
ಭಿವಾಂಡಿ: ಇಲ್ಲೊಂದು ಕಡೆ ಪೋಷಕರು ಶಾಲಾ ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಯನ್ನು ಶಾಲೆಯಲ್ಲಿ ನೆಲದ ಮೇಲೆ ಕೂರಿಸಿ ಇತರ ಮಕ್ಕಳ ಮುಂದೆ ಅವಮಾನಿಸಿದಂತಹ ಘಟನೆ ನಡೆದಿದೆ. ಮಹಾರಾಷ್ಟ್ರದ ಭಿವಾಂಡಿಯಲ್ಲಿ ಇರುವ ಸಲಾಹುದ್ದೀನ್ ಅಯ್ಯುಬಿ ಮೆಮೋರಿಯಲ್ ಉರ್ದು ಶಾಲೆಯಲ್ಲಿ ಈ ಘಟನೆ ನಡೆದಿದೆ. ತಂದೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಈ ಶಾಲೆಯಲ್ಲಿ ಓದುತ್ತಿದ್ದ ಫಯಾಜ್ ಖಾನ್ ಎಂಬುವವರ ಮಗ ಫಹಾದ್ ಫಯಾಜ್ ಖಾನ್ಅಳುತ್ತಲೇ ಬಂದು ಅಪ್ಪ ಶಾಲಾ ಫೀಸನ್ನು ನೀನು ಯಾವಾಗ ಕಟ್ತೀಯಾ ಎಂದು ಕೇಳಿದ್ದಾನೆ.
ಶಾಲೆಯಲ್ಲಿ ಫೀಸ್ ಕಟ್ಟದಿರುವ ಕಾರಣಕ್ಕೆ ಶಿಕ್ಷಕರು ಆತನನ್ನು ಇಡೀ ದಿನ ನೆಲದಲ್ಲಿ ಕೂರಿಸಿ ಅವಮಾನಿಸಿದ್ದರಿಂದ ಬಾಲಕ ಕಂಗಾಲಾಗಿದ್ದ, ಶಾಲಾ ಶುಲ್ಕವನ್ನು ಕಟ್ಟದ ಕಾರಣ ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ಆತ ನೆಲದಲ್ಲೇ ಕುಳಿತು ಬರೆಯುವಂತೆ ಮಾಡಿದ್ದಾರೆ ಶಾಲೆಯ ಶಿಕ್ಷಕರು. ಅದು ಫಹಾದ್‌ನ ಮೊದಲ ಸೆಮಿಸ್ಟರ್‌ನ ಮೊದಲ ಪರೀಕ್ಷೆ ಆಗಿತ್ತು. ಪರೀಕ್ಷೆಯ ವೇಳೆ ಶಿಕ್ಷಕರು ಇತರ ಮಕ್ಕಳಿಂದ ಆತನನ್ನು ಪ್ರತ್ಯೇಕಗೊಳಿಸಿದ್ದು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವುದಕ್ಕೆ ಸೂಚಿಸಿದ್ದಾರೆ. ವಿಚಾರ ತಿಳಿದ ಬಾಲಕನ ತಂದೆ ಮಗ ಫಹಾದ್‌ನನ್ನು ಮಾರನೇ ದಿನ ಶಾಲೆಗೆ ಹೋಗುವಂತೆ ತಿಳಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಆಕ್ಟೋಬರ್ 4 ರಂದು ಫಯಾಜ್ ಶಾಲೆಗೆ ಭೇಟಿ ನೀಡಿದ್ದು, ಫಹಾದ್ ಬಗ್ಗೆ ವಿಚಾರಿಸಿದ್ದಾರೆ.
ಫಹಾದ್ 3ನೇ ಫ್ಲೋರ್‌ನಲ್ಲಿ ಕುಳಿತಿದ್ದಾನೆ ಎಂದು ನನಗೆ ಹೇಳಿದರು ಆದರೆ ನನ್ನನ್ನು ಅಲ್ಲಿಗೆ ಹೋಗುವುದಕ್ಕೆ ಬಿಡಲಿಲ್ಲ, ಆದರೂ ನಾನು ಮೇಲೆ ಹೋಗುವಲ್ಲಿ ಯಶಸ್ವಿಯಾದೆ. ಈ ವೇಳೆ ನನ್ನ ಮಗ ನೆಲದ ಮೇಲೆ ನ್ಯೂಸ್ ಪೇಪರ್ ಹಾಸಿ ಆದರ ಮೇಲೆ ಕುಳಿತಿದ್ದ, ಈ ಬಗ್ಗೆ ನಾನು ಪರೀಕ್ಷಾ ಪರಿವೀಕ್ಷಕರನ್ನು ಕೇಳಿದಾಗ ಅವರು ಪ್ರಾಂಶುಪಾಲರ ಬಳಿ ಮಾತನಾಡಲು ಹೇಳಿದರು. ನಂತರ ನಾನು ನನ್ನ ಮಗನನ್ನು ಅಲ್ಲಿಂದ ಕರೆತಂದೆ ಎಂದು ಫಯಾಜ್ ಹೇಳಿದ್ದಾರೆ.
ಪೊಲೀಸರಿಗೆ ದೂರು ನೀಡಿದ ತಂದೆ
ನಂತರ ಫಯಾಜ್ ತಮ್ಮ ಮಗನನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ನಂತರ ಪೊಲೀಸರು ಶಾಲೆಯ ಶಿಕ್ಷಕರು ಹಾಗೂ ಪ್ರಾಂಶುಪಾಲರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇತ್ತ ವಿದ್ಯಾರ್ಥಿ ಪರೀಕ್ಷೆ ಬರೆಯಬೇಕಿದ್ದರಿಂದ ಆತನನ್ನು ಶಾಲೆಗೆ ಕಳುಹಿಸಿದ್ದಾರೆ. ಫಹಾದ್ ಶಾಲಾ ಶುಲ್ಕ 2,500 ರೂಪಾಯಿ ಆಗಿತ್ತು . ಅದರಲ್ಲಿ 1,200 ರೂಪಾಯಿಯನ್ನು ಪಾವತಿ ಮಾಡಿದ್ದೆ. ಆದರೆ ಉಳಿದ 1,300 ರೂಪಾಯಿಯ ಕಾರಣಕ್ಕೆ ಶಾಲೆ ಈಗಾಗಲೇ ಆತನ 9ನೇ ಕ್ಲಾಸ್ ಫಲಿತಾಂಶವನ್ನು ತಡೆ ಹಿಡಿದಿತ್ತು.
ದೇಶದಲ್ಲಿ ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೆಲ ಸಾವಿರ ರೂಪಾಯಿಗಳಲ್ಲಿ ಪೋಷಕರ ಇಡೀ ಶಿಕ್ಷಣವೇ ಮುಗಿದಿದ್ದರೆ ಇತ್ತ ತಮ್ಮ ಮಕ್ಕಳ ಶಿಕ್ಷಣಕ್ಕೆ ವರ್ಷಕ್ಕೆ ಲಕ್ಷಕ್ಕೂ ಅಧಿಕ ರೂಪಾಯಿ ವೆಚ್ಚ ಮಾಡಬೇಕಿದೆ. ಮಹಾನಗರಿಗಳಲ್ಲಿ ಎಲ್‌ಕೆಜಿ ಮಕ್ಕಳ ಶಿಕ್ಷಣವೇ ಲಕ್ಷ ದಾಟಿದೆ. ಶಿಕ್ಷಣ ಇಂದು ಉದ್ಯಮವಾಗಿ ಬದಲಾಗಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ಶಾಲಾ ಶಿಕ್ಷಣದ ಶುಲ್ಕ ಏರಿಕೆಯಾಗುತ್ತಲೇ ಇದೆ. ಯಾವ ರಾಜಕಾರಣಿಗಳು ದಿನದಿಂದ ದಿನಕ್ಕೆ ವರ್ಷದಿಂದ ಏರಿಕೆಯಾಗುತ್ತಿರುವ ಶೈಕ್ಷಣಿಕ ವೆಚ್ಚದ ಬಗ್ಗೆ ಧ್ವನಿ ಎತ್ತುವುದಿಲ್ಲ. ಏಕೆಂದರೆ ಬಹುತೇಕ ರಾಜಕಾರಣಿಗಳು ತಮ್ಮದೇ ಆದ ಶಾಲೆಯನ್ನು ಸ್ಥಾಪಿಸಿ ಅದನ್ನು ಉದ್ಯಮವಾಗಿಸಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ ಹೆಚ್ಚಿಸುವುದಕ್ಕೆ ಅವರು ಪ್ರಯತ್ನಿಸುವುದಿಲ್ಲ, ಇನ್ನೊಂದು ಕಡೆ ಇಷ್ಟೆಲ್ಲಾ ವೆಚ್ಚ ಮಾಡಿದ ನಂತರವೂ ಪೊಷಕರಿಗೆ ನೆಮ್ಮದಿ ಇರುವುದಿಲ್ಲ, ಕೋವಿಡ್ ನಂತರ ಯಾವಾಗ ಶಿಕ್ಷಣವನ್ನು ಆನ್‌ಲೈನ್‌ನಲ್ಲೂ ನೀಡಬಹುದು ಎಂಬ ಹೊಸ ಪ್ಲಾನ್ ಕೆಲಸ ಮಾಡುವುದಕ್ಕೆ ಶುರು ಮಾಡಿತ್ತೋ ಅಂದಿನಿಂದ ಶಾಲೆಗಳಲ್ಲಿ ಶಿಕ್ಷಕರು ವಾಟ್ಸಾಪ್‌ನ ಮೂಲಕ ಮನೆಗೆ ಮಕ್ಕಳ ಹೋಮ್‌ವರ್ಕ್‌ನ್ನು ಕಳುಹಿಸುತ್ತಲೇ ಇರುತ್ತಾರೆ. ಇದರ ಬಗ್ಗೆ ಅಷ್ಟೊಂದು ಅರಿವಿಲ್ಲದ ಅಥವಾ ಅವರನ್ನು ಓದಿಸುವುದಕ್ಕೆ ಸಮಯವಿಲ್ಲದ ಪೋಷಕರು ಮತ್ತೆ ಹೊರಗೆ ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸಿ ಅದಕ್ಕೂ ಹಣ ಸುರಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಶಾಲಾ ಶಿಕ್ಷಣದ ಹೆಚ್ಚುತ್ತಿರುವ ವೆಚ್ಚದಿಂದಾಗಿ ಪೋಷಕರು ತಮ್ಮ ಜೀವಮಾನದ ದೊಡ್ಡ ಭಾಗವನ್ನು ಮಕ್ಕಳ ಶಿಕ್ಷಣಕ್ಕಾಗಿ ತೆಗೆದಿಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: 8ನೇ ಕ್ಲಾಸಲ್ಲಿ ಶಾಲೆ ಬಿಟ್ಟರೂ ಬಿಲಿಯನೇರ್ ಆದವನ ಯಶೋಗಾಥೆ
ಇದನ್ನೂ ಓದಿ: ಗಾಯಗೊಂಡಿದ್ದ ವೃದ್ಧೆಯ ಬಳಿ ಪೊಲೀಸರ ಕರೆದೊಯ್ದು ರಕ್ಷಿಸಿದ ಶ್ವಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ