
ಜಬಲ್‌ಪುರ (ಆ.10): ಮಧ್ಯಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಭಾರೀ ಪ್ರಮಾಣದ ಅಗ್ನಿ ಅವಗಢ ಸಂಭವಿಸಿದೆ. ಘಟನೆಯಲ್ಲಿ ಈವರೆಗೂ 10 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಸಾವುನೋವಿನ ಸಂಖ್ಯೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ದಮೋಹ್ ನಾಕಾ ಶಿವನಗರದ ನ್ಯೂ ಲೈಫ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಒಂದು ಗಂಟೆಯ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಇಡೀ ಆಸ್ಪತ್ರೆಯಿಂದ ಹೊರಬರಲು ಒಂದೇ ಮಾರ್ಗವಿದ್ದ ಕಾರಣಕ್ಕಾಗಿ ಸಾಕಷ್ಟು ಜನರು ಆಸ್ಪತ್ರೆಯ ಒಳಗೆ ಸಿಲುಕಿಕೊಂಡಿದ್ದರು ಎಂದು ತಿಳಿದು ಬಂದಿದೆ. ಬೆಂಕಿ ಹೊತ್ತಿಕೊಂಡ ಕೆಲವೇ ಸಮಯದಲ್ಲಿ ದೊಡ್ಡ ರೂಪ ತಾಳಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದ ವಾಹನಗಳಿಗೆ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ.. ಆಗ ವಿದ್ಯುತ್ ಇಲಾಖೆಯ ನೌಕರರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಇದಾದ ಬಳಿಕ ಸುಮಾರು ಒಂದು ಗಂಟೆಯ ಪ್ರಯತ್ನದ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ಘಟನೆಯ ಬಗ್ಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ ಕೂಡ ನೀಡಿದ್ದಾರೆ. ಜಬಲ್‌ಪುರದ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡದ ದುಃಖದ ಸುದ್ದಿ ಬಂದಿದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.
4 ಮಂದಿ ಸ್ಥಳದಲ್ಲೇ ಸಾವು: ಘಟನೆಯನ್ನು ಖಚಿತಪಡಿಸಿರುವ ಜಬಲ್‌ಪುರ ಎಸ್‌ಪಿ ಸಿದ್ಧಾರ್ಥ್ ಬಹುಗುಣ, ತೀವ್ರ ಸುಟ್ಟಗಾಯಗಳಿಂದ 4 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಇದರೊಂದಿಗೆ ಮೂವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಇದರೊಂದಿಗೆ ಅರ್ಧ ಡಜನ್‌ಗಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಅಚಾನಕ್ಕಾಗಿ ಬಾಲಿವುಡ್ ಸೆಟ್‌ಗೆ ಬೆಂಕಿ, ಸಂಪೂರ್ಣ ಭಸ್ಮ, 10 ಅಗ್ನಿಶಾಮಕ ದಳ ದೌಡು
5 ಲಕ್ಷ ರೂಪಾಯಿ ಪರಿಹಾರ: ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಶಿವರಾಜ್ ಸಿಂಗ್ ಚೌಹಾಣ್, ಜೀವ ಕಳೆದುಕೊಂಡಿರುವ ವ್ಯಕ್ತಿಗಳ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ಹೇಳಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಧನಸಹಾಯ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಗುಜರಿ ಕಾರು ತಂದು ಬೆಂಕಿ ಹಚ್ಚಿದ ಕಾಂಗ್ರೆಸ್ಸಿಗರು..!
ಈ ಕುರಿತಾಗಿ ಅವರು ಟ್ವೀಟ್ ಮಾಡಿದ್ದು, ಸ್ಥಳೀಯ ಆಡಳಿತ ಹಾಗೂ ಜಿಲ್ಲಾಧಿಕಾರಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಈ ಕುರಿತು ಸಂಪೂರ್ಣ ನಿಗಾ ವಹಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಪರಿಹಾರ ಮತ್ತು ರಕ್ಷಣೆಗಾಗಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ನೆರವು ನೀಡಲಾಗುವುದು. ಇದರೊಂದಿಗೆ ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನೂ ರಾಜ್ಯ ಸರ್ಕಾರ ಭರಿಸಲಿದೆ ಎಂದಿದ್ದಾರೆ.
ಎಲ್ಲರ ರಕ್ಷಣೆ: ಆಸ್ಪತ್ರೆಯ ಒಳಗೆ ಸಿಲುಕಿಕೊಂಡಿದ್ದ ಎಲ್ಲಾ ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿದೆ ಎಂದು ಜಬಲ್‌ಪುರ ಸಿಎಸ್‌ಪಿ ಅಖಿಲೇಶ್ ಗೌರ್ ಹೇಳಿದ್ದಾರೆ. ಹಲವಾರು ಅಗ್ನಿಶಾಮಕ ದಳಗಳು ಬೆಂಕಿಯನ್ನು ನಂದಿಸಲು ಮತ್ತು ರೋಗಿಗಳನ್ನು ವೈದ್ಯಕೀಯ ಸೌಲಭ್ಯದಿಂದ ಸ್ಥಳಾಂತರಿಸಲು ಸ್ಥಳಕ್ಕೆ ಧಾವಿಸಿದ್ದವು. ಆಸ್ಪತ್ರೆಯ ತೀವ್ರ ನಿಘಾ ಘಟಕದ ಕೋಣೆಯಲ್ಲಿ ಅಗ್ನಿದುರಂತ ಸಂಭವಿಸಿತ್ತು. ಕ್ಷಣಾರ್ಧದಲ್ಲಿಯೇ ಅದು ಇಡೀ ಆಸ್ಪತ್ರೆಯನ್ನು ಆವರಿಸಿತು ಎನ್ನುವ ಮಾಹಿತಿ ಲಭ್ಯವಾಗಿದೆ.
ನಾಯಕರ ಸಂತಾಪ: ಈ ದುರಂತ ಘಟನೆಯ ಹಿಂದಿನ ಕಾರಣವನ್ನು ಸಹ ತನಿಖೆ ಮಾಡಲಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಜಬಲ್‌ಪುರದ ಬಿಜೆಪಿ ಸಂಸದ ರಾಕೇಶ್ ಸಿಂಗ್ ಹೇಳಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರು ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಬೆಂಕಿಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. "ಜಬಲ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿಯಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಸಾವುನೋವುಗಳು ವರದಿಯಾಗಿವೆ. ಇದು ಅತ್ಯಂತ ನೋವಿನ ಘಟನೆಯಾಗಿದೆ. ನಾನು ಅಗಲಿದ ಆತ್ಮಗಳಿಗೆ ಪ್ರಾರ್ಥಿಸುತ್ತೇನೆ ಮತ್ತು ಬೆಂಕಿಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. " ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ