ಮಾಜಿ ಶಾಸಕರು ತಮ್ಮ ಹಳ್ಳೀಲಿ 50 ಮತನೂ ಪಡೆದಿಲ್ಲ: ಮತ್ತೆ ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸಿದ ಕೈ ನಾಯಕರು!

By BK AshwinFirst Published Dec 5, 2023, 3:12 PM IST
Highlights

ಕೆಲವು ಮಾಜಿ ಶಾಸಕರು ತಮ್ಮ ಗ್ರಾಮದಲ್ಲಿ 50 ಮತಗಳನ್ನು ಸಹ ಪಡೆದಿಲ್ಲ ಎಂದು ದೂರಿದ್ದಾರೆ ಎಂದು ಕಮಲ್ ನಾಥ್‌ ಮಧ್ಯಪ್ರದೇಶ ಫಲಿತಾಂಶದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಾಗೂ, ದಿಗ್ವಿಜಯ ಸಿಂಗ್ ಇವಿಎಂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.

ಭೋಪಾಲ್ (ಡಿಸೆಂಬರ್ 5, 2023): ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಹೀನಾಯ ಸೋಲನುಭವಿಸಿದ್ದು, ಬಿಜೆಪಿ ಪ್ರಚಂಡ ಬಹುಮತ ಪಡೆದು ಮತ್ತೆ ಅಧಿಕಾರ ಪಡೆದುಕೊಂಡಿದೆ. ಅಲ್ಲಿನ ರಾಜ್ಯಾಧ್ಯಕ್ಷ ಕಮಲ್‌ನಾಥ್‌ ಈ ಹುದ್ದೆಯನ್ನು ಕಳೆದುಕೊಳ್ಳುವ ಭೀತಿಯೂ ಎದುರಾಗಿದೆ ಎನ್ನಲಾಗಿದೆ. ಈ ನಡುವೆ ಅಲ್ಲಿನ ಕಾಂಗ್ರೆಸ್ ನಾಯಕರು ಮತ್ತೆ ಚುನಾವಣಾ ಅಕ್ರಮ, ಇವಿಎಂ ವಿಸ್ವಾಸಾರ್ಹತೆ ಬಗ್ಗೆ ಮಾತನಾಡಿದ್ದಾರೆ.

ಕೆಲವು ಮಾಜಿ ಶಾಸಕರು ತಮ್ಮ ಗ್ರಾಮದಲ್ಲಿ 50 ಮತಗಳನ್ನು ಸಹ ಪಡೆದಿಲ್ಲ ಎಂದು ದೂರಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕಮಲ್ ನಾಥ್‌ ಮಧ್ಯಪ್ರದೇಶ ಫಲಿತಾಂಶದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಮಧ್ಯಪ್ರದೇಶದ ಪ್ರಮುಖ ನಾಯಕರೂ ಆಗಿರುವ ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದು, "ಚಿಪ್ ಹೊಂದಿರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದು" ಎಂದು ಹೇಳಿದ್ದಾರೆ.

ಇದನ್ನು ಓದಿ: I.N.D.I.A ಒಕ್ಕೂಟದ ಮೀಟಿಂಗ್‌ಗೆ ಬರಲ್ಲ ಎಂದ ಪ್ರಮುಖ ಪಕ್ಷಗಳ ನಾಯಕರು: ನಾಳೆಯ ಸಭೆ ಮುಂದೂಡಿದ ಕಾಂಗ್ರೆಸ್‌!

ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಎರಡು ದಿನಗಳ ನಂತರ ಈ ಹೇಳಿಕೆಗಳು ಬಂದಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನ ಏಕೈಕ ಗೆಲುವಿಗೆ ಸಮಾಧಾನ ಕಂಡುಕೊಳ್ಳಬೇಕಾಗಿದೆ. ಮಧ್ಯಪ್ರದೇಶದಲ್ಲಿ 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್ 66 ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಫಲಿತಾಂಶವು ನಿಕಟ ಹೋರಾಟವವಾಗಬಹುದೆಂಬ ಎಕ್ಸಿಟ್ ಪೋಲ್ ಭವಿಷ್ಯಗಳು ತಲೆಕೆಳಗಾದವು.

ಇನ್ನು, ಕಾಂಗ್ರೆಸ್‌ನ ಪ್ರಚಾರದ ನೇತೃತ್ವ ವಹಿಸಿರುವ ಕಮಲ್‌ ನಾಥ್‌, ಪಕ್ಷದ ಕಳಪೆ ಪ್ರದರ್ಶನದ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲು ಪಕ್ಷದ ಅಭ್ಯರ್ಥಿಗಳೊಂದಿಗೆ - ವಿಜೇತರು ಮತ್ತು ಸೋತವರು ಇಬ್ಬರ ಜತೆಗೂ ಚರ್ಚೆ ನಡೆಸುವುದಾಗಿ ಹೇಳಿದರು. ಕೆಲವು ಕಾಂಗ್ರೆಸ್ ನಾಯಕರು ಇವಿಎಂ ಹ್ಯಾಕಿಂಗ್ ಆರೋಪ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಲ್‌ನಾಥ್‌, ಚರ್ಚೆ ನಡೆಸದೆ ತೀರ್ಮಾನಕ್ಕೆ ಬರುವುದು ಸರಿಯಲ್ಲ, ನಾನು ಮೊದಲು ಎಲ್ಲರೊಂದಿಗೆ ಮಾತನಾಡುತ್ತೇನೆ ಎಂದೂ ಹೇಳಿದ್ದಾರೆ. 

ಮಧ್ಯಪ್ರದೇಶದಲ್ಲಿ ಬಿಜೆಪಿ ಪಾರುಪತ್ಯ: 'ಶಿವರಾಜ'ನ ಜತೆ 'ಮಹಾರಾಜ'ನ ನೆರವಿಗೆ ಕಾಂಗ್ರೆಸ್‌ ಧೂಳೀಪಟ!

ಆದರೆ, ಸಮೀಕ್ಷೆಯ ಫಲಿತಾಂಶದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಅವರು, ಸಾರ್ವಜನಿಕರ ಚಿತ್ತ ಕಾಂಗ್ರೆಸ್ ಪರವಾಗಿಯೇ ಇದೆ ಎಂದು ಹೇಳಿದರು. ಕೆಲ ಶಾಸಕರು ತಮ್ಮ ಗ್ರಾಮದಲ್ಲಿ 50 ಮತ ಪಡೆದಿಲ್ಲ ಎಂದು ಹೇಳುತ್ತಿದ್ದಾರೆ, ಅದು ಹೇಗೆ ಸಾಧ್ಯ ಎಂದೂ ಹೇಳಿದ್ದಾರೆ. ಈ ಹಿಂದೆ, ಕಮಲ್‌ನಾಥ್‌ ಜನಾದೇಶವನ್ನು ಸ್ವೀಕರಿಸುತ್ತೇನೆ ಮತ್ತು ಕಾಂಗ್ರೆಸ್ ಪ್ರತಿಪಕ್ಷವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತದೆ ಎಂದು ಹೇಳಿದ್ದರು.

ಇದನ್ನು ಓದಿ: ಮಧ್ಯ ಪ್ರದೇಶದಲ್ಲಿ ರಾಮಭಕ್ತನೇ ‘ರಾಜ’; ಕಮಲ ಕಿಲಕಿಲ: ಕಮಲ್‌ನಾಥ್‌ ವಿಲವಿಲ; ಲಡ್ಡು ಹಂಚಿದ ಕೈಗೆ ಮತ್ತೆ ಹಿನ್ನೆಡೆ!

click me!