ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಚೆನ್ನೈ (ಮಾ.1):ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡು ರಾಜ್ಯವು ತೆರಿಗೆಯಾಗಿ ಪಾವತಿಸುವ ಪ್ರತಿ ರೂಪಾಯಿಗೆ ಕೇಂದ್ರವು ರಾಜ್ಯಕ್ಕೆ ಕೇವಲ "28 ಪೈಸೆ" ಪಾವತಿಸಿದೆ ಎಂದು ಆರೋಪ ಮಾಡಿದ್ದಾರೆ. ಪ್ರಧಾನಿ ಮತ್ತು ಅವರ ಸರ್ಕಾರವನ್ನು ಗುರಿಯಾಗಿಸಲು '28 ಪೈಸೆ ಮೋದಿ' ಎಂಬ ಪದವನ್ನು ಉದಯನಿಧಿ ಬಳಸಿದ್ದಾರೆ. ಈ ಮಾತಿಗೆ ತಮಿಳುನಾಡು ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ತಮಿಳುನಾಡಿನಲ್ಲಿ ಡಿಎಂಕೆಯನ್ನು ಬಿಜೆಪಿ ಮುಟ್ಟಲು ಸಾಧ್ಯವಿಲ್ಲ ಎಂದು ಸಿಎಂ ಎಂಕೆ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಮುಂದಿನ 40 ದಿನಗಳ ಕಾಲ ತಮಿಳುನಾಡಿನಲ್ಲಿ ವಾಸ್ತವ್ಯ ಮಾಡುವಂತೆ ಪ್ರಧಾನಿ ಮೋದಿಗೆ ಸವಾಲೆಸೆದ ಅವರು, ಅದರ ನಂತರವೂ ರಾಜ್ಯದಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ತಮಿಳುನಾಡಿನ ಸುತ್ತಲೂ ಸುತ್ತಲಿದ್ದಾರೆ. ಅವರು ಬಾಯಿ ತೆಗೆದಾಗಲೆಲ್ಲಾ ಸುಳ್ಳೇ ಹೊರಬರುತ್ತದೆ. ಡಿಎಂಕೆಯನ್ನು ಬಿಜೆಪಿ ನಾಶ ಪಡಿಸುತ್ತದೆ ಎಂದು ಅವರು ಹೇಳುತ್ತಾರೆ. ಕಳೆದ 60-70 ವರ್ಷಗಳಿಂದ ಹೀಗೆ ಹೇಳುತ್ತಿದ್ದ ಎಲ್ಲರೂ ಈಗ ನಾಶವಾಗಿದ್ದಾರೆ. ಹಾಗಾಗಿ ಪ್ರೀತಿಯ ಪ್ರಧಾನಮಂತ್ರಿಗಳೇ, ನೀವು ಮಾತ್ರವಲ್ಲ, ನಿಮ್ಮ ಅಜ್ಜ ಕೂಡ ಡಿಎಂಕೆಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ನೀವು ಡಿಎಂಕೆಯನ್ನು ಮುಟ್ಟಲೂ ಸಾಧ್ಯವಿಲ್ಲ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಪ್ರವಾಹ ಅಥವಾ ಚಂಡಮಾರುತದಿಂದ ತಮಿಳುನಾಡಿಗೆ ಹಾನಿಯಾದಾಗ ಪ್ರಧಾನಿ ಮೋದಿ ತಮಿಳುನಾಡಿಗೆ ಭೇಟಿ ನೀಡುವುದಿಲ್ಲ, ಆದರೆ ಚುನಾವಣಾ ಸಮಯದಲ್ಲಿ ಭೇಟಿ ನೀಡುತ್ತಾರೆ ಎಂದು ಹೇಳಿದ್ದಾರೆ. ಪ್ರಧಾನಿ ವಿರುದ್ಧ ಸ್ಟಾಲಿನ್ ಮಾಡಿದ ಹೇಳಿಕೆಗೆ ಬಿಜೆಪಿಯಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮಾತ್ರವಲ್ಲ, ಉದಯನಿಧಿ ಸ್ಟ್ಯಾಲಿನ್ ಒಬ್ಬ ಫ್ಲಾಪ್ ಹೀರೋ ಎಂದು ಟೀಕೆ ಮಾಡಿದೆ.
ಸನಾತನ ಧರ್ಮವನ್ನು ಡೆಂಗ್ಯು, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ, ಬೆಂಗಳೂರು ಕೋರ್ಟ್‌ನಿಂದ ಸಮನ್ಸ್!
ಪ್ರಧಾನಿ ಮೋದಿ ವಿರುದ್ಧ ಉದಯನಿಧಿ ಸ್ಟ್ಯಾಲಿನ್ ಮಾಡಿದ ಟೀಕೆಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ, 'ಯಾರು ಈ ಉದಯನಿಧಿ ಸ್ಟ್ಯಾಲಿನ್? ಅವರೊಬ್ಬ ಫ್ಲಾಪ್ ಸ್ಟಾರ್. ತನ್ನ ಅಪ್ಪ ಹಾಗೂ ಅಜ್ಜನ ಹೆಸರಿನೊಂದಿಗೆ ರಾಜಕಾರಣದಲ್ಲಿ ನಿಂತಿರುವ ಆತ ಅದರಿಂದಲೇ ಸಚಿವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪಾದದ ಧೂಳಿಗೂ ಆತ ಸಮನಲ್ಲ. ಕುಟುಂಬದ ಹೆಸರಿನೊಂದಿಗೆ ಆತ ರಾಜಕೀಯಕ್ಕೆ ಬಂದಿದ್ದಾನೆ. ಆತ ಏನಾದರೂ ಸಾಮಾಜಿಕ ಕಾರ್ಯ ಮಾಡಿದ್ದಾನೆಯೇ? ಸ್ಟ್ಯಾಲಿನ್ ಹಾಗೂ ಕರುಣಾನಿಧಿ ಎನ್ನುವ ಹೆಸರು ಇಲ್ಲದೇ ಇದ್ದರೆ, ಆತನನ್ನು ಯಾರೂ ಗುರುತಿಸೋದೇ ಇಲ್ಲ' ಎಂದು ಹೇಳಿದ್ದಾರೆ.
ಮಸೀದಿ ಕೆಡವಿ ಮಂದಿರ ಕಟ್ಟಿದ್ದನ್ನ ಒಪ್ಪೋದಿಲ್ಲ: ಉದಯನಿಧಿ ಸ್ಟ್ಯಾಲಿನ್