
ಕೋಯಂಬತ್ತೂರಿನ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಒಬ್ಬ ಹುಡುಗಿ ತರಗತಿಗೆ ಪ್ರವೇಶಿಸುವ ಮೆಟ್ಟಿಲು ಬಳಿ ಕುಳಿತು ಬರೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ, ಋತುಚಕ್ರದ ಕಾರಣ ಖಾಸಗಿ ಶಾಲಾ ಆಡಳಿತ ಮಂಡಳಿಯು ಬಾಲಕಿಯನ್ನು ತರಗತಿ ಕೋಣೆಗೆ ಪ್ರವೇಶಿಸಲು ಬಿಡದೇ ಹೊರಗೆ ಕುಳಿತು ಪರೀಕ್ಷೆ ಬರೆಯುವಂತೆ ಒತ್ತಾಯಿಸಿ ಪರೀಕ್ಷೆ ಬರೆಯಿಸಿರುವ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟಿಜನ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲಿತ ಸಮುದಾಯದ ವಿದ್ಯಾರ್ಥಿನಿ:
ದಲಿತ ಸಮುದಾಯದ ಎಂಟನೇ ತರಗತಿಯ ವಿದ್ಯಾರ್ಥಿನಿ ಅರುಂಧತಿಯನ್ನು ತರಗತಿಯ ಹೊರಗೆ ಕೂರಿಸುವ ಮೂಲಕ ಪರೀಕ್ಷೆ ಬರೆಯುವಂತೆ ಒತ್ತಾಯಿಸಲಾಗಿದೆ. ವರದಿಗಳ ಪ್ರಕಾರ, ಈ ಘಟನೆ ಕೊಯಮತ್ತೂರಿನ ಖಾಸಗಿ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ನಡೆದಿದೆ. ಪರೀಕ್ಷೆಯ ಸಮಯದಲ್ಲಿ ಶಾಲೆಗೆ ತಲುಪಿದ ಹುಡುಗಿಯ ತಾಯಿ ಈ ವಿಡಿಯೋ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದಾದ ನಂತರ, ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವೀಡಿಯೊವನ್ನು ಕಳುಹಿಸಿದರು. ಅಲ್ಲದೆ, ಶಾಲಾ ಆಡಳಿತ ಮಂಡಳಿಯ ಬೇಜವಾಬ್ದಾರಿ ವರ್ತನೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಯಿ ಒತ್ತಾಯಿಸಿದ್ದಾರೆ. ಸ್ಥಳೀಯರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ನಿಮ್ಮ ಮುಟ್ಟಿನ ಬಣ್ಣ ಕೆಂಪು, ಗುಲಾಬಿ ಅಥವಾ ಕಂದು? ಇದರ ಅರ್ಥ ತಿಳಿಯಿರಿ
ಬಾಲಕಿ ಕೊಯಮತ್ತೂರು ಜಿಲ್ಲೆಯ ಸೆಂಗಟ್ಟೈ ಪಲಯಂ ಗ್ರಾಮದಲ್ಲಿರುವ ಸ್ವಾಮಿ ಚಿದ್ಭವಾನಂದ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದಾಳೆ. ವರದಿಗಳ ಪ್ರಕಾರ, ವಿದ್ಯಾರ್ಥಿನಿಗೆ ಏಪ್ರಿಲ್ 5 ರಂದು ಋತುಚಕ್ರವಾಗಿದೆ. ಇದಾದ ನಂತರ, ಎರಡು ಪರೀಕ್ಷೆಗಳಿಗೆ ಶಾಲೆಗೆ ಹೋದಾಗ, ಶಾಲಾ ಆಡಳಿತ ಮಂಡಳಿ ಅಧಿಕಾರಿಗಳು ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಈ ಬಗ್ಗೆ ವಿದ್ಯಾರ್ಥಿನಿ ತನ್ನ ತಾಯಿಗೆ ದೂರು ನೀಡಿದ್ದಳು. ಇದಾದ ನಂತರ, ಅವಳು ಮೂರನೇ ಪರೀಕ್ಷೆಗೆ ಬಂದಾಗ, ಅವಳ ತಾಯಿ ಕೂಡ ಶಾಲೆಗೆ ಬಂದು ತನ್ನ ಮಗಳು ತರಗತಿಯ ಹೊರಗೆ ಕುಳಿತು ಪರೀಕ್ಷೆ ಬರೆಯುವುದನ್ನು ನೋಡಿ ಶಾಕ್ ಆಗಿದ್ದಾರೆ. ಈ ವೇಳೆ ಮಗಳು ಹೊರಗೆ ಕುಳಿತು ಪರೀಕ್ಷೆ ಬರೆಯುತ್ತಿರುವ ದೃಶ್ಯವನ್ನು ತಾಯಿ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ. ಬಳಿಕ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ