ಆಸ್ಪತ್ರೆಯಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ಮನೆಯವರು ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋದ ನಂತರ ಬಿಜೆಪಿ ನಾಯಕರೊಬ್ಬರು ಎದ್ದು ಕುಳಿತ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಲಕ್ನೋ: ಆಸ್ಪತ್ರೆಯಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ಮನೆಯವರು ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋದ ನಂತರ ಬಿಜೆಪಿ ನಾಯಕರೊಬ್ಬರು ಎದ್ದು ಕುಳಿತ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಆಗ್ರಾದ ಆಸ್ಪತ್ರೆಯಲ್ಲಿ ಬಿಜೆಪಿ ನಾಯಕ ಮಹೇಶ್ ಬಘೇಲ್ (mahesh baghel) ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದರು. ಹೀಗಾಗಿ ಅವರ ಮನೆಯವರು ಅಂತಿಮ ಸಂಸ್ಕಾರಕ್ಕಾಗಿ ಅವರ ದೇಹವನ್ನು ಮನೆ ಬಳಿ ತಂದಿದ್ದರು. ಆದರೆ ಅಲ್ಲಿ ಅವರ ದೇಹದಲ್ಲಿ ಚಟುವಟಿಕೆಯನ್ನು ಗಮನಿಸಿದ ಮನೆಯವರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಿನ್ನೆ ಮನೆಯಲ್ಲೇ ಇದ್ದಾಗ ಮಹೇಶ್ ಬಘೇಲ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಮನೆಯವರು ಅವರನ್ನು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದರು. ಹೀಗಾಗಿ ಮನೆಯವರು ಅವರನ್ನು ಮನೆಗೆ ಕರೆತಂದಿದ್ದರು. ಆದರೆ ಮನೆ ತಲುಪುತ್ತಿದ್ದಂತೆ ಅವರ ಕೈಕಾಲುಗಳು ಮಸುಕಾಡಲು ಶುರುವಾಗಿವೆ. ಹೀಗಾಗಿ ದೇಹದಲ್ಲಿ ಚಟುವಟಿಕೆಯನ್ನು ಗಮನಿಸಿದ ಅವರ ಕುಟುಂಬದವರು ಕೂಡಲೇ ಅವರನ್ನು ಮತ್ತೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ಅವರು ಜೀವಂತವಿರುವುದಾಗಿ ಅವರನ್ನು ತಪಾಸಣೆ ಮಾಡಿದ ವೈದ್ಯರು ಹೇಳಿದ್ದಾರೆ. ಇದರಿಂದ ಅವರ ಮನೆಯವರು ಫುಲ್ ಖುಷಿಪಟ್ಟಿದ್ದಾರೆ.
ಶವ ಪರೀಕ್ಷೆಗೆ ಸಿದ್ಧತೆ ವೇಳೆ ಎದ್ದು ಕುಳಿತ ಹುಡುಗಿ: ವೈದ್ಯರಿಗೆ ಶಾಕ್
ಮಹೇಶ್ ಅವರ ಕುಟುಂಬದವರ ಪ್ರಕಾರ, ಆಗ್ರಾದ ಪುಷ್ಪಾಂಜಲಿ ಆಸ್ಪತ್ರೆಯ (Pushpanjali hospital) ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ ಬಳಿಕ ಮಹೇಶ್ ಅವರನ್ನು ಸರಾಯ್ ಖ್ವಾಜಾದ ಬಳಿ ಇರುವ ಅವರ ಮನೆಗೆ ಕರೆದುಕೊಂಡು ಬಂದಿದ್ದೆವು, ಸಂಬಂಧಿಗಳೆಲ್ಲರಿಗೂ ವಿಚಾರ ತಿಳಿಸಿ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು, ಅವರನ್ನು ಮಲಗಿಸಿದ್ದಲ್ಲಿಯೇ ಕುಟುಂಬದವರೆಲ್ಲರೂ ಕುಳಿತು ಅಳುತ್ತಿದ್ದರು. ಈ ವೇಳೆ ಅವರ ಕೈಕಾಲುಗಳು ಅಲುಗುವುದನ್ನು ಅಲ್ಲಿದ್ದವರು ಗಮನಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಈಗ ಅವರು ಆಗ್ರಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಆಗ್ರಾದ ಪುಷ್ಪಾಂಜಲಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಪ್ರಸ್ತುತ ಅವರ ಆರೋಗ್ಯ ಸುಧಾರಿಸಿದ್ದು, ಅವರು ಹುಷಾರಾಗುತ್ತಿದ್ದಾರೆ ಎಂದು ಮಹೇಶ್ ಅವರ ಸೋದರ ಲಖನ್ ಸಿಂಗ್ ಬಘೇಲ್ ತಿಳಿಸಿದ್ದಾರೆ. ಈ ನಡುವೆ ಅವರ ಸಾವಿನ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ (Social Media) ಕಾಡ್ಗಿಚ್ಚಿನಂತೆ ಹಬ್ಬಿದ್ದು, ಸಂತಾಪ ಶ್ರದ್ಧಾಂಜಲಿ ಮಹಾಪೂರವೇ ಹರಿದು ಬಂದಿದೆ. ಆದರೆ ಅವರು ಬದುಕಿರುವ ವಿಚಾರ ತಿಳಿಯುತ್ತಿದ್ದಂತೆ ಅವರ ಚೇತರಿಕೆಗೆ ಅನೇಕರು ಶುಭ ಹಾರೈಸಿದ್ದಾರೆ.
ಶವಪೆಟ್ಟಿಗೆಯಿಂದ ಎದ್ದು ಕುಳಿತ ಮೃತ ಮಹಿಳೆ : ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸ್ತಿದ್ದವರು ಶಾಕ್
ಆದರೆ ಈ ರೀತಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ರೋಗಿ ಉಸಿರಾಡಲು ಶುರು ಮಾಡಿದ ಪ್ರಕರಣ ಇದೇ ಮೊದಲೇನಲ್ಲ, ಈ ಹಿಂದೆಯೂ ಇಂತಹ ಹಲವು ಘಟನೆಗಳು ವರದಿಯಾಗಿವೆ.