Makhi Janata Party: ಆಗ ಸಿಜೆಪಿ, ಈಗ ಎಂಜೆಪಿ! ಸಿಜೆಐ ಹೇಳಿಕೆಯಿಂದ ಹುಟ್ಟಿಕೊಂಡ ಮತ್ತೊಂದು ಹೊಸ ಪಾರ್ಟಿ!

Published : Oct 14, 2026, 02:10 PM ISTUpdated : Oct 14, 2026, 02:51 PM IST
Makhi Janata Party

ಸಾರಾಂಶ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ 'ನೋಣ' ಕುರಿತ ಹೇಳಿಕೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ 'ಮಖಿ ಜನತಾ ಪಾರ್ಟಿ' (MJP) ಎಂಬ ಹೊಸ ಸಂಘಟನೆ ಹುಟ್ಟಿಕೊಂಡಿದೆ. ಕಾಕ್ರೋಚ್ ಜನತಾ ಪಾರ್ಟಿ (CJP) ಮಾದರಿಯಲ್ಲೇ ಆರಂಭವಾದ ಇದು, ಕೇವಲ 72 ಗಂಟೆಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಪಡೆದು ವೈರಲ್ ಆಗಿದೆ.

ಇತ್ತೀಚೆಗೆ ಕಾಕ್ರೋಚ್ ಜನತಾ ಪಾರ್ಟಿ(CJP) ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ವಿಚಾರಣೆ ಸಂಬಂಧ ಭಾರತದ ಮುಖ್ಯ ನ್ಯಾಯಮೂರ್ತಿಗಳು 'ನೋಣಗಳನ್ನ ಹೊಡೆಯಲು ಸುತ್ತಿಗೆ ಬಳಸಬಾರದು' ಎಂಬ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಬಳಿಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಾತ್ಮಕವಾಗಿ 'ಮಖಿ ಜನತಾ ಪಾರ್ಟಿ(MJP) ಎಂಬ ಹೊಸ ಸಂಘಟನೆ ಹುಟ್ಟಿಕೊಂಡಿದೆ. ಗಮನಿಸಬೇಕಾದ ಸಂಗತಿಯೆಂದರೆ ಈ ಹಿಂದೆ ನ್ಯಾಯಮೂರ್ತಿಗಳ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಸಿಜೆಪಿ(ಕಾಕ್ರೋಚ್ ಜನತಾ ಪಾರ್ಟಿ) ಆರಂಭವಾಗಿತ್ತು. ಇದೀಗ ಮತ್ತೆ ಅದೇ ಮಾದರಿಯಲ್ಲಿ ಮಖಿ ಜನತಾ ಪಾರ್ಟಿ(MJP) ಆರಂಭವಾಗಿದೆ.

ಸಿಜೆಐ ಹೇಳಿಕೆಯಿಂದ ಮತ್ತೊಂದು ಪಾರ್ಟಿ ಉದಯ

ಆರಂಭದಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ ಒಂದು ಮೆಮೆ ಪೇಜ್‌ನಂತೆ ಹುಟ್ಟಿಕೊಂಡಿತು. ರಾತ್ರಿ ಬೆಳಗಾಗುವುದರೊಳಗೆ ಲಕ್ಷಾಂತರ ಫಾಲೋವರ್ಸ್ ಪಡೆದುಕೊಂಡು ಪ್ರತಿಭಟನೆ ಮತ್ತು ಚಳವಳಿಯ ರೂಪ ಪಡೆದುಕೊಂಡಿತ್ತು. ಅದೇ ರೀತಿಯಲ್ಲಿ ಇದೀಗ ಮಂಗಳವಾರದಂದು ಎಂಜೆಪಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ 72 ಗಂಟೆಗಳಲ್ಲಿ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು,3.3 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಗಳಿಸಿರುವುದಾಗಿ ಹೇಳಿಕೊಂಡಿದೆ. ಈ ಸಂಘಟನೆಯ ಸಂಸ್ಥಾಪಕ ಆರ್ಯನ್ ಎಂಬ ವಿದ್ಯಾರ್ಥಿ ಎಂದು ಅದರ ಸಾಮಾಜಿಕ ಜಾಲತಾಣದ ಪುಟದಲ್ಲಿ ತಿಳಿಸಲಾಗಿದೆ. ಅಲ್ಲದೆ, ಸಂಘಟನೆಯ ಪರವಾಗಿ ಮಾತನಾಡಲು ವಕ್ತಾರರ ಹುಡುಕಾಟದಲ್ಲಿರುವುದಾಗಿಯೂ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿಕೊಂಡಿದೆ.

ಖಾತೆಯ ಮಾಹಿತಿಯ ಪ್ರಕಾರ ಈ ಪುಟವು 2021ರ ಜೂನ್‌ನಲ್ಲಿ ಇನ್‌ಸ್ಟಾಗ್ರಾಂಗೆ ಸೇರಿದೆ. ಈಗಿನ ‘makhijantaparty.ig’ ಎಂಬ ಹೆಸರನ್ನು ಇಟ್ಟುಕೊಳ್ಳುವ ಮೊದಲು ಎಂಟು ಬಾರಿ ಬಳಕೆದಾರರ ಹೆಸರನ್ನು ಬದಲಾಯಿಸಲಾಗಿದೆ.

ಸಿಜೆಐ ಹೇಳಿಕೆಯಿಂದ ಪ್ರೇರಣೆ ಪಡೆದ ಎಂಜೆಪಿ!

ಎಂಜೆಪಿ ಹೆಸರಿನ ಹಿಂದಿನ ಪ್ರೇರಣೆ ಸಿಜೆಐ ಸೂರ್ಯಕಾಂತ್ ಅವರ ಇತ್ತೀಚಿನ ‘ನೊಣ ಹೊಡೆಯಲು ಸುತ್ತಿಗೆ ಬಳಸಬಾರದು’ ಎಂಬ ಹೇಳಿಕೆ ಎಂದು ಸಂಘಟನೆಯ ಪೋಸ್ಟ್‌ವೊಂದು ತಿಳಿಸಿದೆ.

ಅಕ್ಟೋಬರ್ 9ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಸಿಜೆಐ ಅವರ ಈ ಹೇಳಿಕೆ ವರದಿಯಾಗಿತ್ತು. ಅಕ್ಟೋಬರ್ 10ರಂದು ನಿಗದಿಯಾಗಿದ್ದ ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ನಿರ್ಧಾರದ ಔಚಿತ್ಯವನ್ನು ನ್ಯಾಯಾಲಯ ಪ್ರಶ್ನಿಸಿತ್ತು.

ಭದ್ರತಾ ಕಾರಣಗಳಿಗಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನಿಯಂತ್ರಿಸಬಹುದು. ಆದರೆ ಇಡೀ ಸಾರಿಗೆ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಇದೇ ವೇಳೆ, ‘ಒಂದು ನೊಣವನ್ನು ಹೊಡೆಯಲು ಸುತ್ತಿಗೆಯನ್ನು ಬಳಸಬಾರದು’ ಎಂದು ಅಧಿಕಾರಿಗಳಿಗೆ ಸೂಚಿಸಿತ್ತು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂಜೆಪಿ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದಿದೆ: ಸಿಜೆಐ ಅವರೇ 'ನೊಣವನ್ನು ಹೊಡೆಯಲು ಸುತ್ತಿಗೆ ಬಳಸಬಾರದು' ಎಂದು ಹೇಳಿದ್ದಾರೆ. ಈಗ ನೊಣ ಕೂಡ ನಾವು ಯಾರಿಗೂ ಕಡಿಮೆಯಿಲ್ಲ ಎಂದು ಹೇಳುತ್ತದೆ'

ಸಿಜೆಪಿ ಮತ್ತು ನೇಹಾ ಬೋರಾಗೆ ಎಂಜೆಪಿ ಬೆಂಬಲ ನೀಡಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಸದಸ್ಯೆ ನೇಹಾ ಬೋರಾ ಅವರಿಗೂ ಎಂಜೆಪಿ ಬೆಂಬಲ ವ್ಯಕ್ತಪಡಿಸಿದೆ. ಕಾಕ್ರೋಚ್ ಜನತಾ ಪಾರ್ಟಿ (CJP) ಜೊತೆಗೂ ಒಗ್ಗಟ್ಟು ಪ್ರದರ್ಶಿಸಿದೆ.

ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ನೇಹಾ ಬೋರಾ ಅವರ ಧೈರ್ಯ ಮತ್ತು ಹೋರಾಟವನ್ನು ಬೆಂಬಲಿಸುವುದಾಗಿ ಸಂಘಟನೆ ತಿಳಿಸಿದೆ. ಪ್ರಶ್ನೆಗಳನ್ನು ಕೇಳುವುದು ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವಂತೆ ಒತ್ತಾಯಿಸುವುದು ಪ್ರಜಾಪ್ರಭುತ್ವಕ್ಕೆ ಅಗತ್ಯ ಎಂದು ಹೇಳಿದೆ.

ಇತ್ತೀಚಿನ ಪ್ರತಿಭಟನೆಗೆ ಸಂಬಂಧಿಸಿದಂತೆ, ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲಾಗಿತ್ತು ಎಂಬುದನ್ನೂ ಸಂಘಟನೆ ಒಪ್ಪಿಕೊಂಡಿದೆ. ನಾಗರಿಕರು ತಮ್ಮ ಪ್ರತಿಭಟನೆಯ ಹಕ್ಕನ್ನು ಜವಾಬ್ದಾರಿಯುತವಾಗಿ ಮತ್ತು ಕಾನೂನಿನ ವ್ಯಾಪ್ತಿಯಲ್ಲಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದೆ.

ಸಾಮಾನ್ಯ ನಿಲುವು ರೂಪಿಸಿಕೊಳ್ಳುವ ಅಥವಾ ಜಂಟಿಯಾಗಿ ಕಾರ್ಯಾಚರಣೆ ನಡೆಸುವ ಸಾಧ್ಯತೆ ಕುರಿತು ಚರ್ಚಿಸಲು ಕಾಕ್‌ರೋಚ್ ಜನತಾ ಪಾರ್ಟಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವುದಾಗಿಯೂ ಎಂ.ಜೆ.ಪಿ ತಿಳಿಸಿದೆ. ಆದರೆ, ಇದು ಎರಡೂ ಸಂಘಟನೆಗಳ ಪರಸ್ಪರ ಒಪ್ಪಿಗೆಯನ್ನು ಅವಲಂಬಿಸಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಜಂತರ್ ಮಂತರ್‌ನಲ್ಲಿ ಸಿಜೆಪಿ ನಾಯಕರ ಬಂಧನದ ಬಗ್ಗೆ ಪ್ರಶ್ನೆ

ಜಂತರ್ ಮಂತರ್‌ನಲ್ಲಿ ನಿಯಮ ಉಲ್ಲಂಘಿಸಿ ಭಾರತದ ರಾಷ್ಟ್ರಧ್ವಜ ಹಾರಿಸಿದ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿಯ ನಾಯಕರಾದ ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ವಶಕ್ಕೆ ಪಡೆದ ಕ್ರಮವನ್ನೂ ಎಂಜೆಪಿ ಪ್ರಶ್ನಿಸಿದೆ. ಮಂಗಳವಾರ ಹೊರಡಿಸಿದ ಹೇಳಿಕೆಗೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ವಿದ್ಯಾರ್ಥಿ ಎಂದು ಗುರುತಿಸಲಾದ ಆರ್ಯನ್ ಸಹಿ ಹಾಕಿದ್ದಾರೆ. ಜಂತರ್ ಮಂತರ್ ಪ್ರತಿಭಟನೆ ನಡೆಸಲು ನಿಗದಿಪಡಿಸಿರುವ ಸ್ಥಳವಾಗಿದೆ ಎಂದು ಹೇಳಿರುವ ಸಂಘಟನೆ, ಜನರ ಗಮನಕ್ಕೆ ಬಾರದ ದೂರದ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವಂತೆ ನಿರ್ಬಂಧಿಸಿದರೆ ಅದರ ಪರಿಣಾಮ ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟಿದೆ.

ಆಗ ಸಿಜೆಪಿ, ಈಗ ಎಂಜೆಪಿ

ದೇಶದಲ್ಲಿ ಪರೀಕ್ಷಾ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಜುಲೈನಲ್ಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆಗಳ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಘಟನೆಯೂ ಈ ಚಳವಳಿಯ ಬೆಳವಣಿಗೆಯೊಂದಿಗೆ ಸಂಬಂಧ ಹೊಂದಿದೆ.

ಈಗ ಸಿಜೆಐ ಅವರ ‘ನೊಣ ಹೊಡೆಯಲು ಸುತ್ತಿಗೆ ಬಳಸಬಾರದು’ ಎಂಬ ಹೇಳಿಕೆಯ ಬಳಿಕ ಮಖಿ ಜನತಾ ಪಾರ್ಟಿ ಹುಟ್ಟಿಕೊಂಡಿದ್ದು, ಕಾಕ್‌ರೋಚ್ ಜನತಾ ಪಾರ್ಟಿಯೊಂದಿಗೆ ಕೈಜೋಡಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ಆರಂಭವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಷ್ಯಾದಿಂದ ಪ್ರಿಯಕರನಿಗಾಗಿ ಬಿಹಾರಕ್ಕೆ ಬಂದ ಯುವತಿ! ಈ ಪ್ರೇಮಕಥೆಯ ಹಿಂದಿದೆ ರೋಚಕ ತಿರುವು
ದೆಹಲಿಗೆ ಹಾರಿದ ವಿಮಾನದಿಂದ ಹೈಜಾಕ್ ಸಂದೇಶ, ಜೈಪುರದಲ್ಲಿ ತುರ್ತುಭೂಸ್ಪರ್ಶ ಘಟನೆಯಲ್ಲಿ ಬಿಗ್ ಟ್ವಿಸ್ಟ್