
ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 76 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾಗಿದ್ದ ಪ್ರಮುಖ ನಕ್ಸಲ್ ಕಮಾಂಡರ್‌ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ನಕ್ಸಲ್ ನಾಯಕ ಹಿಡ್ಮಾನನ್ನು ಛತ್ತೀಸ್‌ಗಡ-ಆಂಧ್ರಪ್ರದೇಶ ಗಡಿಯಲ್ಲಿ ಭದ್ರತಾಪಡೆಗಳು ಹೆಡೆಮುರಿ ಕಟ್ಟಿವೆ. ಭದ್ರತಾ ಪಡೆಗಳು ಹಾಗೂ ನಾಗರಿಕರ ಮೇಲೆ ಈತ 26 ಶಸ್ತ್ರಾಸ್ತ್ರ ದಾಳಿ ನಡೆಸಿದ್ದ ಈತನ ತಲೆಗೆ 1 ಕೋಟಿ ಬಹುಮಾನ ಘೋಷಿಸಲಾಗಿತ್ತು. ಪ್ರಸ್ತುತ, ಛತ್ತೀಸ್‌ಗಢ ಹಾಗೂ ಆಂಧ್ರಪ್ರದೇಶ ನಡುವಿನ ಗಡಿಯಲ್ಲಿ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳು ನಡೆಯುತ್ತಿದ್ದು, ಈ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ಹಿಡ್ಮಾ ಹಾಗೂ ಆತನ ಪತ್ನಿ ರಾಜಕ್ಕ ಎಂದೂ ಕರೆಯಲ್ಪಡುವ ರಾಜೆ ಎಂಬಾಕೆಯ ಹತ್ಯೆಯಾಗಿದೆ.
ಹಿಡ್ಮಾ ಸಾವನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಆದರೆ ಇಬ್ಬರ ಮೃತದೇಹದ ಫೋಟೋಗಳು ಹೊರ ಬಂದಿವೆ. ಹಾಗೆಯೇ ಸುಕ್ಮಾ ಜಿಲ್ಲೆಯ ಎರ್ರಾಬೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2ನೇ ಎನ್‌ಕೌಂಟರ್ ನಡೆಯುತ್ತಿದೆ. ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ನಕ್ಸಲರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಪಡೆಯ ತಂಡದೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಛತ್ತೀಸ್‌ಗಢದ ಗೃಹ ಸಚಿವ ವಿಜಯ್ ಶರ್ಮಾ ಅವರು ಹಿಡ್ಮಾ ಹತ್ಯೆಯ ವರದಿಗಳು ಬಂದಿವೆ ಎಂದು ಹೇಳಿದ್ದಾರೆ.
ಸುಕ್ಮಾದ ಎರ್ರಾಬೋರ್ ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲರು ಇದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾಪಡೆಗೆ ಮಾಹಿತಿ ನೀಡಲಾಗಿತ್ತು. ಈ ಮಾಹಿತಿಯ ಮೇರೆಗೆ ರಾತ್ರಿಯ ಸಮಯದಲ್ಲಿ ಡಿಆರ್‌ಜಿ (District Reserve Guard)ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಇಂದು ಬೆಳಗ್ಗೆ ಸೈನಿಕರು ಆ ಪ್ರದೇಶವನ್ನು ತಲುಪಿದಾಗ, ನಕ್ಸಲರು ಅವರನ್ನು ಗಮನಿಸಿ ಗುಂಡು ಹಾರಿಸಿದ್ದಾರೆ. ಈ ವೇಳೆ ಸೈನಿಕರು ಪ್ರತಿದಾಳಿ ನಡೆಸಿದ್ದು, ಪ್ರಸ್ತುತ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಕಾರ್ಯಾಚರಣೆ ಪೂರ್ಣಗೊಂಡ ನಂತರವೇ ಎಷ್ಟು ನಕ್ಸಲರ ಹೆಡೆಮುರಿ ಕಟ್ಟಲಾಗಿದೆ ಎಂಬುದನ್ನು ದೃಢಪಡಿಸಲಾಗುವುದು. ಎರಡು ದಿನಗಳ ಹಿಂದೆ, ಸುಕ್ಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ತಲಾ ₹15 ಲಕ್ಷ ಬಹುಮಾನ ಹೊಂದಿದ್ದ ಮೂವರು ನಕ್ಸಲರು ಸಾವನ್ನಪ್ಪಿದ್ದರು.
ನವೆಂಬರ್ 16ರಂದು ಭೆಜ್ಜಿ ಚಿಂತಗುಫಾ ಗಡಿ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ಭದ್ರತಾ ಸಿಬ್ಬಂದಿಗೆ ಖಚಿತ ಮಾಹಿತಿ ಸಿಕ್ಕಿತು. ಈ ಗುಪ್ತಚರ ಮಾಹಿತಿಯ ಮೇರೆಗೆ ಡಿಆರ್‌ಜಿ ತಂಡವು ಶೋಧ ಕಾರ್ಯಾಚರಣೆ ಪ್ರಾರಂಭಿದಾಗ ಭಾನುವಾರ ಬೆಳಗ್ಗೆ ನಕ್ಸಲರು ತುಮಲ್‌ಪಾಡ್ ಕಾಡಿನಲ್ಲಿ ಗುಂಡು ಹಾರಿಸಿದಾಗ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಎರಡೂ ಕಡೆಯಿಂದ ನಿರಂತರ ಗುಂಡಿನ ಚಕಮಕಿ ನಡೆದಿದ್ದು,ಈ ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲರು ಮೃತಪಟ್ಟಿದ್ದಾರೆ ಕಾರ್ಯಾಚರಣೆಯ ನಂತರದ ಹುಡುಕಾಟದ ಸಮಯದಲ್ಲಿ ಅವರ ಶವಗಳನ್ನು ಕಾಡಿನಿಂದ ವಶಕ್ಕೆ ಪಡೆಯಲಾಗಿದೆ.
ಇದಕ್ಕೂ ಮೊದಲು ನವೆಂಬರ್ 11ರಂದು ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ಆರು ನಕ್ಸಲರು ಸಾವನ್ನಪ್ಪಿದರು. ಮೃತಪಟ್ಟವರಲ್ಲಿ ಮ್ಯಾಡರ್ ಏರಿಯಾ ಸಮಿತಿಯ ಉಸ್ತುವಾರಿ ಬುಚಣ್ಣ ಮತ್ತು ಮತ್ತೊಬ್ಬ ಹಿರಿಯ ನಕ್ಸಲ್ ನಾಯಕ ಪಾಪರಾವ್ ಎಂಬಾತನ ಪತ್ನಿ ಊರ್ಮಿಳಾ ಸೇರಿದ್ದಾರೆ ಆದರೆ ಪಾಪರಾವ್ ಮತ್ತೊಮ್ಮೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಯಶಸ್ವಿ ಕಾರ್ಯಾಚರಣೆಯ ನಂತರ, ನಕ್ಸಲರ ಶವಗಳನ್ನು ಜಿಲ್ಲಾ ಕೇಂದ್ರಕ್ಕೆ ತರಲಾಗಿದ್ದು ಡಿಆರ್‌ಜಿ ಸಿಬ್ಬಂದಿ ಶವಗಳನ್ನು ಹೊತ್ತೊಯ್ಯುತ್ತಿರುವುದು ಕಂಡು ಬಂದಿದೆ. ಅವರೆಲ್ಲರ ತಲೆಗೆಒಟ್ಟು ₹27 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಡಾ. ಜಿತೇಂದ್ರ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೆಕ್ಕಾ ಮದೀನಾ ಉಮ್ರಾ ವೇಳೆ ಮೃತಪಟ್ಟರೆ ಶವ ಏಕೆ ಹಿಂದಿರುಗಿಸಲ್ಲ? ಯಾತ್ರೆ ಹೊರಡುವ ಮುನ್ನ ಈ ವಿಚಾರ ತಿಳಿದಿರಲಿ
ಇದನ್ನೂ ಓದಿ: ಸ್ಯಾಂಡ್‌ವಿಚ್‌ನಲ್ಲಿ ಸೀಗಡಿ: ಬೆಂಗಳೂರಿನ ಗ್ರಾಹಕಿ 1 ಲಕ್ಷ ನೀಡುವಂತೆ ಪ್ಯಾರಿಸ್ ಪಾಣಿನಿ, ಸ್ವಿಗ್ಗಿಗೆ ಕೋರ್ಟ್ ಆದೇಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ