
ತಿರುವನಂತಪುರ (ಜೂ.17): ಕರ್ನಾಟಕ ಹಾಗೂ ಕೇರಳ ರಾಜ್ಯಗಳ ನಡುವೆ ವೈಮನಸ್ಯಕ್ಕೆ ಕಾರಣವಾಗಿರುವ ನಂದಿನಿ ಹಾಗೂ ಮಿಲ್ಮಾ ಹಾಲು ಒಕ್ಕೂಟಗಳ ನಡುವಿನ ವಿವಾದಕ್ಕೆ ಮಧ್ಯಪ್ರವೇಶಿಸಲು ಕೇರಳ ಸರ್ಕಾರ ಮುಂದಾಗಿದೆ. ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯಲಿದ್ದು, ಕೇರಳದಲ್ಲಿ ಕೆಎಂಎಫ್ ಸೂಕ್ತ ಅನುಮತಿಯಿಲ್ಲದೆ ಹಲವು ಮಳಿಗೆಗಳನ್ನು ತೆರೆದಿದೆ ಎನ್ನುವ ವಿಚಾರಗಳನ್ನು ತಿಳಿಸಲಿದೆ. ಅದರೊಂದಿಗೆ ಆದಷ್ಟು ಶೀಘ್ರವಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಕೇಳಿಕೊಳ್ಳಲಿದೆ. ಅದರೊಂದಿಗೆ ಕೇರಳ ಸರ್ಕಾರವೇ, ಈ ವಿಚಾರದಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯಲ್ಲಿ ದೂರು ದಾಖಲಿಸಲಿದೆ. ಮೊದಲಿಗೆ ಕೇರಳದ ಹಾಲು ಒಕ್ಕೂಟವಾಗಲಿರುವ ಮಿಲ್ಮಾ ದೂರು ದಾಖಲಿಸಲಿದೆ ಎನ್ನಲಾಗಿತ್ತಾದರೂ, ಈಗ ರಾಜ್ಯ ಸರ್ಕಾರದಿಂದಲೇ ಎನ್‌ಡಿಡಿಬಿಗೆ ದೂರು ದಾಖಲಾಗಲಿದೆ. ಹಾಗೇನಾದರೂ ಎನ್‌ಡಿಡಿಬಿಯಿಂದಲೂ ಸೂಕ್ತ ಪರಿಹಾರ ಅಥವಾ ಪ್ರತಿಕ್ರಿಯೆ ಬರದೇ ಇದ್ದಲ್ಲಿ ನಂದಿನಿ ಮಳಿಗೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೂಡ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕೇರಳ ಪತ್ರಿಕೆಗಳು ವರದಿ ಮಾಡಿವೆ.
ಅದರೊಂದಿಗೆ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾಗಲಿದ್ದು, ನಂದಿನಿ ಮಳಿಗೆಗಳಿಗೆ ನೋಟಿಸ್ ನೀಡುವ ಕುರಿತಂತೆ ತೀರ್ಮಾನವಾಗುವ ಸಾಧ್ಯತೆ ಇದೆ. ಕರ್ನಾಟಕ ಹಾಲು ಮಹಾಮಂಡಳ ಕೇರಳದಲ್ಲಿ ಮಿಲ್ಮಾದ ಅನುಮತಿಯಿಲ್ಲದೆ ಮೂರು ಹೊಸ ಮಳಿಗೆಗಳನ್ನು ಸ್ಥಾಪನೆ ಮಾಡಿರುವುದು ವಿವಾದದ ಮೂಲವಾಗಿದೆ. ಮೂರು ಮಳಿಗೆಗಳು ಆರಂಭವಾದ ಬೆನ್ನಲ್ಲಿಯೇ ಕೇರಳದ ವಿವಿಧ ಭಾಗಗಳಲ್ಲಿ ಮಳಿಗೆಗಳನ್ನು ನಂದಿನಿ ತೆರೆದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಿಲ್ಮಾ, ನಂದಿನಿಯ ಈ ನಿರ್ಧಾರದಿಂದಾಗಿ ನಮ್ಮ ಹಾಲು ಒಕ್ಕೂಟಕ್ಕೆ ಭಾರೀ ನಷ್ಟವಾಗಲಿದೆ. ನಮ್ಮ ಮಾರುಕಟ್ಟೆ ಶೇರ್ ಕೂಡ ಇಳಿದುಹೋಗಲಿದೆ. ಅದರೊಂದಿಗೆ ರಾಜ್ಯದಲ್ಲಿ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಸಾಕಷ್ಟು ರೈತರ ಜನಜೀವನದ ಮೇಲೆ ಪರಿಣಾಮ ಬೀರಲಿದೆ. ಅದರೊಂದಿಗೆ ಎರಡು ರಾಜ್ಯಗಳ ನಡುವಿನ ಅನಾರೋಗ್ಯಕರ ಸ್ಪರ್ಧೆ ಒಳ್ಳೆಯದಲ್ಲ. ಸರ್ಕಾರಗಳು ಮಧ್ಯಪ್ರವೇಶಿಸಿ ಇದನ್ನು ತಪ್ಪಿಸಬೇಕು ಎಂದು ಹೇಳಿದೆ.
ಕೇರಳದಲ್ಲಿ ಅಂದಾಜು 85 ಲಕ್ಷ ಮನೆಗಳಿದ್ದರೂ, ಮಿಲ್ಮಾ ಹಾಲುಗಳ ಮಾರಾಟ 16 ಲಕ್ಷ ಲೀಟರ್‌ಗಳು ಮಾತ್ರ. ಕೇರಳದಲ್ಲಿ ಈಗಾಗಲೇ ಮಿಲ್ಮಾ ಇತರ ಖಾಸಗಿ ಹಾಲು ಒಕ್ಕೂಟದ ಸಂಸ್ಥೆಗಳೊಂದಿಗೆ ಹೋರಾಟ ನಡೆಸುತ್ತಿದೆ. ಇದರ ನಡುವೆ ಮಿಲ್ಮಾಗಿಂತ ಅಪಾರ ಪಟ್ಟುದೊಡ್ಡದಾದ ಕೆಎಂಎಫ್ ರಾಜ್ಯಕ್ಕೆ ಬಂದಲ್ಲಿ ಆದಾಯ ನಷ್ಟವಾಗಲಿದೆ ಎಂದು ಕೇರಳದ ಹಾಲು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ಅಮೂಲ್ vs ನಂದಿನಿ ಬಳಿಕ, ಕೇರಳದಲ್ಲಿ ನಂದಿನಿ ಹಾಲು ಮಾರಾಟಕ್ಕೆ ಮಿಲ್ಮಾ ವಿರೋಧ!
ಈ ನಡುವೆ ಕೇರಳದ ಪಶುಸಂಗೋಪನೆ ಸಚಿವೆ ಜೆ.ಚಿಂಚುರಾಣಿ ಆಡಿರುವ ಮಾತುಗಳು ಕರ್ನಾಟಕದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಂದಿನಿ ಹಾಲಿನ ಗುಣಮಟ್ಟ ಕಳಪೆ, ಮಲಯಾಳಿಗಳು ಯಾರೂ ಕೂಡ ಅದನ್ನು ಖರೀದಿಸಬಾರದು ಎಂದು ಹೇಳಿದ್ದರು.
Milma VS Nandini: 'ನಂದಿನಿ ಗುಣಮಟ್ಟ ಕಳಪೆ, ಮಲಯಾಳಿಗಳು ಖರೀದಿಸ್ಬೇಡಿ..' ಕೇರಳ ಸಚಿವೆಯ ದ್ವೇಷದ ಹೇಳಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ