
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಸತ್ತ ವ್ಯಕ್ತಿಯೊಬ್ಬನ ಶವ ಗುರುತಿಸಿದ ಆತನ ಅಪ್ಪ-ಅಮ್ಮ ಆತನ ಶವಸಂಸ್ಕಾರ ಮಾಡಿದ 13ನೇ ದಿನಕ್ಕೆ ವಾಪಸಾಗಿರುವ ವಿಚಿತ್ರ ಘಟನೆ ನಡೆದಿದೆ! ಗಾಜಿಯಾಬಾದ್ ನಿವಾಸಿ ಗಿರಿಧರ ಸಿಂಗ್ ಎನ್ನುವ 40 ವರ್ಷ ವಯಸ್ಸಿನ ವ್ಯಕ್ತಿಯ ವಿಚಿತ್ರ ಸ್ಟೋರಿ ಇದಾಗಿದೆ. ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿ, ನಂತರ ಜೈಲಿನಿಂದ ಬಿಡುಗಡೆಯಾಗಿದ್ದ ಗಿರಿಧರನದ್ದೇ ಎನ್ನಲಾದ ಶವವನ್ನು ಪಾಲಕರು ತಮ್ಮದೇ ಮಗ ಎಂದು ಗುರುತಿಸಿ, ಅಂತ್ಯಸಂಸ್ಕಾರವನ್ನೂ ಮಾಡಿದ್ದರು. ಆ ಬಳಿಕ 13ನೇ ದಿನ ಆತ ದಿಢೀರ್ ಪ್ರತ್ಯಕ್ಷನಾದಾಗ ಪೋಷಕರು ಬೇಸ್ತು ಬಿದ್ದಿರುವ ಘಟನೆ ನಡೆದಿದೆ.
ಗಿರಿಧರ್ ಸಿಂಗ್ ಗಾಜಿಯಾಬಾದ್‌ನ ವೈಶಾಲಿ ನಿವಾಸಿ. ಮೇ 16 ರಂದು, ಶೈಲೇಶ್ ವರ್ಮಾ ಮತ್ತು ಅವರ ಸಹೋದರರು ಗಿರಿಧರ್ ವಿರುದ್ಧ ದೂರು ದಾಖಲಿಸಿದ್ದರು. ಗಿರಿಧರ್, ಶೈಲೇಶ್ ಎಂಬುವವನ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ, ಇದರ ಪರಿಣಾಮವಾಗಿ ಆತನ ತಲೆಗೆ 12 ಹೊಲಿಗೆಗಳು ಹಾಕುವಂತಾಗಿದೆ ಎಂದು ದೂರು ದಾಖಲು ಮಾಡಿದ್ದರು. ಈ ಘಟನೆಯ ನಂತರ, ಗಿರಿಧರ್ನ ವಿರುದ್ಧ ಎಫ್ಐಆರ್ ದಾಖಲಿಸಿಕೊಡಿದ್ದ ಪೊಲೀಸರು, ದಾಸ್ನಾ ಜೈಲಿಗೆ ಕಳುಹಿಸಿ ಕೆಲವು ದಿನಗಳ ನಂತರ ಬಿಡುಗಡೆ ಮಾಡಿದ್ದರು. ಬಿಡುಗಡೆಯ ಬಳಿಕ ಗಿರಿಧರ್ ಸಿಂಗ್ ನಾಪತ್ತೆಯಾಗಿದ್ದ!
ಕುಟುಂಬಸ್ಥರು ಆತನನ್ನು ಎಲ್ಲೆಡೆ ಹುಡುಕಿ ಸಾಕಾದರು. ಎಷ್ಟು ದಿನವಾದರೂ ಮಗ ವಾಪಸ್ ಬರದಿದ್ದದ್ದನ್ನು ನೋಡಿದ ಪಾಲಕರು ಕಾಣೆಯಾಗಿರುವ ಬಗ್ಗೆ ಪೊಲೀಸರಲ್ಲಿ ದೂರು ಸಲ್ಲಿಸಿದರು. ಪೊಲೀಸರು ತನಿಖೆ ಪ್ರಾರಂಭಿಸಿದರು. ಆ ಸಮಯದಲ್ಲಿ, ಅಲ್ಲಿಯ ಮಸ್ಸೂರಿ ಕಾಲುವೆಯಲ್ಲಿ ಶವವೊಂದು ಪತ್ತೆಯಾಗಿತ್ತು. ಪೊಲೀಸರು ಶವದ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದರು. ಕುಟುಂಬವು ಅದನ್ನು ನೋಡಿದಾಗ, ತಮ್ಮದೇ ಮಗ ಎಂದುಬಿಟ್ಟರು. ಮಗನನ್ನು ಸರಿಯಾಗಿ ಗುರುತಿಸಿದ ಕಾರಣದಿಂದ ಡಿಎನ್‌ಎ ಪರೀಕ್ಷೆಯನ್ನೂ ಪೊಲೀಸರು ಮಾಡಲಿಲ್ಲ. ಶವವನ್ನು ಹಸ್ತಾಂತರಿಸಿದರು.
ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ರೋಧಿಸಿದ ಕುಟುಂಬಸ್ಥರು ಆ ಶವದ ಅಂತ್ಯಸಂಸ್ಕಾರವನ್ನೂ ಮಾಡಿದರು. ಮಗನ ಸಾವಿನ ನೋವು ಇನ್ನೂ ಮರೆಯಾಗಿರಲಿಲ್ಲ. 13ನೇ ದಿನಕ್ಕೆ ತಿಥಿ ಕಾರ್ಯವೂ ಮುಗಿದ ಬಳಿಕ ಒಬ್ಬಾತ ಬಂದು ಮನೆಯ ಬಾಗಿಲು ತಟ್ಟಿದ. ಮನೆಯವರು ಬಾಗಿಲು ತೆರೆದಾಗ ಆಕಾಶವೇ ಕಳಚಿಬಿದ್ದ ಅನುಭವವಾಯ್ತು. ಆಶ್ಚರ್ಯ, ಭಯ, ಖುಷಿ, ದಿಗ್ಭ್ರಮೆ ಎಲ್ಲವೂ ಆಯಿತು. ಏಕೆಂದರೆ, ಆತ ಶವಸಂಸ್ಕಾರ ಮಾಡಿದ್ದ ಇವರ ಮಗ ಗಿರಿಧರನೇ ಆಗಿದ್ದ.
ಪೊಲೀಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಮೃತದೇಹವು ಗಿರಿಧರ್ ಅವರದ್ದೇ ಎಂದು ಕುಟುಂಬ ಹೇಳಿಕೊಂಡಿತ್ತು. ಅವರಿಗೆ ಸಂಪೂರ್ಣವಾಗಿ ಖಚಿತವಾಗಿತ್ತು. ಸಣ್ಣದೊಂದು ಸಂದೇಹವಿದ್ದರೆ, ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಅದು ಹಾಗಾಗಲಿಲ್ಲಲ್ಲ, ಮತ್ತು ನಾವು ಅದನ್ನು ಒಪ್ಪಿಕೊಂಡೆವು. ಈಗ ಪ್ರಕರಣದ ಮರುತನಿಖೆ ನಡೆಸುತ್ತಿದ್ದೇವೆ ಮತ್ತು ಗಿರಿಧರ್ ಕುಟುಂಬವನ್ನು ಪ್ರಶ್ನಿಸುತ್ತೇವೆ. ಜೈಲಿನಿಂದ ಬಿಡುಗಡೆಯಾದ ನಂತರ, ಗಿರಿಧರ ಪಂಜಾಬ್‌ನ ರಾಧಾಸ್ವಾಮಿ ಸತ್ಸಂಗ್ ವ್ಯಾಸ್ ಬಳಿ ಹೋಗಿದ್ದರು ಎನ್ನುವುದು ತಿಳಿದಿದೆ. ಆದ್ದರಿಂದ ಪ್ರಕರಣವನ್ನು ಈಗ ಬೇರೆ ದೃಷ್ಟಿಕೋನದಿಂದ ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ