ರಾಹುಲ್ ಗಾಂಧಿ ವಿದೇಶದಲ್ಲಿ ಭೇಟಿಯಾಗೋ ಉದ್ಯಮಿಗಳು ಯಾರು..? ಬಿಜೆಪಿ ಪ್ರಶ್ನೆ

By Kannadaprabha News  |  First Published Apr 11, 2023, 12:44 PM IST

ನನಗೆ ಗಾಂಧಿ ಕುಟುಂಬದ ಬಗ್ಗೆ ಗೌರವವಿದೆ. ಹೀಗಾಗಿ ಅವರ ವಿರುದ್ಧ ಏನೂ ಮಾತನಾಡುವುದಿಲ್ಲ. ಇಲ್ಲದಿದ್ದರೆ ಅವರು ವಿದೇಶಕ್ಕೆ ಹೋಗಿ ಭೇಟಿಯಾಗುವ ಅನಪೇಕ್ಷಿತ ಉದ್ಯಮಿಗಳ ಹತ್ತು ಉದಾಹರಣೆ ನೀಡುತ್ತಿದ್ದೆ ಎಂದು ಗುಲಾಂ ನಬಿ ಆಜಾದ್‌ ಹೇಳಿದ್ದರು.


ನವದೆಹಲಿ (ಏಪ್ರಿಲ್ 11, 2023): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿದೇಶದಲ್ಲಿ ಭೇಟಿಯಾಗಲು ಹೋಗುವ ‘ಅನಪೇಕ್ಷಿತ ಉದ್ಯಮಿಗಳು’ ಯಾರು ಎಂದು ಬಿಜೆಪಿ ಪ್ರಶ್ನಿಸಿದೆ. ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ಗೆ ಸಂದರ್ಶನ ನೀಡಿದ್ದ ಮಾಜಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌, ‘ರಾಹುಲ್‌ ಗಾಂಧಿ ಹಾಗೂ ಅವರ ಕುಟುಂಬದವರು ‘ಅನಪೇಕ್ಷಿತ ಉದ್ಯಮಿಗಳನ್ನು’ ಭೇಟಿಯಾಗಲು ಆಗಾಗ ವಿದೇಶಕ್ಕೆ ಹೋಗುತ್ತಾರೆ’ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್‌ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕರು, ಆ ಉದ್ಯಮಿಗಳು ಯಾರು ಎಂದು ಕಾಂಗ್ರೆಸ್‌ ಹೇಳಬೇಕು ಎಂದು ಪ್ರಶ್ನಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷ (Congress Party) ತೊರೆದ ಗುಲಾಂ ನಬಿ ಆಜಾದ್‌ (Ghulam Nabi Azad) ಸೇರಿದಂತೆ ಹಲವು ನಾಯಕರ ಹೆಸರನ್ನು ಉಲ್ಲೇಖಿಸಿ, ಉದ್ಯಮಿ ಗೌತಮ್‌ ಅದಾನಿ ಫೋಟೋ ಜೊತೆ ರಾಹುಲ್‌ ಗಾಂಧಿ ಕೆಲ ದಿನಗಳ ಹಿಂದೆ ಟ್ವೀಟೊಂದನ್ನು ಮಾಡಿದ್ದರು. ಅದರಲ್ಲಿ, ‘ಇವರೆಲ್ಲ ಸತ್ಯ ಮುಚ್ಚಿಟ್ಟು ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಪ್ರಶ್ನೆ ಹಾಗೇ ಉಳಿಯುತ್ತದೆ - ಅದಾನಿ ಕಂಪನಿಗಳಲ್ಲಿ ಇರುವ 20,000 ಕೋಟಿ ರೂ. ಬೇನಾಮಿ ಹಣ ಯಾರದು?’ ಎಂದು ಪ್ರಶ್ನಿಸಿ, ಗುಲಾಂ ನಬಿ ಆಜಾದ್‌, ಜ್ಯೋತಿರಾದಿತ್ಯ ಸಿಂಧ್ಯಾ, ಹಿಮಂತ ಬಿಸ್ವಾ ಶರ್ಮ, ಕಿರಣ್‌ ಕುಮಾರ್‌ ರೆಡ್ಡಿ ಹಾಗೂ ಅನಿಲ್‌ ಆ್ಯಂಟನಿ ಅವರ ಹೆಸರನ್ನು ಬರೆದಿದ್ದರು.

Tap to resize

Latest Videos

ಇದನ್ನು ಓದಿ: ‘ಪ್ರಧಾನಿ ಮೋದಿ ಜತೆ ನಾನು ತಪ್ಪಾಗಿ ನಡೆದುಕೊಂಡೆ’: ಗುಲಾಂ ನಬಿ ಆಜಾದ್‌

ಇದಕ್ಕೆ ಏಷ್ಯಾನೆಟ್‌ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದ ಗುಲಾಂ ನಬಿ ಆಜಾದ್‌, ‘ನನಗೆ ಗಾಂಧಿ ಕುಟುಂಬದ ಬಗ್ಗೆ ಗೌರವವಿದೆ. ಹೀಗಾಗಿ ಅವರ ವಿರುದ್ಧ ಏನೂ ಮಾತನಾಡುವುದಿಲ್ಲ. ಇಲ್ಲದಿದ್ದರೆ ಅವರು ವಿದೇಶಕ್ಕೆ ಹೋಗಿ ಭೇಟಿಯಾಗುವ ಅನಪೇಕ್ಷಿತ ಉದ್ಯಮಿಗಳ ಹತ್ತು ಉದಾಹರಣೆ ನೀಡುತ್ತಿದ್ದೆ’ ಎಂದು ಹೇಳಿದ್ದರು. ಅದನ್ನು ಉಲ್ಲೇಖಿಸಿ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಆ ಉದ್ಯಮಿಗಳು ಯಾರು ಎಂದು ಪ್ರಶ್ನಿಸಿದೆ.

ಗುಲಾಂ ನಬಿ ಆಜಾದ್‌ ವಿರುದ್ಧ ಕಾಂಗ್ರೆಸ್‌ ಕಿಡಿ:
‘ಅನಪೇಕ್ಷಿತ ಉದ್ಯಮಿಗಳು’ ಹೇಳಿಕೆಗೆ ಗುಲಾಂ ನಬಿ ಆಜಾದ್‌ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌, ‘ಗುಲಾಂ ನಬಿ ಆಜಾದ್‌ ಪ್ರಚಾರದಲ್ಲಿರಲು ಹತಾಶೆಯಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ದಿನ ಕಳೆದಂತೆ ಅವರು ಹೊಸ ಆಳಕ್ಕೆ ಕುಸಿಯುತ್ತಿದ್ದಾರೆ. ಮೋದಿಗೆ ನಿಷ್ಠೆ ತೋರಿಸಲು ತಮ್ಮ ನಿಜವಾದ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ‘ಕೈ’ಗೆ ಈಗಲೂ ರಾಹುಲ್‌ ರಿಮೋಟ್‌; ಖರ್ಗೆಗೆ ಸ್ವತಂತ್ರ ನಿರ್ಧಾರದ ಅಧಿಕಾರವಿಲ್ಲ: ಆಜಾದ್‌

ಮೋದಿಯೇ ಆಹ್ವಾನ ನೀಡಿದರೂ ತಿರಸ್ಕರಿಸಿದ್ದೆ, ನನ್ನ ನಡೆಗೆ ಕ್ಷಮೆ ಇರಲಿ: ಮಾಜಿ ಕಾಂಗ್ರೆಸ್ ನಾಯಕ ಅಜಾದ್!
 

click me!