾರರಂತೆ ಮಾತನಾಡುತ್ತಿದೆ: ಪಿಎಂ ಮೋದಿ ವಾಗ್ದಾಳಿ!

Published : Jul 29, 2025, 08:03 PM IST
modi

ಸಾರಾಂಶ

ಪಾಕಿಸ್ತಾನದ ವಿಷಯಗಳನ್ನೇ ಅವಲಂಬಿಸಿರುವ ಕಾಂಗ್ರೆಸ್‌ ಅನ್ನು ಪ್ರಧಾನಿ ಮೋದಿ ಟೀಕಿಸಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಕೋಟ್ ದಾಳಿಯ ಬಗ್ಗೆ ಕಾಂಗ್ರೆಸ್‌ ಪುರಾವೆ ಕೇಳಿತ್ತು ಎಂದು ಮೋದಿ ಆರೋಪಿಸಿದ್ದಾರೆ. 

ನವದೆಹಲಿ (ಜು.29): ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ ಸಂಬಂಧಿತ ವಿಷಯಗಳನ್ನೇ ಅವಲಂಬಿಸಿರುವುದನ್ನು ಕಾಂಗ್ರೆಸ್ ಮುಂದುವರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಟೀಕೆ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಭಾರತ ಮತ್ತು ಅದರ ಸೇನೆಯ ವಿರುದ್ಧ ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನಕ್ಕೆ ಬಲಿಯಾಗಿದ್ದಲ್ಲದೆ, ಅವರ ವಕ್ತಾರರಂತೆ ಈ ಸುದ್ದಿಯನ್ನು ಹಬ್ಬಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

"ಇಂದಿನ ಭಾರತವು ಆತ್ಮವಿಶ್ವಾಸ ಮತ್ತು 'ಆತ್ಮನಿರ್ಭರತ' (ಸ್ವಾವಲಂಬನೆ) ದಿಂದ ತುಂಬಿದೆ ಮತ್ತು ಹೆಚ್ಚಿನ ವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ. ಆದರೆ ದೇಶವು ಒಂದು ವ್ಯತಿರಿಕ್ತತೆಯನ್ನು ಸಹ ನೋಡುತ್ತಿದೆ. ಭಾರತ ಸ್ವಾವಲಂಬನೆಯತ್ತ ವೇಗವಾಗಿ ಚಲಿಸುತ್ತಿರುವಾಗ, ಕಾಂಗ್ರೆಸ್ ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಅವಲಂಬಿತವಾಗಿದೆ. ದುರದೃಷ್ಟವಶಾತ್, ಕಾಂಗ್ರೆಸ್ ಪಾಕಿಸ್ತಾನದಿಂದ ವಿಷಯಗಳನ್ನು ಆಮದು ಮಾಡಿಕೊಳ್ಳುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಸರ್ಜಿಕಲ್ ಸ್ಟ್ರೈಕ್ ನಡೆಸಿದ ತಕ್ಷಣ ಕಾಂಗ್ರೆಸ್ ಪುರಾವೆ ಕೇಳಿತು ಅನ್ನೋದನ್ನು ಮೋದಿ ಮತ್ತೆ ನೆನಪಿಸಿದ್ದಾರೆ. ಸೈನ್ಯವನ್ನು ಅಪಖ್ಯಾತಿಗೊಳಿಸಲು ಸಾಧ್ಯವಾಗದಿದ್ದಾಗ, ಅವರು ತಮ್ಮ ಅಧಿಕಾರಾವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿದ್ದೇವೆ ಎಂದು ಹೇಳಿಕೊಂಡು ತಮ್ಮ ರಾಗ ಬದಲಾಯಿಸಿದರು. "ಒಬ್ಬ ಕಾಂಗ್ರೆಸ್ ನಾಯಕ ಮೂರು ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿದ್ದೇವೆ ಎಂದು ಹೇಳಿದ್ದರು. ಅವರಿಗಿಂತ ಮೇಲಿದ್ದ ನಾಯಕ ಆರು ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದೇವೆ ಎಂದು ಹೇಳಿದ್ದರು. ಅದಕ್ಕೂ ಮೇಲಿದ್ದ ನಾಯಕ 15 ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿದ್ದೇವೆ ಎಂದು ಹೇಳಿದ್ದರು. ಎಷ್ಟು ಮೇಲಿನ ನಾಯಕ ಇರುತ್ತಾರೋ ಸಂಖ್ಯೆಗಳು ಅಷ್ಟು ಏರುತ್ತಿದ್ದವು" ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತ ಬಾಲಕೋಟ್ ವಾಯುದಾಳಿ ನಡೆಸಿದ ನಂತರ, ಪಾಕಿಸ್ತಾನದಂತೆಯೇ ಕಾಂಗ್ರೆಸ್ ಕೂಡ ಛಾಯಾಚಿತ್ರ ಸಾಕ್ಷ್ಯಗಳನ್ನು ಕೇಳಲು ಪ್ರಾರಂಭಿಸಿತು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

"ಪೈಲಟ್ ಅಭಿನಂದನ್ ಸೆರೆಹಿಡಿಯಲ್ಪಟ್ಟಾಗ, ಪಾಕಿಸ್ತಾನ ಸಂತೋಷಪಡುವುದು ಸಹಜ. ಆದರೆ ಇಲ್ಲಿಯೂ ಸಹ, ಕಾಂಗ್ರೆಸ್‌ನೊಳಗಿನ ಕೆಲವರು, 'ಈಗ ಮೋದಿ ಸಿಕ್ಕಿಬಿದ್ದಿದ್ದಾರೆ... ಅವರು ಅಭಿನಂದನ್ ಅವರನ್ನು ಹೇಗೆ ಮರಳಿ ತರುತ್ತಾರೆ ಎಂದು ನೋಡೋಣ' ಎಂದು ಹೇಳುತ್ತಿದ್ದರು. ಆದರೆ, ಅಭಿನಂದನ್ ಅವರನ್ನು ಮರಳಿ ಕರೆತರಲಾಯಿತು," ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಮೋದಿ ಮೋದಿ ಎಂದು ಕರತಾಡನ ಮಾಡಲು ಆರಂಭಿಸಿದರು.

ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತ ತನ್ನ ಕ್ರಮಗಳು "ಉಲ್ಬಣಗೊಳ್ಳದ" ಸ್ವರೂಪದ್ದಾಗಿದ್ದು, ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯವನ್ನು ಮಾತ್ರ ಗುರಿಯಾಗಿರಿಸಿಕೊಂಡಿದ್ದವು ಎಂಬ ತನ್ನ ನಿಲುವನ್ನು ಆರಂಭದಿಂದಲೇ ಸ್ಪಷ್ಟಪಡಿಸಿತ್ತು ಎಂದು ಪ್ರಧಾನಿ ಮೋದಿ ಸಮರ್ಥಿಸಿಕೊಂಡರು. "ಅದಕ್ಕಾಗಿಯೇ ನಾವು ದಾಳಿಯನ್ನು ನಿಲ್ಲಿಸಿದ್ದೇವೆ" ಎಂದು ಅವರು ಹೇಳಿದರು.

ಜೆಡಿ ವ್ಯಾನ್ಸ್‌ಗೆ ಖಡಕ್‌ ಉತ್ತರ ನೀಡಿದ್ದ ಪ್ರಧಾನಿ ಮೋದಿ

ಸದನವು ಹರ್ಷೋದ್ಗಾರಗಳಿಂದ ತುಂಬಿದಾಗ, ಯಾವುದೇ ವಿಶ್ವ ನಾಯಕರು ಭಾರತವನ್ನು ಆಪರೇಷನ್ ಸಿಂಧೂರ್ ನಿಲ್ಲಿಸುವಂತೆ ಕೇಳಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 'ಮೇ 9 ರ ರಾತ್ರಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಗೆ ಕರೆ ಮಾಡಿದ್ದ ವೇಳೆ ಮಿಲಿಟರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೆ. ಸುಮಾರು ನಾಲ್ಕು ಮಿಸ್ಡ್ ಕಾಲ್‌ಗಳನ್ನು ಗಮನಿಸಿದ ನಂತರ, ವ್ಯಾನ್ಸ್‌ಗೆ ಮರಳಿ ಕರೆ ಮಾಡಿದ್ದೆ ಎಂದು ಹೇಳಿದ್ದಾರೆ.

ಈ ವೇಳೆ ಪಾಕಿಸ್ತಾನ, ಭಾರತದ ಮೇಲೆ ದೊಡ್ಡ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ವ್ಯಾನ್ಸ್‌ ಎಚ್ಚರಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಪ್ರಧಾನಿ ಮೋದಿ, ಅವರು ದಾಳಿ ಮಾಡಿದರೆ, ಅದಕ್ಕಿಂತ ಬಲವಾದ ದಾಳಿ ನಮ್ಮದಾಗಿರುತ್ತದೆ ಎಂದು ತಿಳಿಸಿದ್ದರು. ಇದನ್ನು ವ್ಯಾನ್ಸ್‌ ಹೇಳಿದ ಬಳಿಕ ನಾನು ಅವರಿಗೆ, "ಹಮ್ ಗೋಲಿ ಕೆ ಜವಾಬ್ ಗೋಲಾ ಸೆ ದೇಂಗೆ" (ಗುಂಡಿಗೆ ಉತ್ತರ ಗುಂಡಿನಿಂದಲೇ ಇರುತ್ತದೆ) ಎಂದು ಹೇಳಿದೆ.

ಇದರ ನಂತರ ಭಾರತವು ಪಾಕಿಸ್ತಾನದ ಹೆಚ್ಚಿನ ಮಿಲಿಟರಿ ಮೂಲಸೌಕರ್ಯವನ್ನು ನಾಶಪಡಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. "ಈಗ, ಭಾರತದಿಂದ ಬರುವ ಪ್ರತಿಯೊಂದು ಪ್ರತಿಕ್ರಿಯೆಯೂ ಹಿಂದಿನದಕ್ಕಿಂತ ಬಲವಾಗಿದೆ ಎಂದು ಪಾಕಿಸ್ತಾನಕ್ಕೆ ತಿಳಿದಿದೆ" ಎಂದು ಅವರು ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

₹1.1 ಕೋಟಿ ಇನಾಮು ಇದ್ದ ಟಾಪ್ ನಕ್ಸಲ್‌ ಹತ್ಯೆ
ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ