
ನವದೆಹಲಿ/ಬೆಂಗಳೂರು (ಜು.20): ಮೈಕ್ರೋಸಾಫ್ಟ್‌ನ ಕ್ಲೌಡ್ ಸೇವೆಗಳಲ್ಲಿ ಸಮಸ್ಯೆ ಎದುರಾದ ಕಾರಣ ಬೆಂಗಳೂರು, ನವದೆಹಲಿ ಸೇರಿದಂತೆ ಭಾರತದ ಹಲವು ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಸಮಸ್ಯೆ ಎದುರಾಯಿತು. ಸಾಮಾನ್ಯವಾಗಿ ಬೋರ್ಡಿಂಗ್ ಪಾಸ್ ವಿತರಣೆ ಅತ್ಯಂತ ತ್ವರಿತವಾಗಿ ಆಗುವ ಪ್ರಕ್ರಿಯೆ. ಆದರೆ ಕಂಪ್ಯೂಟರ್‌ಗಳಲ್ಲಿ ಸಮಸ್ಯೆ ಆದ ಕಾರಣ, ಪ್ರಯಾಣಿಕರಿಗೆ ಇಂಡಿಗೋ, ವಿಸ್ತಾರ, ಸ್ಪೈಸ್‌ಜೆಟ್, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಅಕಾಸಾ ಏರ್‌ಲೈನ್ಸ್ ಸಿಬ್ಬಂದಿ ಕೈಯಲ್ಲೇ ಬರೆದುಕೊಟ್ಟ ಬೋರ್ಡಿಂಗ್ ಪಾಸ್ ವಿತರಣೆ ಮಾಡಿದರು.
ಇಂಥ ಬೆಳವಣಿಗೆ ಭಾರತದಲ್ಲಿ ಇದೇ ಮೊದಲು ಎನ್ನಲಾಗಿದೆ. ಹೀಗಾಗಿ ಶುಕ್ರವಾರ ಬಹುತೇಕ ವಿಮಾನ ನಿಲ್ದಾಣಗಳ ಟಿಕೆಟ್ ಕೌಂಟರ್ ಮತ್ತು ಬೋರ್ಡಿಂಗ್ ಪಾಸ್ ವಿತರಣೆ ಕೌಂಟರ್‌ಗಳಲ್ಲಿ ಪ್ರಯಾಣಿಕರ ಉದ್ದನೆಯ ಸಾಲು ಕಂಡುಬಂದಿತು. ಇದರ ಹೊರತಾಗಿ ಚೆಕ್ ಇನ್, ಟಿಕೆಟ್ ಬುಕಿಂಗ್ ಸೇವೆಗಳಲ್ಲೂ ಸಮಸ್ಯೆ ಕಾಣಿಸಿಕೊಂಡಿತು.
ಷೇರುಪೇಟೆ ಹಾಗೂ ನಿಫ್ಟಿಯಲ್ಲಿ ಸಮಸ್ಯೆ ಇಲ್ಲ
ಪ್ರಪಂಚದಾದ್ಯಂತ ಹಲವಾರು ಏರ್‌ಲೈನ್‌ಗಳು, ಬ್ಯಾಂಕ್‌ಗಳು, ಮೀಡಿಯಾ ಓಟ್‌ಲೇಟ್‌ಗಳ ಕಾರ್ಯನಿರ್ವಹಣೆಯ ಮೈಕ್ರೋಸಾಫ್ಟ್ ಸಿಸ್ಟಮ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ಎಸ್‌ಬಿಐ, ಎಚ್‌ಡಿಎಫ್‌ಸಿ, ಯುಪಿಐ ಸೇವೆ ಒದಗಿಸುವ ಎನ್‌ಪಿಸಿಐ, ಬಾಂಬೆ ಷೇರುಪೇಟೆ ಹಾಗೂ ನಿಫ್ಟಿಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಈ ಬಗ್ಗೆ ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರ ಮಾತನಾಡಿ, ನಮ್ಮಲ್ಲಿ ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಎಚ್‌ಡಿಎಫ್‌ಸಿ ಹಾಗೂ ಎನ್‌ಪಿಸಿಐ ಅಧಿಕಾರಿಗಳೂ ಇದೇ ಹೇಳಿಕೆ ನೀಡಿದ್ದಾರೆ.
ಜಗತ್ತಿನೆಲ್ಲೆಡೆ ಹಠಾತ್ ಆಫ್ ಆದ ಮೈಕ್ರೋಸಾಫ್ಟ್ ವಿಂಡೋ ಸಿಸ್ಟಂ: ವಿಮಾನಯಾನ, ಬ್ಯಾಂಕ್ ಸೇವೆಗಳಿಗೆ ತೀವ್ರ ಅಡ್ಡಿ
ಅದೇ ರೀತಿ ನಿಫ್ಟಿ ಹಾಗೂ ಷೇರುಪೇಟೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಎಲ್ಲವೂ ಎಂದಿನಂತೆ ಕಾರ್ಯ ನಿರ್ವಹಿಸಿದವು ಎಂದು ಷೇರುಪೇಟೆ ವಕ್ತಾರರು ತಿಳಿಸಿದ್ದಾರೆ.
ಇದು ಸೈಬರ್ ದಾಳಿ ಅಲ್ಲ
ಕಂಪನಿಯ ಸಾಫ್ಟ್‌ವೇರ್‌ನಲ್ಲಿನ ಭದ್ರತಾ ಲೋಪ ಅಲ್ಲ ಎಂದು ಸೈಬರ್ ಸೆಕ್ಯುರಿಟಿ ಕಂಪನಿಯಾದ ಕ್ರೌಡ್‌ಸ್ಟ್ರೈಕ್ ಸ್ಪಷ್ಟನೆ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಸಿಇಒ ಜಾರ್ಜ್ ಕರ್ಟ್ಜ್, ‘ಇದು ಭದ್ರತಾ ವಿಷಯ ಅಥವಾ ಸೈಬರ್ ದಾಳಿಯಾಗಲೀ ಅಲ್ಲ. ಸಮಸ್ಯೆ ಏನೆಂದು ಪತ್ತೆಹಚ್ಚಿ ಅದರ ಇತ್ಯರ್ಥಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.
ಕ್ರೌಡ್‌ಸ್ಟ್ರೈಕ್, ಮೈಕ್ರೋಸಾಫ್ಟ್‌ಗೆ ಸೈಬರ್ ಭದ್ರತೆ ನೀಡುವ ಸಂಸ್ಥೆಯಾಗಿದೆ. ಬಗ್ ಒಂದರ ಅಪ್ಡೇಟ್ ಬಿಡುಗಡೆ ಮಾಡಿದ ವೇಳೆ ಶುಕ್ರವಾರ ಸಮಸ್ಯೆ ಕಾಣಿಸಿಕೊಂಡು ವಿಶ್ವಾದ್ಯಂತ ಮೈಕ್ರೋಸಾಫ್ಟ್ ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ