NewsClick Row: ಭಾರತದ ವೆಬ್‌ಸೈಟ್‌ಗೆ ಚೀನಾ ಲಿಂಕ್‌, ದೇಶದ್ರೋಹಿಗಳ ಜತೆ ಕೈ ನಂಟು: ಸಂಸತ್ತಲ್ಲಿ ಬಿಜೆಪಿ ಆರೋಪ

By Kannadaprabha News  |  First Published Aug 8, 2023, 9:24 AM IST

ಭಾರತದ ‘ನ್ಯೂಸ್‌ಕ್ಲಿಕ್‌’ ವೆಬ್‌ಸೈಟ್‌ಗೆ ಚೀನಾ ಲಿಂಕ್‌- ವೆಬ್‌ಸೈಟ್‌ನಲ್ಲಿ ಹಣ ಹೂಡಿದ ಅಮೆರಿಕ ವ್ಯಕ್ತಿ ಸಿಂಘಂಗೆ ಚೀನಾ ಜತೆ ನಿಕಟ ಸಂಪರ್ಕ. ಅಮೆರಿಕ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್‌ ವರದಿ . ದೇಶದ್ರೋಹಿಗಳ ಜತೆ ಕಾಂಗ್ರೆಸ್‌ ನಂಟು ಬಿಜೆಪಿ ಕಿಡಿ.


ನವದೆಹಲಿ (ಆ.8): ಭಾರತದಲ್ಲಿ ಕಾರ್ಯಾಚರಿಸುತ್ತಿರುವ ‘ನ್ಯೂಸ್‌ಕ್ಲಿಕ್‌’ ವೆಬ್‌ಸೈಟ್‌ಗೆ ಚೀನಾದ ನಂಟು ಇದೆ ಎಂದು ಅಮೆರಿಕದ ಪ್ರಭಾವಿ ಪತ್ರಿಕೆ ‘ನ್ಯೂಯಾರ್ಕ್ ಟೈಮ್ಸ್‌’ ವರದಿ ಮಾಡಿದೆ. ಗಮನಾರ್ಹ ಎಂದರೆ, 2021ರಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇದೇ ನ್ಯೂಸ್‌ ಲಿಂಕ್‌ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ಮಾಡಿತ್ತು. ‘ಆಗ ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಇದನ್ನು ವಿರೋಧಿಸಿದ್ದವು’ ಎಂದು ಬಿಜೆಪಿ ಹರಿಹಾಯ್ದಿದೆ.

ಮತ್ತೊಂದೆಡೆ, ನ್ಯೂಯಾರ್ಕ್ ಟೈಮ್ಸ್‌ ವರದಿಯನ್ನು ಪ್ರಸ್ತಾಪಿಸಿ ಲೋಕಸಭೆಯಲ್ಲಿ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರು, ‘ಕಾಂಗ್ರೆಸ್‌ ಪಕ್ಷಕ್ಕೆ ದೇಶದ್ರೋಹಿಗಳು ಹಾಗೂ ಚೀನಾದ ಸಂಪರ್ಕ ಇದೆ’ ಎಂದು ಆಪಾದಿಸಿದ್ದಾರೆ. ಇದು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಈ ಮಧ್ಯೆ, ‘ಚೀನಾ ಪರ ಪ್ರಚಾರದಲ್ಲಿ ನ್ಯೂಸ್‌ಕ್ಲಿಕ್‌ ತೊಡಗಿದೆ ಎಂದು ಮೊದಲೇ ಹೇಳಿದ್ದು ಭಾರತ’ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

Tap to resize

Latest Videos

ದೇಶದ ವ್ಯಕ್ತಿಗಳಿಂದಲೇ ದೇಶದ ವಿರುದ್ಧ ಪಿತೂರಿ: ರಾಜೀವ್‌ ಚಂದ್ರಶೇಖರ್‌

ವರದಿಯಲ್ಲಿ ಏನಿದೆ?: ತನ್ನ ಉದ್ದೇಶಗಳನ್ನು ಪ್ರಸಾರ ಮಾಡಲು ಪ್ರಭಾವ ಬೀರುವ ಅಭಿಯಾನಕ್ಕೆ, ಮಾಧ್ಯಮ ಸಂಸ್ಥೆಗಳು ಹಾಗೂ ಅಸ್ತಿತ್ವದಲ್ಲಿಲ್ಲದ ಕಂಪನಿಗಳಿಗೆ ಚೀನಾ ಸಾಕಷ್ಟುಹಣ ನೀಡುತ್ತಿದೆ. ಅಮೆರಿಕದ ಶ್ರೀಮಂತ ಉದ್ಯಮಿಯಾಗಿರುವ ನೆವಿಲ್‌ ರಾಯ್‌ ಸಿಂಘಮ್‌ ಅವರು ಭಾರತದ ನ್ಯೂಸ್‌ಕ್ಲಿಕ್‌ ವೆಬ್‌ಸೈಟ್‌ ಜತೆ ನಂಟು ಹೊಂದಿದ್ದು, ಅವರು ಚೀನಾ ಸರ್ಕಾರದ ಮಾಧ್ಯಮ ಯಂತ್ರದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ವಿಶ್ವಾದ್ಯಂತ ಚೀನಾ ಚಿಂತನೆ ಪಸರಿಸುವ ಭಾಗವಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

ನ್ಯೂಸ್‌ಕ್ಲಿಕ್‌ ಸಲ್ಲಿಕೆ ಮಾಡಿರುವ ಕಾರ್ಪೋರೆಟ್‌ ವರದಿಗಳ ಪ್ರಕಾರ, ಸಿಂಘಮ್‌ ಅವರ ಹಣಕಾಸು ಜಾಲವು ವೆಬ್‌ಸೈಟ್‌ಗೆ ಹಣ ನೀಡಿದೆ. ಚೀನಾ ಸರ್ಕಾರದ ವಿಷಯಗಳನ್ನು ಆ ವೆಬ್‌ಸೈಟ್‌ ಪ್ರಸಾರ ಮಾಡಿದೆ. ಅದನ್ನು ಇತರೆ ವೆಬ್‌ಸೈಟ್‌ಗಳು ಹಂಚಿಕೊಂಡಿವೆ ಎಂದು ಹೇಳಿದೆ.

ಭಾರತದಲ್ಲಿ ಚೀನಾ ಕುರಿತಾಗಿ ಪ್ರಚಾರ, ಅಮೆರಿಕದ ಕೋಟ್ಯಧಿಪತಿಯ ಮಹಾಸಂಚು

ಕಾಂಗ್ರೆಸ್ಸಿಗೂ ಹಣ ಬಂದಿದೆ: ನ್ಯೂಸ್‌ಕ್ಲಿಕ್‌ಗೆ ಚೀನಾ ನಂಟು ಇದೆ ಎಂಬ ವರದಿಯನ್ನೇ ಇಟ್ಟುಕೊಂಡು ಕಾಂಗ್ರೆಸ್‌ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ‘2021ರಲ್ಲಿ ನ್ಯೂಸ್‌ಕ್ಲಿಕ್‌ ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸಿದಾಗ ಕಾಂಗ್ರೆಸ್‌ ಹಾಗೂ ಎಡಪಂಥೀಯರು ನ್ಯೂಸ್‌ಕ್ಲಿಕ್‌ ಪರ ನಿಂತಿದ್ದರು. ಕಾಂಗ್ರೆಸ್‌ ಪಕ್ಷ ಉದ್ಯಮಿ ನೆವಿಲ್‌ ಹಾಗೂ ನ್ಯೂಸ್‌ಕ್ಲಿಕ್‌ ಪರ ನಿಲ್ಲುವುದು ಸ್ವಾಭಾವಿಕವೇ? ಏಕೆಂದರೆ, ಚೀನಾ ಹಿತಾಸಕ್ತಿಗಳನ್ನು ಭಾರತದಲ್ಲಿ ಪ್ರಚುರಪಡಿಸಲು 2008ರಲ್ಲಿ ಒಪ್ಪಂದ ಮಾಡಿಕೊಂಡಿದ್ದು ಇದೇ ಕಾಂಗ್ರೆಸ್‌ ಪಕ್ಷವಲ್ಲವೇ? ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ರಾಯಭಾರ ಕಚೇರಿಯಿಂದ ದೇಣಿಗೆ ಪಡೆದಿದ್ದು ಇದೇ ಕಾಂಗ್ರೆಸ್‌ ಅಲ್ಲವೇ?’ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಟೀಕಿಸಿದ್ದಾರೆ.

ಲೋಕಸಭೆಯಲ್ಲಿ ಗದ್ದಲ: ನ್ಯೂಯಾರ್ಕ್ ಟೈಮ್ಸ್‌ ವರದಿಯನ್ನು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಸೋಮವಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ‘ಅನರ್ಹತೆ ರದ್ದಾದ ಬಳಿಕ ಮೊದಲ ಬಾರಿಗೆ ರಾಹುಲ್‌ ಗಾಂಧಿ ಕಲಾಪಕ್ಕೆ ಹಾಜರಾದ ಸಂದರ್ಭದಲ್ಲಿಯೇ ಈ ವಿಷಯ ಪ್ರಸ್ತಾಪಿಸಿದ ದುಬೆ, ಕೇಂದ್ರ ಸರ್ಕಾರವನ್ನು ವಿರೋಧಿಸಲು ಕಾಂಗ್ರೆಸ್ಸಿಗೆ ಚೀನಾ ಹಣ ನೀಡುತ್ತಿದೆ. 2016ರಲ್ಲಿ ಕಾಂಗ್ರೆಸ್ಸಿಗರು ಚೀನಿಯರನ್ನು ಭೇಟಿ ಮಾಡಿದ್ದಾರೆ. 2005ರಿಂದ 2014ರವರೆಗೆ ಕಾಂಗ್ರೆಸ್ಸಿಗೆ ಬಿಕ್ಕಟ್ಟು ಎದುರಾದಾಗಲೆಲ್ಲಾ ಚೀನಾದಿಂದ ಹಣ ಬಂದಿದೆ. 2008ರಲ್ಲಿ ಚೀನಿಯರು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಗೆ ಆಹ್ವಾನ ನೀಡಿದ್ದರು. 2016ರಲ್ಲಿ ಡೋಕ್ಲಾಂ ಬಿಕ್ಕಟ್ಟು ಸೃಷ್ಟಿಯಾದಾಗಲೂ ಕಾಂಗ್ರೆಸ್ಸಿಗರು ಚೀನಾ ಜತೆ ಮಾತನಾಡುತ್ತಿದ್ದರು’ ಎಂದು ಹೇಳಿದರು.

ಇದು ಕಾಂಗ್ರೆಸ್ಸಿನ ಆಕ್ರೋಶಕ್ಕೆ ಕಾರಣವಾಯಿತು. ನಿಶಿಕಾಂತ್‌ ದುಬೆ ಆರೋಪವನ್ನು ಕಡತದಿಂದ ತೆಗೆಸಬೇಕು ಎಂದು ಕಾಂಗ್ರೆಸ್ಸಿಗರು ಆಗ್ರಹಿಸಿದರು. ಆರೋಪ- ಪ್ರತ್ಯಾರೋಪ ಮುಂದುವರಿದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಯಿತು.

ಯಾರು ಈ ಸಿಂಘಮ್‌?: ಅಮೆರಿಕದ ಶ್ರೀಮಂತ ಟೆಕ್‌ ಉದ್ಯಮಿ. ಅಮೆರಿಕ ಹಾಗೂ ಬ್ರಿಟನ್‌ನಲ್ಲಿ ಎಡಪಂಥೀಯರ ಪ್ರಮುಖ ಬೆಂಬಲಿಗ. ಥಾಟ್‌ಫಾರ್‌ವರ್ಕ್ಸ್ ಎಂಬ ಐಟಿ ಸಲಹಾ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾನೆ. ಈತನ ನಂಟಿನ ಕಂಪನಿಗಳು ಚೀನಾ ಪರ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತವೆ. ಶಾಂಘೈನಲ್ಲೂ ಸಿಂಘಮ್‌ ಕಚೇರಿ ಹೊಂದಿದ್ದು, ಚೀನಾದ ಸಿದ್ಧಾಂತ ಪಸರಕ ಸಂಸ್ಥೆ ಮಾಕು ಗ್ರೂಪ್‌ ಜತೆ ನಂಟು ಹೊಂದಿದ್ದಾನೆ. ಎರಡೂ ಕಂಪನಿಗಳು ಉದ್ಯೋಗಿಗಳ ವಿನಿಮಯ ಮಾಡಿಕೊಳ್ಳುತ್ತವೆ.

ಯಾವುದಿದು ‘ನ್ಯೂಸ್‌ಕ್ಲಿಕ್‌’?: ಪ್ರಭೀರ್‌ ಪುರಕಾಯಸ್ಥ ಎಂಬುವರು 2009ರಲ್ಲಿ ನ್ಯೂಸ್‌ಕ್ಲಿಕ್‌ ಎಂಬ ಆನ್‌ಲೈನ್‌ ಸುದ್ದಿ ತಾಣವನ್ನು ಸ್ಥಾಪಿಸಿದರು. ಭಾರತ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳನ್ನು ಪ್ರಸಾರ ಮಾಡುವ ಈ ಸಂಸ್ಥೆಯ ಒಡೆತನದ ಕಂಪನಿ ಹೆಸರು ಪಿಪಿಕೆ ನ್ಯೂಸ್‌ಕ್ಲಿಕ್‌ ಸ್ಟುಡಿಯೋ ಪ್ರೈವೇಟ್‌ ಲಿಮಿಟೆಡ್‌. 2021ರ ಫೆ.9ರಂದು ಅಕ್ರಮ ಹಣ ವರ್ಗಾವಣೆ ಆರೋಪದಡಿ ಈ ಸಂಸ್ಥೆ ಮೇಲೆ ಇ.ಡಿ. ದಾಳಿ ನಡೆಸಿತ್ತು. 38 ಕೋಟಿ ರು. ವಿದೇಶಿ ಹಣ ಬಂದಿರುವುದನ್ನು ಪತ್ತೆ ಹಚ್ಚಿತ್ತು. ಆ ಹಣ ಕೊಟ್ಟವರಲ್ಲಿ ನೆವಿಲ್‌ ಸಿಂಘಮ್‌ ಕೂಡ ಒಬ್ಬರು. ಹೀಗೆ ಸಂದಾಯವಾದ ಹಣವನ್ನು ಪತ್ರಕರ್ತ ಗೌತಮ್‌ ನವಲಖ ಮತ್ತು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಸೇರಿ ಹಲವಾರು ಪತ್ರಕರ್ತರಿಗೆ ಹಂಚಲಾಗಿರುವುದು ಪತ್ತೆಯಾಗಿತ್ತು.

click me!