ಮರ್ಚಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಜೈಲಿನ ಒಂದೇ ಕೋಣೆಯಲ್ಲಿರಲು ವಿನಂತಿಸಿದ್ದಾರೆ. ಡ್ರಗ್ಸ್ ವ್ಯಸನಿಗಳಾಗಿರುವ ಇವರು ಜೈಲಿನಲ್ಲಿ ಡ್ರಗ್ಸ್ ಸಿಗದ ಕಾರಣ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇರಠ್ (ಉ.ಪ್ರ.): ಮರ್ಚಂಟ್ ನೇವಿ ಅಧಿಕಾರಿ ಪತಿ ಸೌರಭ್ ರಜಪೂತ್‌ರನ್ನು ಕ್ರೂರವಾಗಿ ಕೊಂದು ದೇಹವನ್ನು ತುಂಡರಿಸಿ ಡ್ರಂನಲ್ಲಿ ತುಂಬಿಟ್ಟ ಆರೋಪ ಹೊತ್ತಿರುವ ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ತಮ್ಮನ್ನು ಜೈಲಿನ ಒಂದೇ ಕೋಣೆಯಲ್ಲಿಡಲು ವಿನಂತಿಸಿದ್ದಾರೆ. ಅಲ್ಲದೆ, ಡ್ರಗ್ಸ್ ವ್ಯಸನಿಗಳಾಗಿರುವ ಇವರು ಅದಿಲ್ಲದೇ ಒದ್ದಾಡಿದ್ದು, ಡ್ರಗ್ಸ್ ಬೇಡಿಕೆ ಇಟ್ಟರು ಎಂದು ಗೊತ್ತಾಗಿದೆ. Aದರೆ ಜೈಲಧಿಕಾರಿಗಳು ಅವರ ಕೋರಿಕೆಯನ್ನು ನಿರಾಕರಿಸಿದ್ದಾರೆ. ಪ್ರಸ್ತುತ ಅಕ್ಕಪಕ್ಕದ ಸೆಲ್‌ಗಳಲ್ಲಿದ್ದಾರೆ.
‘ಜೈಲಿನ ನಿಯಮಗಳ ಪ್ರಕಾರ ಮಹಿಳಾ ಮತ್ತು ಪುರುಷ ಕೈದಿಗಳ ಬ್ಯಾರಕ್‌ಗಳಿಗೆ ಯಾವುದೇ ಸಂಪರ್ಕ ಇರುವಂತಿಲ್ಲ. ಅವರಿಬ್ಬರೂ ಮಾದಕ ವ್ಯಸನಿಗಳಾಗಿದ್ದಾರೆ. ಜೈಲಿನಲ್ಲಿ ಮಾದಕ ವಸ್ತು ಸಿಗದ ಕಾರಣ ತೊಳಲಾಟದಲ್ಲಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹಿರಿಯ ಜೈಲು ಅಧೀಕ್ಷಕ ವಿರೇಶ್ ರಾಜ್ ಶರ್ಮಾ ತಿಳಿಸಿದ್ದಾರೆ.
ವಕೀಲರೂ ಇಲ್ಲ:
‘ಕುಟುಂಬಸ್ಥರು ನನ್ನ ಪರವಾಗಿ ವಾದ ಮಾಡಲು ವಕೀಲರನ್ನು ನೇಮಿಸುವುದಿಲ್ಲ ಎಂದು ತಿಳಿಸಿದ್ದಾರೆ, ಹಾಗಾಗಿ ಸರ್ಕಾರಿ ವಕೀಲರನ್ನು ನನ್ನ ಪರ ವಾದಿಸಲು ನೇಮಿಸಿ’ ಎಂದು ಮುಸ್ಕಾನ್ ವಿನಂತಿ ಮಾಡಿರುವುದಾಗಿಯೂ ಜೈಲಧಿಕಾರಿಗಳು ತಿಳಿಸಿದ್ದಾರೆ.
ಮಗಳ ಹುಟ್ಟುಹಬ್ಬಕ್ಕೆ ಬಂದ ಮರ್ಚಂಟ್ ನೇವಿ ಅಧಿಕಾರಿ ಕತೆ ಮುಗಿಸಿದ ಪತ್ನಿ, ಆಕೆಯ ಪ್ರಿಯಕರ