
ಭುವನೇಶ್ವರ: ಮನೆಯ ಮೇಲ್ಛಾವಣಿಯ ಮೇಲೆ ಬಾಂಬ್ ತಯಾರಿಸುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡು ಅಮ್ಮ ಮಗ ಸಾವನ್ನಪ್ಪಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ,ಜನವರಿ 27ರಂದು ಘಟನೆ ನಡೆದಿದ್ದು ಭುವನೇಶ್ವರದ ಏರ್‌ಫೀಲ್ಡ್ ಏರಿಯಾದ ಮನೆಯೊಂದರ ಟೆರೇಸ್ ಮೇಲೆ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು, ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಕ್ರಿಮಿನಲ್ ಹಾಗೂ ರೌಡಿ ಶೀಟರ್ 26 ವರ್ಷದ ಸೆಹ್ನಾಜ್ ಮಲಿಕ್ ಫೆಬ್ರವರಿ 4 ರಂದು ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದ. ಇದಾಗಿ ಕೆಲವು ದಿನಗಳ ನಂತರ ಇದೇ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನ ತಾಯಿ 51 ವರ್ಷದ ಲಿಜಾತುನ್ ಬೀಬಿ ಫೆಬ್ರವರಿ 10 ರಂದು ಕಟಕ್‌ನ ಎಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಮಲಿಕ್‌ನ ಗೆಳತಿ 23 ವರ್ಷದ ತೃಪ್ತಿಮಯಿ ಮಹಲ್ ಹಾಗೂ ಸಹಚರ 27 ವರ್ಷದ ಅಮಿಯಾ ಮಲ್ಲಿಕ್ ಅವರು ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಮಲಿಕ್‌ಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎಂದು ಏರ್‌ಫೀಲ್ಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಬ್‌ಗಳನ್ನು ಸಿದ್ಧಪಡಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಈ ಘಟನೆಯಲ್ಲಿ ಸಾವನ್ನಪ್ಪಿದ ಸೆಹ್ನಾಜ್ ಮಲಿಕ್ ವಿರುದ್ಧ ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವು ಸೇರಿದಂತೆ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಮಲಿಕ್, ಸುಮಾರು ಆರು ತಿಂಗಳ ಹಿಂದೆ ನಾಯವಲ್ಲಿಯಲ್ಲಿ ನಡೆದ ರಾಜಕೀಯ ಘರ್ಷಣೆಯ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಪೊಲೀಸರು ಆತನ ಮೇಲೆ ಕಣ್ಣಿಟ್ಟಿದ್ದರು.
ಇದನ್ನೂ ಓದಿ: ನಿಮ್ಮ ಅಳಿಯನನ್ನೂ ಈಗಲೇ ಬುಕ್ ಮಾಡಿ: ಸೀಮಿತ ಆಫರ್
ಮನೆಯ ಟೆರೇಸ್ ಮೇಲೆ ನಡೆದ ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣದ ತನಿಖೆಗೆ ಇಳಿಯಬೇಕಾಯ್ತು. ಈ ತನಿಖೆಯೂ ಭಯೋತ್ಪಾದನೆಯನ್ನು ನಿರಾಕರಿಸಿತು ಆದರೆ ಈ ಪ್ರಕರಣವು ದೊಡ್ಡ ಪಿತೂರಿಯನ್ನು ಒಳಗೊಂಡಿದೆಯೇ ಎಂದು ಪರಿಶೀಲಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ ಮೂಲಗಳು ಇಲ್ಲಿ ಹೆಚ್ಚು ಸ್ಪೋಟಕ ವಸ್ತುಗಳನ್ನು ಬಳಸಿರಬಹುದು ಎಂದು ಸೂಚಿಸಿದವು. ಪ್ರಾಥಮಿಕ ಸಂಶೋಧನೆಗಳು ಹೆಕ್ಸಾಹೈಡೋ ಟ್ರಿನಿಟ್ರೋ ಟ್ರೈಜಿನ್ ಎಂಬ ಹೆಚ್ಚಿನ ಸ್ಫೋಟಕ ವಸ್ತುಗಳಿಗೆ ಸಂಬಂಧಿಸಿದ ಸಂಯುಕ್ತದ ಬಳಕೆ ಮಾಡಿರುವುದನ್ನು ಸೂಚಿಸಿದವು. ಈ ಬಗ್ಗೆ ಹೆಚ್ಚಿನ ವಿಶ್ಲೇಷಣೆ ನಡೆಯುತ್ತಿದೆ ಎಂದು ವಿಧಿವಿಜ್ಞಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಸಾವಲ್ಲೂ ಸಾರ್ಥಕತೆ: 10 ತಿಂಗಳ ಕಂದನಿಂದ 4 ಜನರಿಗೆ ಜೀವದಾನ
ಸ್ಫೋಟದ ನಂತರ, ಬಾಂಬ್ ನಿಷ್ಕ್ರಿಯ ದಳಗಳು, ಅಗ್ನಿಶಾಮಕ ಸಿಬ್ಬಂದಿ ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿ, ಅವಶೇಷಗಳನ್ನು ಸಂಗ್ರಹಿಸಿ ಬಾಂಬ್ ತಯಾರಿಕೆಯಲ್ಲಿ ಬಳಸಲಾಗಿದೆ ಎಂದು ಶಂಕಿಸಲಾದ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡವು. ಈ ಮೂರಂತಸ್ಥಿನ ಬಾಡಿಗೆ ಮನೆಯಲ್ಲಿದ್ದ ನಿವಾಸಿಗಳು ಈ ಕಾನೂನುಬಾಹಿರ ಚಟುವಟಿಕೆಯ ಬಗ್ಗೆ ನಮಗೆ ತಿಳಿದಿರಲಿಲ್ಲ. ನಮಗೆ ಯಾವುದೇ ಕಲ್ಪನೆ ಇರಲಿಲ್ಲ. ಈ ಕೃತ್ಯದಿಂದ ಎಲ್ಲರ ಜೀವಗಳು ಅಪಾಯಕ್ಕೀಡಾಗುತ್ತಿದ್ದವು ಎಂದು ಹೇಳಿದ್ದಾರೆ.
ಮಲಿಕ್ ಒಬ್ಬಂಟಿಯಾಗಿ ಕೃತ್ಯ ಎಸಗಿದ್ದಾನೆಯೇ ಅಥವಾ ಸಹಚರರು ಇದ್ದಾರೆಯೇ ಮತ್ತು ಈ ಬಾಂಬ್‌ಗಳನ್ನು ಕ್ರಿಮಿನಲ್ ಅಥವಾ ರಾಜಕೀಯ ಹಿಂಸಾಚಾರಕ್ಕೆ ಬಳಕೆಗೆ ಉದ್ದೇಶಿಸಲಾಗಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಯ ನಂತರ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿತ್ತು. ಈ ಮಧ್ಯೆ ಸ್ಫೋಟದ ಕ್ಷಣಗಳು ಸೆರೆಯಾದ ವೀಡಿಯೋ ವೈರಲ್ ಆಗಿದ್ದು, ಮೇಲ್ಛಾವಣಿ ಮೇಲೆ ಜ್ವಾಲೆ ಏಳುವುದನ್ನು ಕಾಣಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ