UP Election 2022: ಮಕರ ಸಂಕ್ರಾಂತಿ ಈ ಬಾರಿ ಇತಿಹಾಸವಾಗುತ್ತೆ, ಯಾಕಂದ್ರೆ ಬಿಜೆಪಿಯ ಅಂತ್ಯವಾಗುತ್ತೆ!

By Suvarna NewsFirst Published Jan 14, 2022, 4:19 PM IST
Highlights

ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ 7 ಬಿಜೆಪಿ ಮಾಜಿ ಶಾಸಕರು ಎಸ್ ಪಿಗೆ ಸೇರ್ಪಡೆ
ಲಖನೌದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
ಅನುಮತಿಯಿಲ್ಲದೆ ನಡೆದ ಕಾರ್ಯಕ್ರಮದ ಬಗ್ಗೆ ಜಿಲ್ಲಾಧಿಕಾರಿಯಿಂದ ನೋಟಿಸ್

ಲಖನೌ (ಜ. 14): ಈ ಬಾರಿಯ ಮಕರ ಸಂಕ್ರಮಣ (Makar Sankranti) ಇತಿಹಾಸವಾಗುತ್ತೆ. ಯಾಕೆಂದರೆ ಉತ್ತರ ಪ್ರದೇಶದಲ್ಲಿ ಈಗಿನಿಂದ ಬಿಜೆಪಿಯ (BJP) ಅಂತ್ಯ ಆರಂಭವಾಗುತ್ತದೆ ಎಂದು ಉತ್ತರ ಪ್ರದೇಶದ ಸರ್ಕಾರದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya), ಸಮಾಜವಾದಿ ಪಕ್ಷಕ್ಕೆ (Samajwadi Party)ಸೇರ್ಪಡೆಗೊಳ್ಳುವ ವೇಳೆ ಹೇಳಿದರು. ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ಬಿಜೆಪಿಯ 7 ಮಾಜಿ ಶಾಸಕರು ಲಖನೌದಲ್ಲಿ (Lucknow ) ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಸಮಾಜವಾದಿ ಪಕ್ಷವನ್ನು ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಸ್ವಾಮಿ ಪ್ರಸಾದ ಮೌರ್ಯ, ತಮ್ಮ ಭಾಷಣದುದ್ದಕ್ಕೂ ಭಾರತೀಯ ಜನತಾ ಪಕ್ಷ ಹಾಗೂ ಅವರ ಕಾರ್ಯವೈಖರಿಯನ್ನು ಟೀಕೆ ಮಾಡಿದರು.

ಬಿಜೆಪಿ ಪಕ್ಷದಲ್ಲಿದ್ದವರು ಕುಂಭಕರ್ಣನ ನಿದ್ರೆಯಲ್ಲಿದ್ದಾರೆ. ಆದರೆ, ಅವರಿಗೆ ಈಗ ನಿದ್ರೆ ಬರುವುದಿಲ್ಲ. ಇದಕ್ಕೂ ಮುನ್ನ ನಾವು ಹೇಳುತ್ತಿದ್ದ ಯಾವ ದೂರುಗಳನ್ನೂ ಅವರು ಕೇಳುತ್ತಿರಲಿಲ್ಲ ಎಂದು ಯೋಗಿ ಸರ್ಕಾರದಲ್ಲಿ ಕಾರ್ಮಿಕ, ಉದ್ಯೋಗ, ಸಮನ್ವಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸ್ವಾಮಿ ಪ್ರಸಾದ್ ಮೌರ್ಯ ಟೀಕಿಸಿದ್ದಾರೆ. ನಾನು ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಸಾಕಷ್ಟು ಪ್ರಶ್ನೆಗಳನ್ನು ಎದುರಿಸುತ್ತಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಯಾಕೆ ನೀವು ರಾಜೀನಾಮೆ ನೀಡಲಿಲ್ಲ. ಮಗನಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ನಾನು ಪಕ್ಷವನ್ನು ತೊರೆದಿದ್ದೇನೆ ಎಂಬೆಲ್ಲಾ ಮಾತುಗಳು ಬರುತ್ತಿವೆ. ಆದರೆ, ಬಿಜೆಪಿ ಮಾತ್ರ ಬಡವರು, ಹಿಂದುಳಿದವರು, ದಲಿತರು ಮತ್ತು ಅಲ್ಪ ಸಂಖ್ಯಾತರ ಕಣ್ಣಿಗೆ ಮಣ್ಣೆರಚುವ ಮೂಲಕ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದಿದೆ. 

ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿರುವ ಯೋಗಿ ಆದಿತ್ಯನಾಥ್ (Yogi adityanath), ಪಾಪಗಳನ್ನು ಮಾಡುವ ಮೂಲಕ ಹಿಂದುಗಳ ಪರವಾಗಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ದೇಶದ ಜನ ಹಾಗೂ ಉತ್ತರ ಪ್ರದೇಶದ ಜನರನ್ನು ಬಿಜೆಪಿ ದಾರಿತಪ್ಪಿಸಿದೆ ಎಂದರು. ಇದೇ ವೇಳೆ ತಾವು ಯಾವ ಪಕ್ಷವನ್ನು ತೊರೆಯುತ್ತೇನೋ ಆ ಪಕ್ಷ ಉತ್ತರ ಪ್ರದೇಶದಲ್ಲಿ ನಿರ್ನಾಮವಾಗಿದೆ ಎಂದು ಹೇಳಿದರು. "ನಾನು ಯಾವ ಪಕ್ಷವನ್ನು ತೊರೆಯುತ್ತೇನೋ ಆ ಪಕ್ಷದ ಇತಿಹಾಸವೇ ಇರುವುದಿಲ್ಲ.ಅದಕ್ಕೆ ಮಾಯಾವತಿ ಜೀವಂತ ಉದಾಹರಣೆ. ಬಾಬಾಸಾಹೇಬ್ ಹಾಗೂ ಕಾಂಶಿ ರಾಮ್ ಅವರ ಸಿದ್ಧಾಂತವನ್ನು ಬದಿಗೊತ್ತುವ ಪ್ರಯತ್ನ ಮಾಡಿದರು. ಅಹಂಕಾರ ಆಕೆಯಲ್ಲಿತ್ತು. ಅಂದು ಉತ್ತರ ಪ್ರದೇಶದಲ್ಲಿ ಬಿಜೆಪಿ ನಂ.1 ಆಗಿತ್ತು. ಬಿಜೆಪಿ ನಂ.3 ಅಲ್ಲಿತ್ತು. ಆದರೆ, ನಾನು ಬಿಎಸ್ ಪಿ ತೊರೆದು ಬಿಜೆಪಿಯನ್ನು ಸೇರಿದ ಬಳಿಕ ಪಕ್ಷ ಅಧಿಕಾರಕ್ಕೆ ಬಂದಿತು. ಆದರೆ, ಈಗ ಬಿಜೆಪಿಗೆ ಹೇಳೋದೇನಂದ್ರೆ ಅವರ ಕೆಟ್ಟ ದಿನಗಳು ಈಗ ಆರಂಭ. ನನ್ನೊಂದಿಗೆ ಇನ್ನೂ ಹಲವರು ಬರುವವರಿದ್ದಾರೆ.  ರಾಜೀನಾಮೆ ಪ್ರಕ್ರಿಯೆ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ' ಎಂದು ತಿಳಿಸಿದರು.

UP Elections: '20ರವರೆಗೆ ಪ್ರತಿದಿನ ಒಬ್ಬ ಸಚಿವ, 3-4 ಶಾಸಕರಿಂದ ಬಿಜೆಪಿಗೆ ರಾಜೀನಾಮೆ'
400 ಸೀಟ್ ಗಳನ್ನು ಗೆಲ್ಲುತ್ತೇವೆ: ಮಾರ್ಚ್ 11 ಕ್ಕೆ ಯೋಗಿ ಆದಿತ್ಯನಾಥ್ ಅವರಿಗೆ ಗೋರಖ್ ಪುರದ ಟಿಕೆಟ್ ಕಳಿಸುತ್ತೇನೆ. ಆದ್ರೆ ನಿಮ್ಮೆಲ್ಲರ ಸೇರ್ಪಡೆಯಿಂದ ಇವತ್ತೇ ಅವರು ಲಖನೌದಿಂದ ಗೋರಖ್ ಪುರಕ್ಕೆ ಹೋಗುವ ಸಿದ್ಧತೆಯಲ್ಲಿದ್ದಾರೆ. ಯಾಕಂದ್ರೆ ಅಲ್ಲಿ ಬಿಜೆಪಿಯ ಹಲವಾರು ವಿಕೆಟ್ ಗಳು ಉರುಳುತ್ತಿವೆ. ಯೋಗಿಗೆ ಕ್ರಿಕೆಟ್ ಆಡಲು ಬರುವುದಿಲ್ಲ. ಬಂದ್ರೂ ಈಗಾಗಲೇ ಹಲವಾರು ಕ್ಯಾಚ್ ಮಿಸ್ ಆಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav )ಲೇವಡಿ ಮಾಡಿದರು. ಬಿಜೆಪಿ ಸರ್ಕಾರ ಉತ್ತರ ಪ್ರದೇಶವನ್ನು ಸಂಪೂರ್ಣವಾಗಿ ಹಾಳು ಮಾಡಿದೆ. ಅವರಲ್ಲಿ ಹೆಮ್ಮೆ ಪಡುವಂಥ ಯಾವ ಸಾಧನೆಗಳೂ ಇಲ್ಲ. ಪೆಟ್ರೋಲ್-ಡೀಸೆಲ್ ದರಗಳು ಗಗನಕ್ಕೆ ಮುಟ್ಟಿವೆ. ಜನಗಳನ್ನು ಎಲ್ಲರೂ ಲೂಟಿ ಮಾಡುತ್ತಿದ್ದಾರೆ ಎಂದರು. ಎಲ್ಲರೂ ನಮ್ಮೊಂದಿಗೆ ಜೊತೆಯಾದರೆ ಖಂಡಿತವಾಗಿ 400 ಸೀಟ್ ಗಳನ್ನು ನಾವು ಗೆಲ್ಲುತ್ತೇವೆ. ಸ್ವಾಮಿ ಪ್ರಸಾದ್ ಮೌರ್ಯ ನಮ್ಮೊಂದಿಗೆ ಜೊತೆಯಾಗಿದ್ದನ್ನು ಸಹಿಸದ ಬಿಜೆಪಿ ಯಾವುದೋ ಕಾಲದ ಕೇಸ್ ನ ವಿಚಾರದಲ್ಲಿ ಅವರ ಮೇಲೆ ಬಂಧನ ವಾರಂಟ್ ಜಾರಿ ಮಾಡಿದೆ ಎಂಟು ಕಟು ಶಬ್ದಗಳಲ್ಲಿ ಟೀಕಿಸಿದರು.

UP Election 2022: ಅಖಿಲೇಶ್, ಡಿಂಪಲ್ ಆಪ್ತ ಪಂಖೂರಿಗೆ ಕೈ ಟಿಕೆಟ್
ಜಿಲ್ಲಾಧಿಕಾರಿಯಿಂದ ನೋಟಿಸ್ ಜಾರಿ: ಸಮಾಜವಾದಿ ಪಕ್ಷದ ಕಾರ್ಯಕ್ರಮ ಅನುಮತಿಯಿಲ್ಲದೆ ನಡೆದಿದೆ. ಆ ಕಾರಣಕ್ಕಾಗಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್ (Lucknow District Magistrate Abhishek Prakash ) ತಿಳಿಸಿದ್ದಾರೆ. ಪೊಲೀಸ್ ಟೀಮ್ ನ ಜೊತೆ ಜಿಲ್ಲಾಧಿಕಾರಿ ಎಸ್ ಪಿ ಕಚೇರಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಜನವರಿ 15ರವರೆಗೂ ಯಾವುದೇ ಸಭೆ, ಸಮಾರಂಭ ನಡೆಸಲು ಚುನಾವಣಾ ಆಯೋಗದಿಂದಲೇ ನಿಷೇಧವಿದೆ. ಆ ಕಾರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

click me!