E Sreedharan Quits Politics : ಜನರಿಗೆ ಸೇವೆ ಮಾಡಲು ರಾಜಕಾರಣಿಯೇ ಆಗಬೇಕಿಲ್ಲ!

By Suvarna NewsFirst Published Dec 16, 2021, 11:15 PM IST
Highlights

ರಾಜಕೀಯಕ್ಕೆ ನಿವೃತ್ತಿ ಹೇಳಿದ ಮೆಟ್ರೋಮ್ಯಾನ್ ಇ.ಶ್ರೀಧರನ್
ನನಗೆ 90 ವರ್ಷ ಹಾಗಾಗಿ ರಾಜಕೀಯದಲ್ಲಿ ನಾನಿರುವುದು ಸೂಕ್ತವಲ್ಲ
ಕೇರಳದಲ್ಲಿ ಬಿಜೆಪಿ ಯಶಸ್ವಿಯಾಗಬೇಕಿದ್ದರೆ ತನ್ನ ನೀತಿಗಳಲ್ಲಿ ಬದಲಾವಣೆ ತರಬೇಕು

ನವದೆಹಲಿ (ಡಿ.16): ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿ ಒಂದು ವರ್ಷವಾಗುವ ಮುನ್ನವೇ ಮೆಟ್ರೋಮ್ಯಾನ್ (Metroman) ಖ್ಯಾತಿಯ ಇ.ಶ್ರೀಧರನ್ (E Sreedharan), ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ. ನವದೆಹಲಿಯೆ ಮೆಟ್ರೋ ಯೋಜನೆಯ (New Delhi Metro Railway Project) ನೇತೃತ್ವ ವಹಿಸಿದ್ದ ಕಾರಣಕ್ಕಾಗಿ ದೇಶದೆಲ್ಲೆಡೆಯಿಂದ ಮೆಟ್ರೋಮ್ಯಾನ್ ಎನ್ನುವ ಹೆಸರಿನಲ್ಲಿ ಗುರುತಿಸಿಕೊಂಡಿರುವ ಶ್ರೀಧರನ್ ಅವರ ಹಠಾತ್ ನಿರ್ಧಾರ ಕೇರಳ ಬಿಜೆಪಿಗೆ (Kerala BJP) ಅಚ್ಚರಿ ತಂದಿದೆ. ತಮ್ಮ ಹುಟ್ಟೂರು ಮಲಪ್ಪುರಂ (Malappuram ) ಜಿಲ್ಲೆಯ ಪೊನ್ನಾನಿಯಲ್ಲಿ (Ponnani) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖ್ಯಾತ ಇಂಜಿನಿಯರ್ ಈ.ಶ್ರೀಧರನ್ ತಮ್ಮ ನಿರ್ಧಾರವನ್ನು ಪ್ರಕಟ ಮಾಡಿದರು. ಕಳೆದ ಮಾರ್ಚ್ ನಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿದ್ದ 90 ವರ್ಷದ ಇ.ಶ್ರೀಧರನ್, ಏಪ್ರಿಲ್ ನಲ್ಲಿ ನಡೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ( Kerala Assembly elections) ಪಾಲಕ್ಕಾಡ್ (Palakkad) ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಕೇರಳದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಶ್ರೀಧರನ್ ಕಾಂಗ್ರೆಸ್ ನಾಯಕ ಶಫಿ ಪರಂಬಿಲ್ (Shafi Parambhil) ಎದುರು 3859 ಮತಗಳಿಂದ ಸೋಲು ಕಂಡಿದ್ದರು. 

ಚುನಾವಣೆಯ ಸೋಲಿನಿಂದ ಬಹಳ ಉತ್ತಮವಾದ ಪಾಠ ಕಲಿತಿದ್ದೇನೆ ಎಂದು ಹೇಳಿದ ಶ್ರೀಧರನ್, ಆರಂಭದಲ್ಲಿ ಚುನಾವಣೆಯ ಸೋಲಿನಿಂದ ಸಾಕಷ್ಟು ಬೇಸರವಾಗಿತ್ತು. ಆದರೆ, ಬಳಿಕ ಅರಿವಾದ ಸತ್ಯ ಏನೆಂದರೆ ಹಾಗೇನಾದರೂ ಗೆದ್ದಿದ್ದರೆ, ಏಕೈಕ ಶಾಸಕನಾಗಿ ನನ್ನ ಜನರಿಗೆ ಯಾವ ಸಹಾಯವನ್ನೂ ಮಾಡಲಾಗುತ್ತಿರಲಿಲ್ಲ ಎಂದಿದ್ದಾರೆ. ನಾನು ರಾಜಕಾರಣಿಯಲ್ಲ ಹಾಗೂ ರಾಜಕಾರಣಿಯಾಗಬೇಕು ಎಂದು ಆಸೆ ಪಟ್ಟವನೂ ಅಲ್ಲ. ಈಗ ನನಗೆ 90 ವರ್ಷ ರಾಜಕಾರಣದಲ್ಲಿ ಮುಂದುವರಿಯುವ ಆಸೆ ನನಗಿಲ್ಲ. ಜನರಿಗೆ ಸೇವೆ ಮಾಡಲು ರಾಜಕಾರಣಿಯೇ ಆಗಬೇಕಿಲ್ಲ. ನನ್ನ ಮೂರು ಟ್ರಸ್ಟ್ ಗಳಿವೆ ಅದರಿಂದಲೂ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡುವ ಮುನ್ನ ಬಿಜೆಪಿಗೆ ಸಲಹೆ ನೀಡಿದ  ಇ.ಶ್ರೀಧರನ್ ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ನಿರ್ವಹಣೆ ತೋರಬೇಕಿದ್ದರೆ, ಕೇರಳದಲ್ಲಿ ತನ್ನ ಕೆಲ ನೀತಿಗಳನ್ನು ಬದಲಾಯಿಸಬೇಕಿದೆ. ಕೇರಳ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಶೇಕಡವಾರು ಮತಗಳ ಸಂಖ್ಯೆ 17 ರಿಂದ 16 ಇದೆ. ಈಗ ಅದು ಮತ್ತೂ ಕಡಿಮೆಯಾಗಿರಬೇಕು ಎಂದಿದ್ದಾರೆ.

ಕೇರಳ ‘ಸಿಎಂ ಆಕಾಂಕ್ಷಿ’ ಮೆಟ್ರೋ ಶ್ರೀಧರನ್‌ಗೆ ಬಿಜೆಪಿ ಟಿಕೆಟ್‌!
ಇ.ಶ್ರೀಧರನ್ ಅವರ ಹಠಾತ್ ನಿರ್ಧಾರದ ಬಗ್ಗೆ ಎರ್ನಾಕುಲಂನಲ್ಲಿ (Ernakulam) ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ (K Surendran), ಶ್ರೀಧರನ್ ಅವರು ಎಂದಿಗೂ ಸಕ್ರಿಯ ರಾಜಕಾರಣಿಯಾಗಿರಲಿಲ್ಲ. ಆದರೆ, ಇತರ ವಿಚಾರಗಳಿಗೆ ಸಂಬಂಧಪಟ್ಟಂತೆ ಪಕ್ಷ ಅವರ ಸಲಹೆಯನ್ನು ಖಂಡಿತವಾಗ ಕೇಳಲಿದೆ ಎಂದಿದ್ದಾರೆ.  "ಚುನಾವಣೆಯಲ್ಲಿ ಶ್ರೀಧರನ್ ಅವರು ಸೋಲು ಕಂಡಿದ್ದರೂ ಸಹ, ನಮ್ಮ ಪಕ್ಷಕ್ಕೆ ಅವರ ಸಲಹೆಯ ಅಗತ್ಯವಿದೆ.  ಅವರ ನಿವೃತ್ತಿಯ ಬಗ್ಗೆ ಏನೇ ವರದಿಗಳು ಬಂದಿರಲಿ, ಪಕ್ಷ ಅವರ ಸಲಹೆಯನ್ನು ಪಡೆಯುವುದನ್ನು ಬಿಡುವುದಿಲ್ಲ" ಎಂದು ತಿಳಿಸಿದ್ದಾರೆ.

ದೇಶವನ್ನು ಹೊಸ ಪಥದಲ್ಲಿ ಮುನ್ನಡೆಸಲು ಮೆಟ್ರೋಮ್ಯಾನ್ ಸೇವೆ ಅಗತ್ಯ; ನಟ ಮೋಹನ್‌ಲಾಲ್!
ಕೇರಳ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದ್ದು ಮಾತ್ರವಲ್ಲದೆ, ಹಿಂದಿನ ಚುನಾವಣೆಯಲ್ಲಿ ತಿರುವನಂತಪುರದ ನೆಮೋಮ್ ಅಲ್ಲಿ ಗೆದ್ದಿದ್ದ ಏಕೈಕ ಕ್ಷೇತ್ರವನ್ನೂ ಕಳೆದುಕೊಂಡಿತ್ತು. ಈ ಕುರಿತಾಗಿ ಕೇಂದ್ರದ ನಾಯಕರು ಇ.ಶ್ರೀಧರನ್ ಅವರಿಂದ ವರದಿಯನ್ನು ಕೇಳಿದ್ದರು. ದೇಶದ ಬಹುತೇಕ ಮೆಟ್ರೋ ಯೋಜನೆಗಳ ಬೆನ್ನೆಲುಬಾಗಿರುವ ಇ.ಶ್ರೀಧರನ್, ಬಿರುಗಾಳಿಗೆ ಮುರಿದುಬಿದ್ದಿದ್ದ ರಾಮೇಶ್ವರದ ಪಾಂಬನ್ ಸೇತುವೆಯನ್ನು ಕೇವಲ 46 ದಿನಗಳಲ್ಲಿ ಕಟ್ಟಿಸಿ ಇಚ್ಛಾಶಕ್ತಿ ತೋರಿದ್ದರು. ಅದರೊಂದಿಗೆ ಬೆಟ್ಟಗುಡ್ಡಗಳ ದಾರಿಯಲ್ಲಿ ಅವರು ನಿರ್ಮಾಣ ಮಾಡಿದ ಕೊಂಕಣ್ ರೈಲು ಮಾರ್ಗಕ್ಕೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದ ಜನತೆ ಇಂದಿಗೂ ಆಭಾರಿಯಾಗಿದ್ದಾರೆ.

click me!