
ಪುಣೆ (ಜೂ.27): ಜೂನ್ 28 ರಂದು ನಡೆಯಬೇಕಿದ್ದ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (TET 2025) ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಮಂಡಳಿ (MSCE) ದಿಢೀರ್ ಮುಂದೂಡಿದೆ. ಪರೀಕ್ಷೆ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳಷ್ಟೇ ಬಾಕಿ ಇರುವಾಗ ಥಾಣೆ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಗಂಭೀರ ಆರೋಪಗಳು ಮತ್ತು ಆತಂಕಗಳು ಎದುರಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಥಾಣೆ ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೆಲವು ಪ್ರಶ್ನೆಗಳು ಅಸಲಿ ಟಿಇಟಿ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗುತ್ತಿವೆ ಎಂಬ ಪ್ರಾಥಮಿಕ ವರದಿಗಳ ಬೆನ್ನಲ್ಲೇ ಈ ಕ್ರಮ ಜರುಗಿಸಲಾಗಿದೆ. ಸದ್ಯ ವಶಪಡಿಸಿಕೊಳ್ಳಲಾದ ಪತ್ರಿಕೆ ಅಸಲಿ ಪ್ರಶ್ನೆ ಪತ್ರಿಕೆಯೋ ಅಥವಾ ಕೇವಲ ಮಾದರಿ ಪತ್ರಿಕೆಯೋ (Mock Test Paper) ಎಂಬುದನ್ನು ಶಿಕ್ಷಣ ಇಲಾಖೆ ಪರಿಶೀಲಿಸುತ್ತಿದೆ.
ಪರೀಕ್ಷಾ ಮಂಡಳಿಯ (MSCE) ಮಾಹಿತಿ ಪ್ರಕಾರ, ಜೂನ್ 27 ರಂದು ಬೆಳಗ್ಗೆ ಪೊಲೀಸರು ರಹಸ್ಯ ಮಾಹಿತಿಯ ಮೇರೆಗೆ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಭರ್ಜರಿ ಜಂಟಿ ದಾಳಿ ನಡೆಸಿದ್ದರು. ಈ ಕಾರ್ಯಾಚರಣೆಯ ಸಮಯದಲ್ಲಿ ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಮಂಡಳಿಯ ಅಧಿಕಾರಿಗಳನ್ನೂ ಸ್ಥಳಕ್ಕೆ ಕರೆಯಿಸಿಕೊಳ್ಳಲಾಗಿತ್ತು. ಅಲ್ಲಿ ಕೆಲವರ ಬಳಿ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳಿರುವುದು ಪತ್ತೆಯಾಗಿದೆ. ಈ ಕುರಿತು ಭಿವಂಡಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಪತ್ರಿಕೆ ಸೋರಿಕೆಯ ಮೂಲ ಮತ್ತು ಅದರ ವ್ಯಾಪ್ತಿಯನ್ನು ಪತ್ತೆ ಹಚ್ಚಲು ತೀವ್ರ ತನಿಖೆ ಆರಂಭಿಸಲಾಗಿದೆ.
ಪ್ರಶ್ನೆ ಪತ್ರಿಕೆ ಲೀಕ್ ಮತ್ತು ಪರೀಕ್ಷೆ ಮುಂದೂಡಿಕೆಯಿಂದ ಆತಂಕಕ್ಕೊಳಗಾಗಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಮಂಡಳಿಯ ಉಪ ಕಮಿಷನರ್ ಪ್ರಿಯಾ ಶಿಂದೆ ಅವರು ನೆಮ್ಮದಿಯ ಸುದ್ದಿ ನೀಡಿದ್ದಾರೆ. "ಈ ಇಡೀ ಹಗರಣದಲ್ಲಿ ಅಭ್ಯರ್ಥಿಗಳ ಯಾವುದೇ ತಪ್ಪಿಲ್ಲ. ಹಾಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವವರು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸುವ ಅಥವಾ ಮರು-ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಥಾಣೆ ಮತ್ತು ಭಿವಂಡಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ವರದಿಗಳ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಇಂತಹ ಬೃಹತ್ ಪ್ರಮಾಣದ ಪರೀಕ್ಷೆಯನ್ನು ಮರು-ಸಂಘಟಿಸಲು ಸಾಮಾನ್ಯವಾಗಿ ಕನಿಷ್ಠ 3 ವಾರಗಳ ಸಮಯ ಬೇಕಾಗುತ್ತದೆ. ಶೀಘ್ರದಲ್ಲೇ ಪರೀಕ್ಷೆಯ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಶಿಂದೆ ತಿಳಿಸಿದ್ದಾರೆ.
ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪರೀಕ್ಷಾ ಮಂಡಳಿ ಎಚ್ಚರಿಸಿದೆ. ಪೊಲೀಸರು ಈಗಾಗಲೇ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದರ ಜೊತೆಗೆ ಪರೀಕ್ಷಾ ಮಂಡಳಿಯು ತನ್ನದೇ ಆದ ಆಂತರಿಕ ತನಿಖೆಯನ್ನು ಆರಂಭಿಸಿದ್ದು, ವರದಿ ಬಂದ ನಂತರ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷಾ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು MSCE ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆರೋಪಗಳು ಅತ್ಯಂತ ಗಂಭೀರವಾಗಿದ್ದರಿಂದ ಜೂನ್ 28 ರ ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. ಒಂದು ವೇಳೆ ಪರಿಶೀಲನೆಯಲ್ಲಿ ವಶಪಡಿಸಿಕೊಂಡ ದಾಖಲೆಗಳು ಅಸಲಿ ಪ್ರಶ್ನೆ ಪತ್ರಿಕೆ ಎಂಬುದು ಸಾಬೀತಾದರೆ, ಶಿಕ್ಷಣ ಇಲಾಖೆಯು ಈ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬಗ್ಗೆ ಯೋಚಿಸಲಿದೆ ಮತ್ತು ಆರೋಪಿಗಳ ವಿರುದ್ಧ ಪೊಲೀಸ್ ಕ್ರಮವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅಧಿಕಾರಿಗಳು ಸೇರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಯಾವುದೇ ಅಪಪ್ರಚಾರ ಅಥವಾ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಕೇವಲ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬರುವ ಪ್ರಕಟಣೆಗಳನ್ನು ಮಾತ್ರ ಗಮನಿಸಿ ಎಂದು MSCE ಅಭ್ಯರ್ಥಿಗಳಿಗೆ ಮನವಿ ಮಾಡಿದೆ. ಪೊಲೀಸರ ಸಂಪೂರ್ಣ ತನಿಖೆ ಮುಗಿದು, ಪರಿಸ್ಥಿತಿಯನ್ನು ಪರಾಮರ್ಶಿಸಿದ ನಂತರವೇ ಹೊಸ ಪರೀಕ್ಷಾ ದಿನಾಂಕವನ್ನು ಘೋಷಿಸಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ