ರಾಷ್ಟ್ರಪತಿ ದ್ರೌಪದಿ ಮುರ್ಮು ವಿಚಾರವಾಗಿ ಮಮತಾ ಬ್ಯಾನರ್ಜಿ ಅವರ ಪಕ್ಷ ಟಿಎಂಸಿ ನಾಯಕ ಅಖಿಲ್ ಗಿರಿ ಹೇಳಿರುವ ವಿವಾದಾತ್ಮಕ ಮಾತಿಗೆ ಬಿಜೆಪಿ ಕಿಡಿಕಾರಿದೆ. ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯ ಕುರಿತಾಗಿ ಈ ರೀತಿಯ ಮಾತುಗಳು ಶೋಭೆ ತರುವುದಿಲ್ಲ ಎಂದಿದೆ.
ಕೋಲ್ಕತ್ತಾ (ನ.12): ಪಶ್ಚಿಮ ಬಂಗಾಳದ ಸಚಿವ ಮತ್ತು ಟಿಎಂಸಿ ನಾಯಕ ಅಖಿಲ್ ಗಿರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ನಂದಿಗ್ರಾಮದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವ ವೇಳೆ, ''ನಾವು ಯಾರನ್ನೂ ಅವರ ನೋಟದಿಂದ ನಿರ್ಣಯಿಸುವುದಿಲ್ಲ. ನಾವು ಭಾರತದ ರಾಷ್ಟ್ರಪತಿಯನ್ನು ಗೌರವಿಸುತ್ತೇವೆ, ಆದರೆ ನಮ್ಮ ಅಧ್ಯಕ್ಷರು ಹೇಗಿದ್ದಾರೆ ಎನ್ನುವುದು ಗೊತ್ತಲ್ಲ..' ಎಂದು ಹೇಳಿಕೆ ನೀಡಿದ್ದಾರೆ. ಟಿಎಂಸಿ ನಾಯಕನ ಈ ಹೇಳಿಕೆ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕ ಹಾಗೂ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಅಖಿಲ್ ಗಿರಿಯ ಈ ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಯಾವಾಗಲೂ ಬುಡಕಟ್ಟು ವಿರೋಧಿ. ರಾಷ್ಟ್ರಪತಿ ಚುನಾವಣೆಯಲ್ಲಿ ಅವರು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲಿಲ್ಲ ಮತ್ತು ಈಗ ಅವರ ಪಕ್ಷದ ವ್ಯಕ್ತಿಯೊಬ್ಬ ರಾಷ್ಟ್ರಪತಿಯ ಕುರಿತಾಗಿ ಈ ಮಾತನ್ನು ಆಡಿದ್ದಾರೆ. ಅಭಿವ್ಯಕ್ತಿಯ ಸ್ವಾತಂತ್ರ್ಯ ಮುಜುಗರವಾಗುವಂತೆ ಇರಬಾರದು. ಆದರೆ. ಈ ವಿಚಾರವಾಗಿ ಈವರೆಗೂ ಮಮತಾ ಬ್ಯಾನರ್ಜಿ ಅವರಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ ಎಂದು ಹೇಳಿದ್ದಾರೆ.
Akhil Giri, minister in Mamata Banerjee’s cabinet, insults the President, says, “We don't care about looks. But how does your President look?"
Mamata Banerjee has always been anti-Tribals, didn’t support President Murmu for the office and now this. Shameful level of discourse… pic.twitter.com/DwixV4I9Iw
ಮಮತಾ ಬ್ಯಾನರ್ಜಿ ಬುಡಕಟ್ಟು ಜನರ ವಿರೋಧಿ: ಅಖಿಲ್ ಗಿರಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಬುಡಕಟ್ಟು ಜನಾಂಗದವರು. ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿ ಬುಡಕಟ್ಟು ಜನರ ವಿರೋಧಿಯಾಗಿದ್ದಾರೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಮೊದಲಿಗೆ ರಾಷ್ಟ್ರಪತಿ ಚುನಾವಣೆಯ ವೇಳೆ ಮುರ್ಮು ಅವರನ್ನು ವಿರೋಧಿಸಿದ್ದ ಮಮತಾ ಬ್ಯಾನರ್ಜಿ ಈಗ, ಅವರ ಸಚಿವನ ಹೇಳಿಕೆಗೆ ಕನಿಷ್ಠ ವಿರೋಧವನ್ನು ವ್ಯಕ್ತಪಡಿಸಿಲ್ಲ. ಅಖಿಲ್ ಗಿರಿ ಹೇಳಿಕೆ ನೀಡುವ ವೇಳೆ ರಾಜ್ಯ ಮಹಿಳಾ ಕಲ್ಯಾಣ ಸಚಿವ ಶಶಿ ಪಂಜ ಕೂಡ ಉಪಸ್ಥಿತರಿದ್ದರು ಎಂದು ಬಂಗಾಳ ಬಿಜೆಪಿ ಹೇಳಿದೆ.
ಶುಕ್ರವಾರ ನಂದಿಗ್ರಾಮದಲ್ಲಿ ಹುತಾತ್ಮರ ದಿನಾಚರಣೆ ನಿಮಿತ್ತ ಜನರನ್ನುದ್ದೇಶಿಸಿ ಟಿಎಂಸಿ ಮುಖಂಡರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ, ಅಖಿಲ್ ಗಿರಿ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು 'ಅವರು (ಶುಭೇಂದು ಅಧಿಕಾರಿ) ನಾನು (ಅಖಿಲ್ ಗಿರಿ) ಸುಂದರನಲ್ಲ ಎಂದು ಹೇಳುತ್ತಾರೆ. ಹಾಗಾದರೆ ಅವರು ಆಯ್ಕೆ ಮಾಡಿರುವ ರಾಷ್ಟ್ರಪತಿ ಎಷ್ಟು ಸುಂದರವಾಗಿದ್ದಾರೆ. 'ನಮ್ಮ ರಾಷ್ಟ್ರಪತಿ ನೋಡೋಕೆ ಹೇಗಿದ್ದಾರೆ ಗೊತ್ತಲ್ಲ ಎಂದು ಅವರು ಹೇಳಿದ್ದಾರೆ. ಮಾತು ಮುಂದುವರಿಸುತ್ತಾ ಸುವೇಂದು ಅಧಿಕಾರಿಗೆ ಬೆದರಿಕೆ ಹಾಕಿದ ಅವರು, ಮಮತಾ ಬ್ಯಾನರ್ಜಿ ಬೇಡ ಅಂದಿದ್ದಾರೆ ಆ ಕಾರಣಕ್ಕಾಗಿ ಸುಮ್ಮನಿದ್ದೇನೆ. ಇಲ್ಲದೇ ಇದ್ದಲ್ಲಿ ಇಷ್ಟರಲ್ಲಿ ಆತನ ಕೈಕಾಲು ಮುರಿಯುತ್ತಿದ್ದೆ ಎಂದಿದ್ದಾರೆ.
'ರಾಷ್ಟ್ರಪತಿಗಳೇ ನೀವು ಚಮಚಾಗಿರಿ ಮಾಡ್ಬೇಡಿ'.. ಕಾಂಗ್ರೆಸ್ ನಾಯಕನ ಹೇಳಿಕೆಗೆ ಬಿಜೆಪಿ ಕಿಡಿ!
ನಾಲ್ಕು ಬಾರಿಯ ಶಾಸಕ ಹಾಗೂ ಸಚಿವ ಅಖಿಲ್ ಗಿರಿಯನ್ನು ಪೂರ್ವ ಮಿಡ್ನಾಪುರ ವಲಯದ ಪ್ರಭಾವಿ ನಾಯಕ ಎಂದೇ ಪರಿಗಣಿಸಲಾಗುತ್ತಿದೆ. ಇದು ಬಿಜೆಪಿ ನಾಯಕರಾದ ಸುವೇಂದು ಅಧಿಕಾರಿ ಹಾಗೂ ದಿಲೀಪ್ ಘೋಷ್ ಅವರ ಪ್ರಭಾವಿ ಸ್ಥಳ ಎಂದೂ ಹೇಳಲಾಗುತ್ತದೆ. ಹಾಗಿದ್ದರೂ 2021ರ ವಿಧಾನಸಭೆ ಚುನಾವಣೆಯಲ್ಲಿ ಅಖಿಲ್ ಗಿರಿ, ಬಿಜೆಪಿ ನಾಯಕನನ್ನು ಸೋಲಿಸಿದ್ದರು. ಆ ಕಾರಣಕ್ಕಾಗಿ ಅವರನ್ನು ಮಮತಾ ಬ್ಯಾನರ್ಜಿ ಸಚಿವರನ್ನಾಗಿ ಮಾಡಿದ್ದರು. ಗಿರಿ ಸೇರಿರುವ ವಿಧಾನಸಭಾ ಕ್ಷೇತ್ರ ಕಂಠಿ ಲೋಕಸಭೆಗೆ ಬರುತ್ತದೆ. ಈ ಕ್ಷೇತ್ರ ಸುವೇಂದು ಅಧಿಕಾರಿ ಸಹೋದರ ಶಿಶಿರ್ ಕಂಠಿ ಸಂಸದರಾಗಿದ್ದಾರೆ.
ರಾಷ್ಟ್ರಪತ್ನಿ ಹೇಳಿಕೆ, ದ್ರೌಪದಿ ಮುರ್ಮು ಬಳಿ ಕ್ಷಮೆ ಕೇಳಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್!
ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ರಾಜಕಾರಣಿ ಇವರೊಬ್ಬರೇ ಅಲ್ಲ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆಯುವ ಮೂಲಕ ವಿವಾದ ಸೃಷ್ಟಸಿದ್ದರು. ಅವರ ಇಡೀ ಭಾರತದ ರಾಷ್ಟ್ರಪತ್ನಿ ಎಂದು ಅಧೀರ್ ರಂಜನ್ ಹೇಳಿದ್ದರು. ಬಳಿಕ ರಾಷ್ಟ್ರಪತಿಗಳಿಗೆ ಪತ್ರ ಬರೆದು ಅವರು ಕ್ಷಮೆಯಾಚಿಸಿದರು. 'ನಾನು ಆಕಸ್ಮಿಕವಾಗಿ ನಿಮಗಾಗಿ ತಪ್ಪು ಪದವನ್ನು ಬಳಸಿದ್ದೇನೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಮತ್ತು ಈ ಕ್ಷಮೆಯನ್ನು ಸ್ವೀಕರಿಸಲು ವಿನಂತಿಸುತ್ತೇನೆ. ಈ ವಿಚಾರವಾಗಿ ಸೋನಿಯಾ ಗಾಂಧಿ ಕೂಡ ಕ್ಷಮೆಯಾಚಿಸಬೇಕು ಎಂದು ಸ್ಮೃತಿ ಇರಾನಿ ಆಗ್ರಹಿಸಿದ್ದರು. ಇದಾದ ನಂತರ ಸೋನಿಯಾ ಮತ್ತು ಸ್ಮೃತಿ ಮುಖಾಮುಖಿಯಾದಾಗ ಸೋನಿಯಾ ಸಿಟ್ಟಿನಿಂದಲೇ 'ನನ್ನೊಂದಿಗೆ ಮಾತನಾಡಬೇಡಿ' ಎಂದು ಸ್ಮೃತಿ ಇರಾನಿಗೆ ಹೇಳಿದ್ದರು.